ಕೊಪ್ಪಳ: ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳನ್ನು ಅನಾವರಣಗೊಳಿಸುವುದಕ್ಕೆ ಪ್ರತಿಭಾ ಕಾರಂಜಿಯಂತಹ ವೇದಿಕೆಗಳ ಅಗತ್ಯವಿದೆ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಪ್ರಕಾಶ ತಗಡಿನಮನಿ ಹೇಳಿದರು.
ಅವರು ತಾಲೂಕಿನ ಅಳವಂಡಿ ಗ್ರಾಮದ ಶಾಂತಿನಿಕೇತನ ಪ್ರೌಢ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾಂಜಿಯ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಪ್ರತಿಯೊಂದು ಮಗುವಿನಲ್ಲಿ ಒಂದಲ್ಲ ಒಂದು ಪ್ರತಿಭೆಯು ಅಡಗಿರುತ್ತದೆ. ಅಂತಹ ಪ್ರತಿಭೆಯು ಬೆಳಕಿಗೆ ಬರಬೇಕಾದರೇ ಪ್ರತಿಭಾ ಕಾರಂಜಿಯಂತಹ ಅನೇಕ ಕಾರ್ಯಕ್ರಮಗಳ ಅಗತ್ಯವಿದೆ. ಸರಕಾರವು ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ.ಅಂತಹ ಯೋಜನೆಗಳನ್ನು ಮಕ್ಕಳು ಸರಿಯಾದ ರೀತಿಯಲ್ಲಿ ಬಳಿಸಿಕೊಂಡು ಶೈಕ್ಷಣಿಕವಾಗಿ ಮುಂದೆ ಬರಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ ಮಾತನಾಡಿ, ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಶಿಕ್ಷಕರ ಜೊತೆಯಲ್ಲಿ ಪಾಲಕರು ಕೂಡಾ ಕೈಜೊಡಿಸಬೇಕು.ಮಕ್ಕಳ ಕಲಿಕೆಗೆ ಪೂರಕವಾದ ವಾತವರಣವನ್ನು ನಿರ್ಮಿಸಿ ಕೊಡಬೇಕಾದದ್ದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ.ಶಿಕ್ಷಕರು ಮಕ್ಕಳ ಮಾನಸಿಕ ಮಟ್ಟವನ್ನು ಅರಿತು ಬೋಧನೆಯನ್ನು ಮಾಡುವುದರ ಜೊತೆಯಲ್ಲಿ ಮಕ್ಕಳ ಹೆಚ್ಚು ಹೆಚ್ಚು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕೆಂದರು.
ತಾ.ಪಂ.ಸದಸ್ಯರಾದ ಸಿದ್ದಲಿಂಗಸ್ವಾಮಿ ಇನಾಮದಾರ ಮಾತನಾಡಿ, ಅಳವಂಡಿ ಗ್ರಾಮವು ಪ್ರಾಚೀನ ಕಾಲದಿಂದಲೂ ಪ್ರಸಿದ್ದಿಯನ್ನು ಪಡೆದ ಗ್ರಾಮವಾಗಿದೆ. ಪ್ರತಿಭಾ ಕಾಂಜಿಯಂತಹ ಕಾರ್ಯಕ್ರಮದಲ್ಲಿ ಭಾಗವಹಿಸುವುದರ ಮೂಲಕ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗ್ರಾಮದ ಹೆಸರು ಬರುವ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕು. ಶಾಲೆಯಲ್ಲಿ ಶಿಕ್ಷಕರು ಮಾಡುವ ಪಾಠದ ಬಗ್ಗೆ ವಿದ್ಯಾರ್ಥಿಗಳು ಅಭ್ಯಾಸ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಂತಿನಿಕೇತನ ಪ್ರೌಢ ಶಾಲೆಯ ಅಧ್ಯಕ್ಷರಾದ ಉಮೇಶಗೌಡ ಮಾಲಿಪಾಟೀಲ ವಹಿಸಿದ್ದರು. ಕಾರ್ಯಕ್ರಮದ ಕುರಿತು ಬಿ.ಆರ್.ಪಿ.ಚಂದ್ರು ಹೆಳವರ ಪ್ರಾಸ್ತಾವಿಕವಾಗಿ ಮಾತನಾಡಿದರು. ದಿವ್ಯ ಸಾನಿಧ್ಯವನ್ನು ಅಳವಂಡಿಯ ಸಿದ್ದೇಶ್ವರ ಮಠದ ಸಿದ್ದವೀರ ದೇವರು ವಹಿಸಿದ್ದರು.
ಕಾರ್ಯಕ್ರಮದಲ್ಲಿ ವಿಕಲಚೇತನ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಅಂದಪ್ಪ ಬೋಳರಡ್ಡಿ, ಸರಕಾರಿ ನೌಕರರ ಸಂಘದ ಜಿಲ್ಲಾ ಕಾರ್ಯಕಾರಿ ಸಮಿತಿಯ ಸದಸ್ಯರಾದ ಗುರುರಾಜ ಪಾಟೀಲ, ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ನಿಂಗಪ್ಪ ಬೂಧಿಹಾಳ,ರವಿಕುಮಾರ,ಅಶೋಕ ತವದಿ,ಸ್ಕೌಟ್ಸ್ ಮತ್ತು ಗೈಡ್ಸ್ ನ ತಾಲೂಕ ಕಾರ್ಯದರ್ಶಿ ಮಲ್ಲಪ್ಪ ಗುಡದನ್ನವರ,ಗ್ರಾ.ಪಂ.ಸದಸ್ಯರಾದ ಗುರುಬಸವರಾಜ ಹಳ್ಳಿಕೇರಿ, ಮಂಜುನಾಥ ಹಿರೇಮಠ,ರೇಣುಕಪ್ಪ ಹಳ್ಳಿಕೇರಿ,ನಜೀರಸಾಬ ಬಿಸರಳ್ಳಿ ಮುಂತಾದವರು ಹಾಜರಿದ್ದರು.