ಕಲಬುರಗಿ: ಶಂಕರಾ ರೆಡ್ಡಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಈ ಬಾರಿಯ ಎಸ್ ಎಸ್ ಎಲ್ ಸಿ ಫಲಿತಾಂಶ ಕುಸಿತದ ಕುರಿತು ಎಲ್ಲರೂ ಆತ್ಮಾವಲೋಕನ ಮಾಡುವ ಅಗತ್ಯವಿದೆಯೆಂದು ಆಕಾಶವಾಣಿ ನಿವೃತ ಕಾರ್ಯಕ್ರಮ ನಿರ್ವಹಣಾಧಿಕಾರಿ ಸಲಹೆ ನೀಡಿದರು.
ಕಲಬುರಗಿಯಲ್ಲಿ ಮೇ 26 ರಂದು ಕರ್ನಾಟಕ ರಾಜ್ಯ ಸರಕಾರಿ ನಿವೃತ್ತ ಅಲ್ಪಸಂಖ್ಯಾತರ ನೌಕರರ ಸಂಘ ಎಸ್ ಎಸ್ ಎಲ್ ಸಿ ಮತ್ತು ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳ ಅಭಿನಂದನೆ ಸಮಾರಂಭದಲ್ಲಿ ಮಾತನಾಡಿ ಅವರು ಫಲಿತಾಂಶದ ಹಿನ್ನಡೆಗೆ ಶಿಕ್ಷಣ ಇಲಾಖೆಯನ್ನು ಮಾತ್ರ ಬೊಟ್ಟು ಮಾಡದೆ ಶಿಕ್ಷಕರು ಪಾಲಕರು ಮತ್ತು ಸ್ವಯಂ ಸೇವಾ ಸಂಸ್ಥೆಗಳು ಜಂಟಿಯಾಗಿ ಚಿಂತನೆ ಮಾಡಿ ಫಲಿತಾಂಶದ ಹೆಚ್ಚಳದ ಬಗ್ಗೆ ಮಾರ್ಗೋಪಾಯಗಳನ್ನು ಕಂಡುಕೊಳ್ಳುವುದು ಅತ್ಯಂತ ಅಗತ್ಯ ಎಂದು ಹೇಳಿದರು.
ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಶಿಕ್ಷಣದ ಉನ್ನತಿಗೆ ತಜ್ಞರ ತಂಡವನ್ನು ರಚಿಸಿ ಶಿಕ್ಷಣ ಇಲಾಖೆ ಮತ್ತು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಸಹಯೋಗದೊಂದಿಗೆ ಫಲಿತಾಂಶ ವರ್ಧನೆಗೆ ನೀಲ ನಕಾಶೆ ರಚಿಸಿ ಅನುಷ್ಠಾನಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಈಗಾಗಲೇ ವಿದ್ಯಾರ್ಥಿಗಳಿಗೆ “ಕಲಿಕಾಸರೆ’ ಪೂರಕ ಪಠ್ಯ ಪುಸ್ತಕ ವಿತರಿಸಿ ಫಲಿತಾಂಶ ವರ್ಧನೆಗೆ ಶ್ರಮಿಸಿದೆ.
ಕರ್ನಾಟಕ ರಾಜ್ಯ ಸರಕಾರಿ ನಿವೃತ್ತ ಅಲ್ಪಸಂಖ್ಯಾತರ ನೌಕರರ ಸಂಘದಂತಹ ಸ್ವಯಂ ಸೇವಾ ಸಂಘಟನೆಗಳು ಕೈಜೋಡಿಸುವುದು ಅಗತ್ಯ.ಎಸ್ಸೆಸ್ಸೆಲ್ಸಿ- ಪಿಯುಸಿ ಫಲಿತಾಂಶದಲ್ಲಿ ವಿದ್ಯಾರ್ಥಿನಿಯರು ಮೇಲುಗೈ ಸಾಧಿಸಿರುವುದು ಹೆಮ್ಮೆಯ ಸಂಗತಿ. ಸಾಧಕರು ಉತ್ತಮ ಭವಿಷ್ಯ ರೂಪಿಸಿ ಸಮಾಜಮುಖಿಯಾಗಿ ಕೊಡುಗೆ ನೀಡುವ ಜವಾಬ್ದಾರಿ ಇದೆ ಎಂದು ಹೇಳಿದರು.
ಪ್ರತಿಭಾವಂತ ವಿದ್ಯಾರ್ಥಿಗಳ ಜೊತೆ ಕಡಿಮೆ ಫಲಿತಾಂಶ ಪಡೆದವರ ಬಗ್ಗೆ ಕೂಡ ಗಮನ ಕೊಡಬೇಕು.ಮಾನವೀಯ ಗುಣದಿಂದ ವಿದ್ಯಾರ್ಥಿಗಳು ಭವಿಷ್ಯ ಕಂಡುಕೊಳ್ಳಬೇಕು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ರೂಪಿಸಲು ಅಧ್ಯಾಪಕರು ನಿರಂತರ ಜ್ಞಾನ ವೃದ್ಧಿಗೆ ಆಸಕ್ತಿ ವಹಿಸಬೇಕು ಎಂದು ನಿವೃತ್ತ ಪ್ರಾಂಶುಪಾಲರಾದ ಅಲ್ಲಾವುದ್ದೀನ್ ಸಾಗರ್ ಹೇಳಿದರು.
ಇಂಜಿನಿಯರ್ ಹಾಗು ವೈದ್ಯರಷ್ಟೇ ಆಗುವ ಕನಸು ಬಿಟ್ಟು ಆಡಳಿತ ರಂಗ ಸೇರಿದಂತೆ ಇತರ ಕ್ಷೇತ್ರಗಳಿಗೆ ಪ್ರವೇಶ ಮಾಡಬೇಕು ಎಂದು ನೌಕರ ಸಂಘದ ಉಪಾಧ್ಯಕ್ಷರಾದ ಡಾ. ಅಸ್ಲಾಂ ಸಯೀದ್ ಹೇಳಿದರು.
ಕಾರ್ಯಕ್ರಮದಲ್ಲಿ ಪ್ರತಿಭಾವಂತ ಎಸ್ಸೆಸ್ಸೆಲ್ಸಿ ಯ 23 ಹಾಗು ಪಿಯುಸಿಯ 12ವಿದ್ಯಾರ್ಥಿಗಳಿಗೆ ಪ್ರಮಾಣ ಪಾತ್ರ, ಸ್ಮರಣಿಕೆ ಶಾಲು ಹಾರ ನೀಡಿ ಗೌರವಿಸಲಾಯಿತು.ಸಂಘದ ಅಧ್ಯಕ್ಷರಾದ ಸಯ್ಯದ್ ನಾರುದ್ದೀನ್ ಮುತಾವಲಿ ಅಧ್ಯಕ್ಷತೆ ವಹಿಸಿದ್ದರು ಗೌರವಾಧ್ಯಕ್ಷ ಡಾ. ಎಂ ಎಂ ಬೇಗ್,ಕಾರ್ಯಾಧ್ಯಕ್ಷ ಅಸದ್ ಅಲಿ ಅನ್ಸಾರಿ ಉಪಸ್ಥಿತರಿದ್ದರು.
ಕಾರ್ಯದರ್ಶಿ ನವಾಬ್ ಖಾನ್ ನಿರೂಪಣೆ ಮಾಡಿದರು. ಖಾಜಾ ಮೊಹಮ್ಮದ್ ಗೇಸುದರಾಜ್ ಪ್ರಾರ್ಥನಾ ಗೀತೆ ಹಾಡಿ ನಂತರ ಸ್ವಾಗತಿಸಿದರು.