ಕಲಬುರಗಿ ಲೋಕಸಭೆ ಚುನಾವಣೆ: ಮತದಾನಕ್ಕೆ ಸಕಲ ಸಿದ್ಧತೆ, 11,486 ಪೋಲಿಂಗ್ ಸಿಬ್ಬಂದಿ ನಿಯೋಜನೆ

0
29

ಕಲಬುರಗಿ: ಗುಲಬರ್ಗಾ ಲೋಕಸಭಾ (ಪ.ಜಾ) ಕ್ಷೇತ್ರಕ್ಕೆ ಮೇ 7 ರಂದು ಬೆಳಿಗ್ಗೆ 7 ರಿಂದ ಸಾಯಂಕಾಲ 6 ಗಂಟೆ ವರೆಗೆ ನಡೆಯುವ ಮತದಾನಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಜಿಲ್ಲೆಯ 9 ಕ್ಷೇತ್ರದ 2,378 ಮತಗಟ್ಟೆಗೆ ಶೇ.20ರಂತೆ ಹೆಚ್ಚುವರಿ ಸಿಬ್ಬಂದಿ ಸೇರಿ 2,804 ಪಿ.ಆರ್.ಓ, 2,804 ಎ.ಪಿ.ಆರ್.ಓ, 5,608 ಪೋಲಿಂಗ್ ಅಧಿಕಾರಿ ಹಾಗೂ 270 ಮೈಕ್ರೋ ವೀಕ್ಷಕರು ಸೇರಿ 11,486 ಜನ ಚುನಾವಣಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ತಿಳಿಸಿದ್ದಾರೆ.

ಪ್ರತಿ ಮತಗಟ್ಟೆಗೆ ತಲಾ ಓರ್ವ ಪಿ.ಆರ್.ಓ., ಎ.ಪಿ.ಆರ್.ಓ., ಇಬ್ಬರು ಪೋಲಿಂಗ್ ಅಧಿಕಾರಿ ಹೊರತುಪಡಿಸಿ ಓರ್ವ ಗ್ರೂಪ್ ‘ಡಿ’, ಓರ್ವ ಪೊಲೀಸ್ ಪೇದೆ ಇರಲಿದ್ದಾರೆ. ಮತದಾನ ಕಾರ್ಯ ಮತ್ತು ಚುನಾವಣಾ ಸಿಬ್ಬಂದಿ ಸಾರಿಗೆ ವ್ಯವಸ್ಥೆಗೆ ಕೆ.ಕೆ.ಆರ್.ಟಿ.ಸಿ.ಯಿಂದ 255 ಬಸ್, 594 ಕ್ರೂಸರ್, 23 ಮ್ಯಾಕ್ಸಿ ಕ್ಯಾಬ್-ಮಿನಿ ಬಸ್ ಸೇರಿ 872 ವಾಹನಗಳನ್ನು ಬಳಸಿಕೊಳ್ಳಲಾಗಿದೆ ಎಂದರು.

Contact Your\'s Advertisement; 9902492681

ಜಿಲ್ಲೆಯಲ್ಲಿ 11,60,716 ಪುರುಷ, 11,44,256 ಮಹಿಳೆ, ಇತರೆ 332 ಸೇರಿ 23,05,304 ಜನ ಮತ ಚಲಾಯಿಲಸು ಅರ್ಹತೆ ಹೊಂದಿದ್ದು, ಇದರಲ್ಲಿ 18-19 ವರ್ಷದ 36,543 ಯುವ ಮತದಾರರಿದ್ದಾರೆ. ಇನ್ನೂ ಮತಗಟ್ಟೆಗೆ ಬಂದು ಮತ ಚಲಾಯಿಸಲು ಆಗದ 85 ವರ್ಷ ಮೇಲ್ಪಟ್ಟ 1,149 ಜನ ಹಿರಿಯ ನಾಗರಿಕರು, 396 ವಿಶೇಷಚೇತನರು ಹಾಗೂ ಅಗತ್ಯ ಸೇವಾ ವಲಯದಡಿ ಬರುವ 952 ಜನ ಮತದಾರರು ಈಗಾಗಲೆ ಪೋಸ್ಟಲ್ ಬ್ಯಾಲೆಟ್ ಮೂಲಕ ಮತ ಚಲಾಯಿಸಿದ್ದಾರೆ ಎಂದರು.

ಇನ್ನೂ ಗುಲಬರ್ಗಾ ಲೋಕಸಭಾ ಕ್ಷೇತ್ರದಾದ್ಯಂತ ಒಟ್ಟಾರೆ 10,49,959 ಪುರುಷ, 10,47,961 ಮಹಿಳೆ, ಇತರೆ 282 ಸೇರಿ 20,98,202 ಜನ ಮತ ಚಲಾಯಿಸಲಿದ್ದು, ಮುಕ್ತ ಮತ್ತು ನ್ಯಾಯಸಮ್ಮತ ಮತದಾನಕ್ಕೆ ಬೇಕಾದ ಎಲ್ಲಾ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.

2,378 ಮತಗಟ್ಟೆಗಳು: ಕಲಬುರಗಿ ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳ ನಗರ ಪ್ರದೇಶದಲ್ಲಿ 705 ಮತ್ತು ಗ್ರಾಮಾಂತರ ಪ್ರದೇಶದಲ್ಲಿ 1,673 ಸೇರಿ ಒಟ್ಟು 2,378 ಮತಗಟ್ಟೆ ಗುರುತಿಸಲಾಗಿದೆ. ಅದೇ ರೀತಿ ಗಲಬರ್ಗಾ ಲೋಕಸಭಾ ಕ್ಷೇತ್ರ ನೋಡಿದಾಗ ನಗರ ಪ್ರದೇಶದಲ್ಲಿ 672 ಮತ್ತು ಗ್ರಾಮಾಂತರ ಪ್ರದೇಶದಲ್ಲಿ 1,494 ಸೇರಿ ಒಟ್ಟು 2,166 ಮತಗಟ್ಟೆಗಳು ಇವೆ.

493 ಕ್ರಿಟಿಕಲ್ ಮತಗಟ್ಟೆ: ಜಿಲ್ಲೆಯಾದ್ಯಂತ 493 ಮತಗಟ್ಟೆ ವಲನರೇಬಲ್ ಮತ್ತು ಕ್ರಿಟಿಕಲ್ ಮತಗಟ್ಟೆ ಎಂದು ಗುರುತಿಸಿದ್ದು, ಇಂತಹ ಮತಗಟ್ಟೆಯಲ್ಲಿ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ. ಇದಲ್ಲದೆ ಜಿಲ್ಲೆಯ 9 ಕ್ಷೇತ್ರದ ಕ್ರಿಟಿಕಲ್ ಮತಗಟ್ಟೆಗೆ ತಲಾ 30 ರಂತೆ ಒಟ್ಟು 270 ಜನ ಮೈಕ್ರೋ ವೀಕ್ಷಕರನ್ನು ಮತದಾನ ಕಾರ್ಯದ ಮೇಲೆ ತೀವ್ರ ನಿಗಾ ವಹಿಸಲಿದ್ದಾರೆ.

ಭದ್ರತೆಗೆ 4,584 ಸಿಬ್ಬಂದಿ ತೈನಾತು: ಮತದಾನ ಶಾಂತಿಯುತವಾಗಿ ನಡೆಯಲು ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಎಲ್ಲಾ ಮತಗಟ್ಟೆಗಳಿಗೆ ಭದ್ರತಾ ದೃಷ್ಠಿಯಿಂದ ತಲಾ 4 ಜನ ಸಿಬ್ಬಂದಿ ಒಳಗೊಂಡ ಸೆಂಟರ್ ಆಮ್ರ್ಡ್ ರಿಸರ್ವ್ ಫೋರ್ಸಿನ 54 ವಿಭಾಗ, 2,81,8 ಸಿವಿಲ್ ಪೋಲಿಸ್ ಅಧಿಕಾರಿ-ಸಿಬ್ಬಂದಿ ಹಾಗೂ 1,550 ಗೃಹ ರಕ್ಷಕ ದಳದ ಸಿಬ್ಬಂದಿ ಸೇರಿ ಒಟ್ಟಾರೆ 4,584 ಜನ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ಕ್ರಿಟಿಕಲ್ ಮತಗಟ್ಟೆಯಲ್ಲಿ ಹೆಚ್ಚಿನ ಭದ್ರತೆ ಒದಗಿಸಿದ್ದು, ಇಲ್ಲಿ ವೆಬ್ ಕಾಸ್ಟಿಂಗ್ ವ್ಯವಸ್ಥೆ ಸಹ ಮಾಡಲಾಗಿದೆ. ಕೇಂದ್ರ ಭದ್ರತಾ ಮೀಸಲು ಪಡೆ ಈಗಾಗಲೆ ವಿಧಾನಸಭಾ ಕ್ಷೇತ್ರವಾರು ರೂಟ್ ಮಾರ್ಚ್ ಮಾಡಿ ಮತದಾರರಲ್ಲಿ ಮತದಾನ ಮಾಡುವಂತೆ ಆತ್ಮ ವಿಶ್ವಾಸ ತುಂಬಿದೆ ಎಂದು ಬಿ.ಫೌಜಿಯಾ ತರನ್ನುಮ್ ಮಾಹಿತಿ ನೀಡಿದ್ದಾರೆ.

ಮೂಲಸೌಕರ್ಯ ಖಾತ್ರಿ: ಮತದಾನ ದಿನದಂದು ಮತಗಟ್ಟೆಯಲ್ಲಿ ಕುಡಿಯುವ ನೀರು, ಶೌಚಾಲಯ, ವಾಹನ ಪಾರ್ಕಿಂಗ್, ನೆರಳು, ವಿಶ್ರಾಂತಿ ಕೋಣೆದಂತಹ ಮೂಲಸೌಕರ್ಯ ವ್ಯವಸ್ಥೆ ಇರುವಿಕೆಯನ್ನು ಖಾತ್ರಿಪಡಿಸಿಕೊಳ್ಳಲಾಗಿದೆ. ವಿಶೇಷಚೇತನರಿಗೆ ರ‌್ಯಾಂಪ್, ವ್ಹೀಲ್ ಚೇರ್ ವ್ಯವಸ್ಥೆ ಸಹ ಮಾಡಲಾಗಿದೆ. ಬಿಸಲು ಹೆಚ್ಚಿರವ ಕಾರಣ ಶಾಮಿಯಾನ, ತಂಪಾದ ಕುಡಿಯುವ ನೀರಿನ ವ್ಯವಸ್ಥೆ, ಆರೋಗ್ಯ ಸಮಸ್ಯೆ ಕಂಡುಬಂದಲ್ಲಿ ಅಂಬುಲೆನ್ಸ್ ವ್ಯವಸ್ಥೆ ಸಹ ಮಾಡಲಾಗಿದೆ ಎಂದು ಡಿ.ಸಿ. ಮಾಹಿತಿ ನೀಡಿದರು.

ಮತದಾರರನ್ನು ಕೈಬೀಸಿ ಕರೆಯುತ್ತಿವೆ ಸಖಿ-ಥೀಮ್ ಬೂತ್‍ಗಳು: ಮತದಾರರನ್ನು ಮತಗಟ್ಟೆಯತ್ತ ಆಕರ್ಷಿಸಲು ಜಿಲ್ಲೆಯಾದ್ಯಂತ ಸಖಿ, ಥೀಮ್, ಯುವ ಹಾಗೂ ವಿಶೇಷಚೇತನರನ್ನು ಗುರಿಯಾಗಿಸಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 5 ಸಖಿ ಪಿಂಕ್ ಬೂತ್, ತಲಾ ಒಂದು ಯುವ, ಪಿ.ಡಬ್ಲ್ಯೂ.ಡಿ. ಹಾಗೂ ಥೀಮ್ ಬೇಸ್ಡ್ ಬೂತ್ ಸ್ಥಾಪಿಸಲಾಗಿದೆ. ಅದರಂತೆ ಒಟ್ಟಾರೆ 45 ಸಖಿ ಪಿಂಕ್ ಬೂತ್, ತಲಾ 9 ಯುವ, ಥೀಮ್ ಹಾಗೂ ಪಿ.ಡಬ್ಲ್ಯೂ.ಡಿ. ಸೇರಿ ಒಟ್ಟಾರೆ 72 ಬೂತ್ ಮತದಾರರ ಸ್ನೇಹಿಯಾಗಿ ಸಿದ್ಧಗೊಂಡು ಮತದಾರರನ್ನು ಸ್ವಾಗತಿಸಲಿವೆ.

ಆಯಾ ವಿಧಾನಸಭಾ ಕ್ಷೇತ್ರದಲ್ಲಿ ಕ್ಷೇತ್ರದ ಐತಿಹಾಸಿಕ ಹಿನ್ನೆಲೆ ಬಗ್ಗೆ ಪರಿಚಯ ನೀಡುವ ಮಾದರಿ (ಥೀಮ್) ಮತಗಟ್ಟೆ ಸ್ಥಾಪಿಸಿದ್ದು, ಮತಕ್ಷೇತ್ರದ ವಿಶೇಷತೆ ಆ ಮತಗಟ್ಟೆಯ ಗೋಡೆ ಬರಹದಲ್ಲಿ ಪ್ರತಿಬಿಂಬವಾಗಲಿದೆ. ಮಹಿಳಾ ಮತದಾರರೆ ಹೆಚ್ಚಿರುವ ಸಖಿ ಪಿಂಕ್ ಬೂತ್‍ನಲ್ಲಿ ಮತಗಟ್ಟೆ ಅಧಿಕಾರಿಯಿಂದ ಹಿಡಿದು ಮತಗಟ್ಟೆ ಸಹಾಯಕಿ, ಕಾವಲು ಸಿಬ್ಬಂದಿ ಎಲ್ಲರು ಮಹಿಳೆಯರೇ ಆಗಿರಲಿದ್ದಾರೆ. ಮೊದಲನೇ ಬಾರಿಗೆ ಮತದ ಹಕ್ಕು ಚಲಾಯಿಸುವ ಯುವ ಮತದಾರರನ್ನು ಗುರಿಯಾಗಿಸಿ ಕ್ಷೇತ್ರಕ್ಕೊಂದು “ಯುವ ಬೂತ್” ಸ್ಥಾಪಿಸಿದೆ. ವಿಧಾನಸಭಾ ಕ್ಷೇತ್ರಕ್ಕೆ ಒಂದರಂತೆ ಅತೀ ಹೆಚ್ಚು ಅಂಗವಿಕಲರು ಇರುವಂತಹ ಪ್ರದೇಶದಲ್ಲಿ “ಪಿ.ಡಬ್ಲ್ಯೂ.ಡಿ.” ಮತಗಟ್ಟೆ ಸ್ಥಾಪಿಸಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here