ಕಲಬುರಗಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪ್ರಥಮ ಬಾರಿಗೆ `ಜಿಲ್ಲಾ ಮಟ್ಟದ ತತ್ವಪದ ಸಾಹಿತ್ಯ ಸಮ್ಮೇಳನ’ವನ್ನು ಏ. 28 ರಂದು ನಗರದ ಕನ್ನಡ ಭವನದ ಆವರಣದಲ್ಲಿರುವ ಸಾಹಿತ್ಯ ಮಂಟಪದಲ್ಲಿ ಏರ್ಪಡಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಹೊಸದೊಂದು ಸಾಹಿತ್ಯ ಸಾಂಸ್ಕøತಿಗೆ ನಾಂದಿ ಹಾಡಿದಂತಾಗಿದೆ.
ಈ ಸಮ್ಮೇಳನದ ಯಶಸ್ವಿಗಾಗಿ ಪರಿಷತ್ತಿನ ಪದಾಧಿಕಾರಿಗಳು ಟೊಂಕಕಟ್ಟಿ ದುಡಿಯುತ್ತಿರುವುದು ಅವರಲ್ಲಿನ ಕನ್ನಡಪ್ರೇಮ ಎತ್ತಿ ತೋರಿಸುತ್ತದೆ. ಇಲ್ಲಿಯ ಕನ್ನಡ ಭವನವು ಮದುಮಗಳಂತೆ ಶ್ರಂಗಾರಗೊಂಡಿದೆ.
ಕಡಕೋಳದ ಶ್ರೀ ಮಡಿವಾಳೇಶ್ವರ ಮಹಾಮಠದ ಪೀಠಾಧಿಪತಿಗಳೂ ಆದ ತತ್ವಪದಗಳ ಮಹಾಪೋಷಕರಾದ ಶ್ರೀ ಡಾ. ರುದ್ರಮುನಿ ಶಿವಾಚಾರ್ಯರು ಅವರ ಸರ್ವಾಧ್ಯಕ್ಷತೆಯಲ್ಲಿ ಹೊಸದೊಂದು ಆಲೋಚನೆಯ ಹೆಜ್ಜೆಯನ್ನು ಇಟ್ಟಂತಾಗಿದೆ.
ಈ ಸಮ್ಮೇಳನ ಸುವರ್ಣ ಕರ್ನಾಟಕ ನಾಮಕಾರಣ ವರ್ಷಾಚರಣೆಯ ಸಂಭ್ರಮದಲ್ಲಿ ನಡೆಯುತ್ತಿರುವುದು ಇನ್ನಷ್ಟು ಮೆರುಗು ತಂದಂತಾಗಿದೆ.
ಬೆಳಗ್ಗೆ 9 ಗಂಟೆಗೆ ಸಮ್ಮೇಳನದ ಸರ್ವಾಧ್ಯಕ್ಷರ ಸಾಂಸ್ಕøತಿಕ ಮೆರವಣಿಗೆ ನಗರದ ಸರದಾರ ವಲ್ಲಭಬಾಯಿ ಪಟೇಲ್ ವೃತ್ತದಿಂದ ಕನ್ನಡ ಭವನದವರೆಗೆ ಜರುಗಲಿದೆ. ತತ್ವಪದ ಸಾಹಿತ್ಯದ ಕುರಿತಾಗಿ ವೈವಿದ್ಯಮಯ ವಿಚಾರಗೋಷ್ಠಿ ಹಾಗೂ ಕವಿಗೋಷ್ಠಿಗಳು ನಡೆಯಲಿವೆ.
ಜನ ಸಾಮಾನ್ಯರ ಜೀವನಮಟ್ಟ ಎತ್ತರಿಸಿ ಅವರಲ್ಲಿನ ಅಜ್ಞಾನ, ಮೂಢನಂಬಿಕೆಗಳನ್ನು ಅಳಸಿ ಹಾಕುವಲ್ಲಿ ತತ್ವಪದಕಾರರ ಪಾತ್ರ ಬಹು ಹಿರಿದಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅವರು, ಆಧ್ಯಾತ್ಮಿಕ ನೆಲೆಯಲ್ಲಿ ನಡೆದಾಡಿ ಮಾನವೀಯ ಸಂಬಂಧಗಳನ್ನು ಗಟ್ಟಿಗೊಳಿಸಲು ಕಡಕೋಳ ಮಡಿವಾಳಪ್ಪ ಸೇರಿ ಜಿಲ್ಲೆಯ ಅನೇಕ ತತ್ವಪದಕಾರರು ಪದಗಳನ್ನು ನಮಗೆ ಕಟ್ಟಿಕೊಟ್ಟಿದ್ದಾರೆ. ಎಲ್ಲ ತತ್ವಪದಕಾರರ ಅನುಭಾವದ ತಿರುಳನ್ನು ತಿರುಳನ್ನು ಇನ್ನಷ್ಟು ಪ್ರಚಾರ ಮಾಡಲು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇಂಥಹದೊಂದು ಅರ್ಥಪೂರ್ಣ ಸಮ್ಮೇಳನವೊಂದನ್ನು ಆಯೋಜಿಸದಲಾಗಿದೆ ಎಂದು ಹೇಳಿದರು.
ಚಿಗರಿಹಳ್ಳಿ ಶ್ರೀಮಠದ ಶ್ರೀ ಸಿದ್ಧಬಸವ ಕಬೀರ ಮಹಾಸ್ವಾಮಿಗಳು, ಸಮ್ಮೇಳನದ ಸಿದ್ಧತೆಯಲ್ಲಿ ತೊಡಗಿಸಿಕೊಂಡಿರುವ ಜಿಲ್ಲಾ ಕಸಾಪ ದ ಧರ್ಮಣ್ಣ ಎಚ್ ಧನ್ನಿ, ವಿಶ್ವನಾಥ ತೊಟ್ನಳ್ಳಿ, ಶ್ರೀಕಾಂತ ಪಾಟೀಲ ತಿಳಗೂಳ, ರಾಜೇಂದ್ರ ಮಾಡಬೂಳ, ಡಾ. ರೆಹಮಾನ್ ಪಟೇಲ್, ಸಿದ್ಧಲಿಂಗ ಜಿ ಬಾಳಿ, ಪ್ರಮುಖರಾದ ರೇವಣಸಿದ್ದಪ್ಪ ಜೀವಣಗಿ, ಚನ್ನಮಲ್ಲಯ್ಯ ಎಸ್ ಹಿರೇಮಠ, ಧರ್ಮರಾಜ ಜವಳಿ, ಹಣಮಂತಪ್ರಭು, ಸಂಜೀವಕುಮಾರ ಡೊಂಗರಗಾಂವ, ಕೃಪಾಸಾಗರ ಗೊಬ್ಬೂರ, ಅನೀತಾ ಕೆ., ಶಿಲ್ಪಾ ಜೋಶಿ, ಮಹಾನಂದಾ ಸಿಂಗೆ, ರುದ್ರಗೌಡ ಪಾಟೀಲ ಕಡಕೋಳ, ಎಸ್. ಕೆ ಬಿರಾದಾರ, ಮಹೇಶ ಚಿಂತನಪಳ್ಳಿ, ಮಲ್ಲಿಕಾರ್ಜುನ ಇಬ್ರಾಹಿಂಪುರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.