ಸುರಪುರ: ತಾಲೂಕಿನಲ್ಲಿ ಮುಂಗಾರು ಆರಂಭಗೊಂಡು ಕೃಷಿ ಚಟುವಟಿಕೆಗಳು ಆರಂಭಗೊಂಡಿದ್ದರಿಂದ ಕೃಷಿ ಬೀಜ ಗೊಬ್ಬರ ಮಾರಾಟ ಅಂಗಡಿಗಳಿಗೆ ತಾಲೂಕು ಸಹಾಯಕ ಕೃಷಿ ನಿರ್ದೇಶಕ ಭೀಮರಾಯ ಹವಾಲ್ದಾರ್ ನೇತೃತ್ವದಲ್ಲಿ ಕೃಷಿ ಅಧಿಕಾರಿಗಳು ತಾಲ್ಲೂಕಿನ ಕೆಂಭಾವಿ, ಹುಣಸಗಿ, ಕಕ್ಕೇರಾ ಮತ್ತು ಸುರಪುರದಲ್ಲಿ ಕಳೆದ ಒಂದು ವಾರದಿಂದ ರಸಗೊಬ್ಬರ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ರಸಗೊಬ್ಬರದ ಅಂಗಡಿಗಳಲ್ಲಿ ಈಗಾಗಲೇ ಸಾಕಷ್ಟು ಬಿತ್ತನೆ ಬೀಜ ಸಂಗ್ರಹಿಸಲಾಗಿದೆ.
ಈ ನಿಟ್ಟಿನಲ್ಲಿ ಅಂಗಡಿಗಳಲ್ಲಿ ಪರಿಶೀಲನೆ ನಡೆಸಿದ ಅಧಿಕಾರಿಗಳು ಬಿತ್ತನೆ ಬೀಜದ ಗುಣಮಟ್ಟ ಪರಿಶೀಲಿಸಲು ಮಾದರಿ ಸಂಗ್ರಹಿಸಿ ಗಂಗಾವತಿಯ ಪ್ರಯೋಗಾಲಯಕ್ಕೆ ಕಳಿಸುತ್ತಿದ್ದಾರೆ.
ನಗರದ ವಿವಿಧ ಅಂಗಡಿಗಳಿಗೆ ಭೇಟಿ ನೀಡಿದ ಭೀಮರಾಯ ಹವಾಲ್ದಾರ್, ‘ಗುಣಮಟ್ಟದ ಬಿತ್ತನೆ ಬೀಜಗಳನ್ನು ಮಾರಾಟ ಮಾಡುವಂತೆ ವರ್ತಕರಿಗೆ ಸೂಚಿಸಿದರು. ಕಳಪೆ ಬೀಜ ಕಂಡು ಬಂದಲ್ಲಿ ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಸಿದರು.
‘ರೈತರು ಅಧಿಕೃತ ಮಾರಾಟಗಾರರಲ್ಲಿ ಬಿತ್ತನೆ ಬೀಜ ಖರೀದಿಸಬೇಕು. ಕಡ್ಡಾಯವಾಗಿ ರಸೀದಿ ಪಡೆಯಬೇಕು. ದರ ಕಡಿಮೆ ಇದೆ ಎಂದು ಅನಧಿಕೃತ ಮಾರಾಟಗಾರರಲ್ಲಿ ಖರೀದಿಸಿ ಮೋಸ ಹೋಗಬಾರದು’ ಎಂದು ತಿಳಿಸಿದರು.
‘ಇಲಾಖೆಯಿಂದ ಈಗಾಗಲೇ ತೊಗರಿ, ಹೆಸರು, ಸಜ್ಜೆ, ಸೂರ್ಯಕಾಂತಿ ಬಿತ್ತನೆ ಬೀಜಗಳಿಗೆ ಬೇಡಿಕೆ ಸಲ್ಲಿಸಲಾಗಿದೆ. ಒಂದು ವಾರದಲ್ಲಿ ದಾಸ್ತಾನು ಬರಲಿದ್ದು ರೈತರಿಗೆ ರಿಯಾಯತಿ ದರದಲ್ಲಿ ಪೂರೈಸಲಾಗುವುದು’ ಎಂದು ತಿಳಿಸಿದರು.
‘ಬೆಳೆ ವಿಮೆ ಕುರಿತು ರೈತರಲ್ಲಿ ಯಾವುದೇ ಗೊಂದಲ ಬೇಡ. ‘ಸಂರಕ್ಷಣೆ.ಕರ್ನಾಟಕ.ಜಿಓವಿ.ಇನ್’ ಈ ಪೋರ್ಟಲ್‍ನಲ್ಲಿ ವರ್ಷ, ಆಧಾರ್ ಸಂಖ್ಯೆ ಅಥವಾ ಅರ್ಜಿ ಸಂಖ್ಯೆ ಅಥವಾ ಮೋಬೈಲ್ ಸಂಖ್ಯೆ ನಮೂದಿಸಿ ಖುದ್ದಾಗಿ ಪರಿಶೀಲಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿ ಬೇಕಾದಲ್ಲಿ ರೈತ ಸಂಪರ್ಕ ಕೇಂದ್ರಗಳಿಂದ ಸಲಹೆÉ ಪಡೆಯಬಹುದು’ ಎಂದು ತಿಳಿಸಿದರು.
ತಾಂತ್ರಿಕ ಅಧಿಕಾರಿ ವಿನಾಯಕ, ಕೃಷಿ ಅಧಿಕಾರಿಗಳಾದ ಶ್ರೀಧರ, ಸಿದ್ದಾರ್ಥ ಪಾಟೀಲ, ಮಹಾನಂದಿ ಇತರರು ಭಾಗವಹಿಸಿದ್ದರು.