ವಾಡಿ: ಕಲಬುರಗಿ ಲೋಕಸಭೆ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಅವರು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಮಹೆಮೂದ್ ಸಾಹೇಬ ಪ್ರತಿಕ್ರೀಯಿಸಿದ್ದಾರೆ.
ಬುಧವಾರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಚಿತ್ತಾಪುರ ವಿಧಾನಸಭೆ ಮತಕ್ಷೇತ್ರದಿಂದ ಕನಿಷ್ಠ ಐದು ಸಾವಿರ ಲೀಡ್ ಕೊಡುತ್ತೇವೆ. ಈ ಬಾರಿ ಕಾಂಗ್ರೆಸ್‍ಗೆ ಎದುರಾಳಿಯಾಗಲು ಬಿಜೆಪಿಗೆ ಸಾಧ್ಯವಾಗಿಲ್ಲ. ಕಾಂಗ್ರೆಸ್ ಕಾರ್ಯಕರ್ತರ ಉತ್ಸಾಹ ಇಮ್ಮಡಿಯಾಗಿತ್ತು.
ಕ್ರೀಯಶೀಲರಾಗಿ ನಮ್ಮ ಕಾರ್ಯಕರ್ತರು ಚುನಾವಣೆ ಎದುರಿಸಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಡಾ.ಮಲ್ಲಿಕಾರ್ಜುನ ಖರ್ಗೆ ಅವರು ಮಾಡಿರುವ ಅಭಿವೃದ್ಧಿಗಳು ಜನರನ್ನು ಸೆಳೆದಿವೆ. ವಿಶೇಷವಾಗಿ ಕಾಂಗ್ರೆಸ್ ಸರ್ಕಾರ ನೀಡಿರುವ ಐದು ಗ್ಯಾರಂಟಿ ಯೋಜನೆಗಳು ರಾಧಾಕೃಷ್ಣ ದೊಡ್ಡಮನಿ ಗೆಲುವಿಗೆ ಬಲ ತಂದು ಕೊಡಲಿವೆ ಎಂದರು.
ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಖರ್ಗೆ ಅವರನ್ನು ಮತ್ತೊಮ್ಮೆ ಸೋಲಿಸಬೇಕು ಎಂಬ ಹಟಕ್ಕೆ ಬಿದ್ದ ಬಿಜೆಪಿ ನಾಯಕರು, ಖರ್ಗೆ ವಿರುದ್ಧ ಇನ್ನಿಲ್ಲದ ಅಪಪ್ರಚಾರ ಮಾಡಿದರು. ಕೆಲವು ಅನಿರೀಕ್ಷಿತ ಘಟನೆಗಳಿಗೆ ಜಾತಿ ಬಣ್ಣ ಲೇಪಿಸಿ ಖರ್ಗೆ ತಲೆಗೆ ಕಟ್ಟಲು ಹರಸಾಹಸ ಮಾಡಿದ್ದು ಬಿಜೆಪಿಯ ಕೀಳು ರಾಜಕಾರಣಕ್ಕೆ ಸಾಕ್ಷಿಯಾಯಿತು. ಜಾತಿ ಹೆಸರಿನಲ್ಲಿ ಸಮಾಜಗಳನ್ನು ಒಡೆಯುವ ಮತ್ತು ಖರ್ಗೆ ವಿರುದ್ಧ ಎತ್ತಿಕಟ್ಟುವ ಕುತಂತ್ರಗೇಡಿ ರಾಜಕಾರಣ ನಡೆಯಿತು.
ನರೇಂದ್ರ ಮೋದಿ ಅವರ ಮುಖ ನೋಡಿ ಮತ ಕೊಡಿ ಎನ್ನುವ ಬಿಜೆಪಿಗರ ದಯನಿಯ ಸ್ಥಿತಿಗೆ ಮತದಾರ ಕವಡೆಕಾಸಿನ ಕಿಮ್ಮತ್ತು ನೀಡಲಿಲ್ಲ. ಕಲಬುರಗಿಗೆ ಖರ್ಗೆ ಅನಿವಾರ್ಯ ಎಂಬುದನ್ನು ಅರಿತ ಮತದಾರರು ಕೈಗೆ ಬಲ ತುಂಬಿದ್ದಾರೆ ಎಂಬ ಆತ್ಮವಿಶ್ವಾಸವಿದೆ. ಬಂಜಾರಾ ತಾಂಡಾಗಳಿಂದಲೂ ಉತ್ತಮ ಪ್ರತಿಕ್ರೀಯೆ ವ್ಯಕ್ತವಾಗಿದ್ದು ಕಂಡು ಬಂದಿದೆ. ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳು ಜಾತಿ ಧರ್ಮ ಲೆಕ್ಕಿಸದೆ ಕಾಂಗ್ರೆಸ್ ಬೆಂಬಲಿಸಿದ್ದಾರೆ. ಹಿಜಾಬ್, ತಲಾಖ್, ಹಲಾಲ್ ಕಟ್, ಮಂದಿರ, ಮಸೀದಿ ಸಂಘರ್ಷಗಳ ಕಿರಿಕಿರಿಗೆ ಮುಸ್ಲೀಮರೂ ಸಹ ಬೇಸತ್ತಿದ್ದರು.
ಈ ಬಾರಿ ಬದಲಾವಣೆ ಬೇಕು ಎಂಬ ದೃಢ ಸಂಕಲ್ಪ ಮಾಡಿ ಕಾಂಗ್ರೆಸ್ ಬೆಂಬಲಿಸಿದ್ದಾರೆ. ಈ ಎಲ್ಲಾ ಸ್ಥಿತಿಗತಿ ಗಮನಿಸಿದರೆ ರಾಧಾಕೃಷ್ಣ ಲಕ್ಷ ಮತಗಳಿಂದ ಗೆಲ್ಲುವುದು ಶತಸಿದ್ಧ ಎಂದ ಮಹೆಮೂದ್ ಸಾಹೇಬ, ಕೈ ನಾಯಕನ ವಿಜಯೋತ್ಸವಕ್ಕೆ ಸಿದ್ಧತೆಯೊಂದೇ ಬಾಕಿ ಉಳಿದಿದೆ ಎಂದರು.