ಕಲಬುರಗಿ: ಓರ್ವ ವ್ಯಕ್ತಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ನಗರದ ಹೊರವಲಯದ ಅಫಜಲಪೂರ್ ರಸ್ತೆಯಲ್ಲಿರುವ ಶರಣಸಿರಸಗಿ ಮಡ್ಡಿಯ ಹತ್ತಿರ ಇರುವ ಖರ್ಗೆ ಕಾಲೋನಿಯ ಮನೆಯೊಂದರಲ್ಲಿ ವರದಿಯಾಗಿದೆ.
ಮೃತನಿಗೆ ಖರ್ಗೆ ಕಾಲೋನಿಯ ನಿವಾಸಿ ಪ್ರಶಾಂತ್ ತಂದೆ ರಮೇಶ್ ಕೋಟಗಿ (35) ಎಂದು ಗುರುತಿಸಲಾಗಿದೆ. ಕೋಟಗಿ ಮನೆಯಲ್ಲಿಯೇ ಹರಿತವಾದ ಆಯುಧದಿಂದ ಕೊಚ್ಚಿ ಕೊಲೆ ಮಾಡಲಾಗಿದೆ.
ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಆದಾಗ್ಯೂ, ಕೊಲೆಯನ್ನು ಪ್ರಶಾಂತ್ ಗೆಳೆಯರಾದ ಬಿದ್ದಾಪೂರ್ ಕಾಲೋನಿಯ ಮಹೇಶ್ ಕಾಶೀನಾಥ್ ಧೋಬಿ ಮತ್ತು ಇನೋದ್ ಅವರೇ ಮಾಡಿದ್ದಾರೆಂಬ ಆರೋಪ ಇದೆ.
ಸುದ್ದಿ ತಿಳಿಯುತ್ತಿದ್ದಂತೆಯೇ ನಗರ ಪೋಲಿಸ್ ಆಯುಕ್ತ ಎಂ.ಎನ್. ನಾಗರಾಜ್, ಡಿಸಿಪಿ ಡಿ. ಕಿಶೋರಬಾಬು, ಗ್ರಾಮೀಣ ಪೋಲಿಸ್ ಠಾಣೆಯ ಪಿಐ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ಕುರಿತು ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಂತಕ ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ಮುಂದುವರೆದಿದೆ.