ಪಶು ಆಸ್ಪತ್ರೆಗೆ ಸಚಿವ ಚವ್ಹಾಣ್ ಹಠಾತ್ ಭೇಟಿ: ಗೈರು ಹಾಜರಿ ಸಿಬ್ಬಂದಿ ಅಮಾನತಿಗೆ ಸೂಚನೆ

0
109

ಕಲಬುರಗಿ: ರಾಜ್ಯದ ಪಶು ಸಂಗೋಪನಾ ಸಚಿವ ಹಾಗೂ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿನ ಕಲ್ಯಾಣ ಕರ್ನಾಟಕದಿಂದ ರಾಜ್ಯ ಬಿಜೆಪಿ ಸರ್ಕಾರದ ಸಂಪುಟದಲ್ಲಿ ಸೇರಿರುವ ಏಕೈಕ ಶಾಸಕ ಪ್ರಭು ಚವ್ಹಾಣ್ ಅವರು ಗುರುವಾರ ನಗರದ ಸೇಡಂ ರಸ್ತೆಯಲ್ಲಿರುವ ಪಶು ಆಸ್ಪತ್ರೆಗೆ ಹಠಾತ್ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಓರ್ವ ನೌಕರ ಗೈರು ಹಾಜರಾಗಿದ್ದು, ಆತನಿಗೆ ಅಮಾನತುಗೊಳಿಸುವಂತೆ ಸಚಿವರು ಆದೇಶಿಸಿದರು.

ಡಿ ಗ್ರೂಪ್ ನೌಕರ ಉಪೇಂದ್ರ ಎಂಬಾತನು ಕಳೆದ ಎರಡೂವರೆ ತಿಂಗಳಿಂದ ಗೈರು ಹಾಜರಾಗಿರುವ ಮಾಹಿತಿಯನ್ನು ಹಾಜರಾತಿ ಪುಸ್ತಕವನ್ನು ಪರಿಶೀಲಿಸಿದಾಗ ಸಚಿವರಿಗೆ ಗೊತ್ತಾಯಿತು. ಕೂಡಲೇ ಆತನಿಗೆ ಅಮಾನತಿಗೆ ಒಳಪಡಿಸಲು ಉಪ ನಿರ್ದೇಶಕರಿಗೆ ಸೂಚಿಸಿದಾಗ, ನನಗೆ ಅಮಾನತ್ತುಗೊಳಿಸುವ ಅಧಿಕಾರ ಇಲ್ಲ. ಕೇವಲ ಶಿಫಾರಸ್ಸು ಮಾಡಬಹುದು ಎಂದರು. ನೀವು ಶಿಫಾರಸ್ಸು ಮಾಡಿ ಎಂದು ಹೇಳಿ ಹಿರಿಯ ಅಧಿಕಾರಿಗೆ ಮೊಬೈಲ್ ಮೂಲಕ ಸಂಪರ್ಕಿಸಿ ಸಿಬ್ಬಂದಿ ಅಮಾನತ್ತಿಗೆ ಸಚಿವರು ಸೂಚಿಸಿದರು.  ಆಸ್ಪತ್ರೆಯಲ್ಲಿ ಅವ್ಯವಸ್ಥೆ ಹಾಗೂ ಸಿಬ್ಬಂದಿಗಳು ಗೈರಾಗಿರುವ ಕುರಿತು ಸಚಿವರು ಇಲಾಖೆಯ ಉಪ ನಿರ್ದೇಶಕ ಹನುಮಂತಪ್ಪ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

Contact Your\'s Advertisement; 9902492681

ಆಸ್ಪತ್ರೆಯಲ್ಲಿ ಪೀಠೋಕರಣಗಳು ಹಾಳಾಗಿವೆ. ಆವರಣದಲ್ಲಿ ಸ್ವಚ್ಛತೆ ಕಾಪಾಡಿಲ್ಲ. ಎಲ್ಲಿ ನೋಡಿದಲ್ಲಿ ಗಲೀಜು ಇದೆ. ಕೋಣೆಯಲ್ಲಿ ವಿದ್ಯುತ್ ಬೆಳಕಿನ ವ್ಯವಸ್ಥೆ ಇಲ್ಲ. ಎಕ್ಸರೇ ಯಂತ್ರ ಕೆಟ್ಟು ಹೋಗಿದ್ದು, ದುರಸ್ತಿ ಮಾಡಿಸಿಲ್ಲ. ಕಚೇರಿಯ ಆವರಣದಲ್ಲಿ ಎಲ್ಲಿ ನೋಡಿದರಲ್ಲಿ ಪ್ಲಾಸ್ಟಿಕ್ ಸೇರಿದಂತೆ ತ್ಯಾಜ್ಯ ಬಿದ್ದಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಸಚಿವರು, ಹೊಸ ಪೀಠೋಪಕರಣಗಳನ್ನು ತರಿಸಿಕೊಳ್ಳಲು ಹಾಗೂ ಆವರಣದಲ್ಲಿ ಶುಚಿತ್ವ ಕಾಪಾಡಿಕೊಂಡು ಹೋಗಲು ತಾಕೀತು ಮಾಡಿದರು. ಯಾವುದೇ ಕಾರಣಕ್ಕೂ ಅವಧಿ ಮುಗಿದ ಔಷಧಿಗಳನ್ನು ಕೊಡಬೇಡಿ. ಜಾನುವಾರುಗಳಿಗೆ ಸೂಕ್ತ ಹಾಗೂ ಸಮರ್ಪಕ ಚಿಕಿತ್ಸೆಯನ್ನು ನೀಡಬೇಕು ಎಂದು ಅವರು ಸೂಚಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಸುಭಾಷ್ ಬಿರಾದಾರ್ ಕಮಲಾಪೂರ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಅಂಬಾರಾಯ್ ಅಷ್ಟಗಿ, ಯುವ ಮುಖಂಡರಾದ ಶಿವಾ ಅಷ್ಟಗಿ, ವಿಕಾಸ್ ನೀಲಾ ಅವರು ಉಪಸ್ಥಿತರಿದ್ದರು.

ಸಚಿವ ಪ್ರಭು ಚವ್ಹಾಣ್ ಅವರು ಜಿಲ್ಲೆಯ ಆಳಂದ್ ತಾಲ್ಲೂಕಿನ ಕಾರ್ಯಕ್ರಮದಲ್ಲಿ ಭಾಗವಹಿಸಲು ರೈಲಿನಲ್ಲಿ ಬೆಳಿಗ್ಗೆ ನಗರಕ್ಕೆ ಬಂದಿಳಿದಾಗ ಮಾಜಿ ಶಾಸಕ ಹಾಗೂ ಬಿಜೆಪಿ ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ್, ರಾಜ್ಯ ವಿಧಾನ ಪರಿಷತ್ ಮಾಜಿ ಸದಸ್ಯ ಶಶೀಲ್ ಜಿ. ನಮೋಶಿ ಮುಂತಾದವರು ಹೂಗುಚ್ಛ ಕೊಟ್ಟು ಸ್ವಾಗತಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here