ಸುರಪುರ: ಮೇ 7 ನೇ ತಾರಿಖು ನಡೆಯುವ ಲೋಕಸಭಾ ಹಾಗೂ ಸುರಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರಿರುವ ಎಲ್ಲರು ಕಡ್ಡಾಯವಾಗಿ ಮತದಾನ ಮಾಡುವ ಸಂಕಲ್ಪ ಮಾಡಬೇಕು ಎಂದು ವಿ.ಸ ಉಪ ಚುನಾವಣೆಯ ಚುನಾವಣಾಧಿಕಾರಿ ಕಾವ್ಯರಾಣಿ ಕೆ.ವಿ ತಿಳಿಸಿದರು.
ನಗರಸಭೆಯ ಮತಗಟ್ಟೆ ಬಳಿಯಲ್ಲಿ ಹಮ್ಮಿಕೊಂಡಿದ್ದ ನಮ್ಮ ನಡೆ ಮತಗಟ್ಟೆಯ ಕಡೆ ಕಾರ್ಯಕ್ರಮದ ಅಂಗವಾಗಿ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ,ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಎಲ್ಲಾ ಮತದಾರರಿಗೆ ತಾವುಗಳು ತಿಳಿಸುವ ಕೆಲಸ ಮಾಡುವಂತೆ ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ತಾಲೂಕ ಸ್ವೀಪ್ ನೋಡಲ್ ಅಧಿಕಾರಿ ಬಸವರಾಜ ಸಜ್ಜನ್ ಮಾತನಾಡಿ,ಇಡೀ ವಿಧಾನಸಭಾ ಕ್ಷೇತ್ರದಾದ್ಯಂತ ಒಂದು ತಿಂಗಳಿನಿಂದ ನಿರಂತರವಾಗಿ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡುತ್ತಿದ್ದು,ಎಲ್ಲರು ಮತದಾನ ಮಾಡುವ ಮೂಲಕ ಶೇ 100 ರಷ್ಟು ಮತದಾನ ಆಗುವಂತೆ ಮಾಡಬೇಕು ಎಂದರು.
ನಗರಸಭೆ ಪೌರಾಯುಕ್ತ ಮಂಜುನಾಥ ಮಾತನಾಡಿ,ನಮ್ಮ ನಗರಸಭೆ ವ್ಯಾಪ್ತಿಯಲ್ಲಿ ಕಳೆದ 25ನೇ ತಾರಿಖಿನಿಂದ ನಿರಂತರವಾಗಿ ಮತದಾನದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ,ನಮ್ಮ ಎಲ್ಲಾ ಸಿಬ್ಬಂದಿಗಳು ಕೂಡ ನಿರಂತರವಾಗಿ ಪಾಲ್ಗೊಳ್ಳುವ ಮೂಲಕ ನಗರದಲ್ಲಿ ಹೆಚ್ಚಿನ ಮತದಾನ ಮಾಡುವಂತೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಎಲ್ಲರಿಗೂ ಕಡ್ಡಾಯ ಮತದಾನ ಮಾಡುವ ಕುರಿತು ಪ್ರತಿಜ್ಞಾವಿಧಿ ಬೋಧಿಸಲಾಯಿತು.ಕಾರ್ಯಕ್ರಮದ ಅಂಗವಾಗಿ ನಗರಸಭೆ ಆವರಣದಲ್ಲಿ ರಂಗೋಲಿ ಹಾಕಿ ಸಿಂಗರಿಸಲಾಗಿತ್ತು.ಈ ಸಂದರ್ಭದಲ್ಲಿ ತಹಸಿಲ್ದಾರ್ ನಾಗಮ್ಮ ಕಟ್ಟಿಮನಿ,ನಗರಸಭೆ ವ್ಯವಸ್ಥಾಪಕ ಯಲ್ಲಪ್ಪ ನಾಯಕ, ಎಸ್.ಐ ಗುರುಸ್ವಾಮಿ ಸೇರಿದಂತೆ ಎಲ್ಲಾ ಸಿಬ್ಬಂದಿಗಳು ಹಾಗೂ ಪೌರಕಾರ್ಮಿಕರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.