ವಾಡಿ: ಗಣಿನಾಡು ವಾಡಿ ಪಟ್ಟಣದಲ್ಲಿ ಬಿಸಿಲಿನ ತಾಪ ಮಿತಿ ಮೀರಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಕುಡಿಯಲು ತಂಪು ನೀರು ಮತ್ತು ತಾತ್ಕಾಲಿಕ ನೆರಳಿನ ವ್ಯವಸ್ಥೆ ಮಾಡುವಂತೆ ಸ್ಥಳೀಯ ಜನಧ್ವನಿ ಜಾಗೃತ ಸಮಿತಿ ಪದಾಧಿಕಾರಿಗಳು ಪುರಸಭೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಬುಧವಾರ ಪುರಸಭೆ ಮುಖ್ಯಾಧಿಕಾರಿ ಸಿ.ಫಕೃದ್ದೀನ್ ಸಾಬ್ ಅವರಿಗೆ ಮನವಿ ಪತ್ರ ಸಲ್ಲಿಸಿರುವ ಜನಧ್ವನಿ ಮುಖಂಡರು, ಭಯಂಕರ ಬಿಸಿಲ ತಾಪ ಕಂಡುಬಂದಿರುವ ಕಾರಣಕ್ಕೆ ಆಡಳಿತ ಜನರ ಸಹಾಯಕ್ಕೆ ಬರುವಂತೆ ಮನವಿ ಮಾಡಿದ್ದಾರೆ. ಹಾಸುಗಲ್ಲುಗಳ ತವರೂರು ಎಂದೇ ಕರೆಯುವ ವಾಡಿ ಪಟ್ಟಣದಲ್ಲಿ ಬಿಸಿಲು 43 ಡಿಗ್ರಿ ಸೆಲ್ಸಿಯೆಸ್ ದಾಟಿದೆ. ರಣಬಿಸಿಲು ತನ್ನ ರೌದ್ರಾವತಾರ ಮೆರೆಯುತ್ತಿದೆ.
ವಿಷಕಾರಿ ಸೂರ್ಯ ಕಿರಣಗಳ ಶಾಖಕ್ಕೆ ಜನ ಹೌಹಾರಿದ್ದಾರೆ. ಖಡಕ್ ಬಿಸಿಲು ಜನರನ್ನು ಬದುಕು ಹೈರಾಣ ಮಾಡಿದೆ. ವಿವಿಧ ಕೆಲಸ ಕಾರ್ಯಗಳಿಗಾಗಿ ಪಟ್ಟಣಕ್ಕೆ ಬರುವ ಗ್ರಾಮೀಣ ಭಾಗದ ಜನರು ಕುಡಿಯುವ ನೀರು ಸಿಗದೆ ಪರದಾಡುತ್ತಿದ್ದಾರ. ಬಾಟಲಿ ನೀರು ಖರೀದಿಸಿ ಹಣ ವ್ಯಯಮಾಡುವಂತಾಗಿದೆ. ಪಟ್ಟಣದ ಯಾವುದೇ ವೃತ್ತದಲ್ಲಿ ಜನ ವಿಶ್ರಾಂತಿಗಾಗಿ ನೆರಳಿನ ವ್ಯವಸ್ಥೆ ಇಲ್ಲ ಎಂದು ದೂರಿದ್ದಾರೆ.
ಬಿಸಿಲು ಝಳ ಮುಖಕ್ಕೆ ಹೊಡೆದು ಜನರು ತತ್ತರಿಸಿ ಹೋಗುತ್ತಿದ್ದಾರೆ. ದಣಿವಾರಿಸಿಕೊಳ್ಳಲು ನೆರಳಿಗಾಗಿ ಪರಿತಪಿಸುತ್ತಿದ್ದಾರೆ. ಗಿಡ ಮರಗಳ ನೆರಳಿಗೂ ಬರ ಬಂದಿದೆ. ಆದ್ದರಿಂದ ಪಟ್ಟಣದ ಸಾರ್ವಜನಿಕ ಸ್ಥಳಗಳಲ್ಲಿ ಪುರಸಭೆ ವತಿಯಿಂದ ಮಡಿಕೆಗಳನ್ನಿಟ್ಟು ತಂಪು ನೀರಿನ ವ್ಯವಸ್ಥೆ ಮಾಡಬೇಕು.
ಶ್ರೀನಿವಾಸ ಗುಡಿ ವೃತ್ತ, ಬಸವೇಶ್ವರ ವೃತ್ತ, ಅಂಬೇಡ್ಕರ್ ಚೌಕ್, ಆಜಾದ್ ಚೌಕ್, ಬಳಿರಾಮ ಚೌಕ್ ಹಾಗೂ ಬಸ್ ನಿಲ್ಲುವ ಬಯಲು ಜಾಗಗಳಲ್ಲಿ ನೀರಿನ ವ್ಯವಸ್ಥೆ ಕಡ್ಡಾಯವಾಗಿ ಮಾಡಬೇಕು. ಬಸ್ ನಿಲ್ದಾಣ ಇಲ್ಲದ ಕಾರಣ ಜನರು ಬೀದಿಗಳಲ್ಲೇ ನಿಂತು ಬಸ್‍ಗಳಿಗಾಗಿ ಕಾಯುವ ಅನಿವಾರ್ಯತೆಯಿದೆ. ಹೀಗಾಗಿ ರಸ್ತೆಯ ಮೇಲೆ ನಿಲ್ಲುವ ಪ್ರಯಾಣಿಕರಿಗಾಗಿ ತಾತ್ಕಾಲಿಕವಾಗಿಯಾದರೂ ನೆರಳಿನ ಸೌಲಭ್ಯ ಒದಗಿಸಬೇಕು ಎಂದು ಮುಖಂಡರು ಒತ್ತಾಯಿಸಿದ್ದಾರೆ.
ಮನವಿ ಸ್ವೀಕರಿಸಿ ಮಾತನಾಡಿದ ವಾಡಿ ಪುರಸಭೆ ಮುಖ್ಯಾಧಿಕಾರಿ ಸಿ.ಫಕೃದ್ದೀನ್ ಸಾಬ್, ತಕ್ಷಣವೇ ಸಾರ್ವಜನಿಕ ಸ್ಥಳಗಳಲ್ಲಿ ಕುಡಿಯಲು ತಂಪು ನೀರಿನ ವ್ಯವಸ್ಥೆ ಹಾಗೂ ಬಯಲು ಬಸ್ ನಿಲ್ದಾಣ ಹತ್ತಿರ ಟೆಂಟ್ ಹಾಕಿ ನೆರಳಿನ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಜನಧ್ವನಿ ಜಾಗೃತ ಸಮಿತಿಯ ಗೌರವಾಧ್ಯಕ್ಷ ವಿ.ಕೆ.ಕೆದಿಲಾಯ, ಅಧ್ಯಕ್ಷ ವೀರಭದ್ರಪ್ಪ ಆರ್.ಕೆ, ಉಪಾಧ್ಯಕ್ಷ ಸಿದ್ದಯ್ಯಶಾಸ್ತ್ರೀ ನಂದೂರಮಠ, ಸಹ ಕಾರ್ಯದರ್ಶಿ ಶೇಖ್ ಅಲ್ಲಾಭಕ್ಷ್, ಮುಖಂಡರಾದ ಕಾಶೀನಾಥ ಶೆಟಗಾರ, ಮಹಾಂತೇಶ ಬಿರಾದಾರ ಸೇರಿದಂತೆ ಇತರರು ಮನವಿ ನೀಡುವ ಸಂದರ್ಭದಲ್ಲಿ ಉಪಸ್ಥಿತರಿದ್ದರು.