ಕಲಬುರಗಿ: ಜನರು ಆಗಾಗ್ಗೆ ದೇಶ ನಮಗೇನು ಮಾಡಿದೆಯೆಂದು ಕೇಳುತ್ತಾರೆ. ದೇಶದಿಂದ ಎಲ್ಲಾ ಸೌಕರ್ಯಗಳು, ಶಿಕ್ಷಣವನ್ನು ಪಡೆದ ಮೇಲೆ ವ್ಯಕ್ತಿ ದೊಡ್ಡವನಾಗಲು ಸಾಧ್ಯ. ಸಮಾಜದಿಂದ ಪಡೆದ ಸೇವೆಯನ್ನು ಸಮಾಜದ ಒಳತಿಗಾಗಿ ಬಳಸುವ ಮೂಲಕ ಸಮಾಜದ ಋಣ ತೀರಿಸುವ ಕಾರ್ಯವನ್ನು ಮಾಡುವ ಮೂಲಕ ದೇಶದ ಕೀರ್ತಿಯನ್ನು ವಿಶ್ವದೆಲ್ಲೆಡೆ ಪಸರಿಸುವ ಸೇವೆ ಮಾಡಿಯೆಂದು ರಾಜ್ಯ ಹೈಕೋರ್ಟನ ವಿಶ್ರಾಂತ ನ್ಯಾಯಾಧೀಶ ನ್ಯಾ. ಅರಳಿ ನಾಗರಾಜ ಯುವಕರಿಗೆ ಸಲಹೆ ನೀಡಿದರು.
ಅವರು ಕಾಳಗಿ ತಾಲೂಕಿನ ಟೆಂಗಳಿಯ ಸರ್ಕಾರಿ ಪಿಯು ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ’ಸುಂದರ ಜೀವನಕ್ಕಾಗಿ ಪ್ರೇರಣೋಪನ್ಯಾಸ’ ಎಂಬ ವಿಶೇಷ ಉಪನ್ಯಾಸ ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು. ಉಜ್ವಲ ಭವಿಷ್ಯ ಯುವಶಕ್ತಿಯ ಕೈಯಲ್ಲಿದೆ. ವಿದ್ಯಾರ್ಥಿಗಳು ಮತ್ತು ಯುವಕರು ಮಹಾನ ವ್ಯಕ್ತಿಗಳ ತತ್ವ, ಮಾತುಗಳನ್ನು ಆಲಿಸುವುದು, ಗ್ರಹಿಸುವುದು, ಸ್ವೀಕರಿಸುವುದು ಮತ್ತು ಪಾಲಿಸುವ ಕಾರ್ಯ ಮಾಡಬೇಕು. ಜೀವನದಲ್ಲಿ ನಿಶ್ಚಿತ ಮತ್ತು ದೃಢಸಂಕಲ್ಪದೊಂದಿಗೆ ಮುನ್ನುಗ್ಗಿ. ಭೃಷ್ಟಾಚಾರ, ಜಾತಿಯತೆ, ಅಪರಾಧ, ಅನೈತಿಕ ಚಟುವಟಿಕೆಗಳಿಂದ ದೂರವಿರಿ. ಸೋಲನ್ನು ಸವಾಲಾಗಿ ಸ್ವೀಕರಿಸಿ. ಸಕಾರಾತ್ಮಕ ಚಿಂತೆನೆ ನಿಮ್ಮದಾಗಿರಲಿ. ಆದರ್ಶ ಗುಣಗಳನ್ನು ಮೈಗೂಡಿಸಿಕೊಂಡು ದೇಶದ ಅಮೂಲ್ಯವಾದ ಆಸ್ತಿ ನೀವಾಗಬೇಕೆಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.
ಮೌಲ್ಯಯುತ ಶಿಕ್ಷಣ ಇಂದಿನ ತುರ್ತು ಅಗತ್ಯವಾಗಿದೆ. ನಿರಂತರವಾಗಿ ಅಧ್ಯಯನಶೀಲರಾಗಿ. ಪರಸ್ಪರ ಪ್ರೀತಿ, ಶಾಂತಿ, ಸಹಕಾರ, ಸಹಬಾಳ್ವೆಯಿಂದ ಬದುಕಿ. ಬಂದ ಕಷ್ಟ-ಸುಖಗಳನ್ನು ಸಮಾನವಾಗಿ ಸ್ವೀಕರಿಸಿ. ಎಂದಿಗೂ ಕೂಡಾ ಆತ್ಮಸಾಕ್ಷಿಗೆ ವಿರುದ್ಧವಾಗಿ ನಡೆದುಕೊಳ್ಳಬೇಡಿ. ಪ್ರತಿಯೊಬ್ಬರು ಕಡ್ಡಾಯ ಮತ್ತು ಸೂಕ್ತ ವ್ಯಕ್ತಿಗೆ ಮತದಾನ ಮಾಡಿ. ಸರ್ಕಾರಿ ನೌಕರಿಯ ಮೇಲೆಯೇ ಅವಲಂಬಿತವಾಗದೆ, ಸ್ವಯಂ ಉದ್ಯೋಗಿಗಳಾಗಿಯೆಂದು ಅನೇಕ ಸಲಹೆಗಳನ್ನು ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಉಪನ್ಯಾಸಕ, ಚಿಂತಕ ಪ್ರೊ.ಎಚ್.ಬಿ.ಪಾಟೀಲ, ಹಣ, ಅಧಿಕಾರ, ಅಂತಸ್ಥಿದ್ದರೆ ಜೀವನ ಸುಂದರವಾಗುವುದಿಲ್ಲ. ಬದಲಿಗೆ ಜೀವನದ ವಾಸ್ತವಿಕತೆಯನ್ನು ಅರ್ಥ ಮಾಡಿಕೊಳ್ಳಬೇಕು. ಅಹಂಕಾರ, ದ್ವೇಷ, ಅಸೂಯೆ,ಸ್ವಾರ್ಥತೆಯನ್ನು ಬಿಟ್ಟು, ಜೀವನ ಮತ್ತು ಮಾನವೀಯ ಮೌಲ್ಯಗಳಾದ ಸುಜ್ಞಾನ, ಪರೋಪಕಾರ,ಕರುಣೆ, ಸಮಾಜ ಸೇವಾ ಮನೋಭಾವ, ಪ್ರೀತಿ,ಶಾಂತಿ, ತಂದೆ-ತಾಯಿ,ಗುರು-ಹಿರಿಯರು ಮತ್ತು ದೇಶಕ್ಕೆ ಗೌರವ ಸಲ್ಲಿಸುವ, ಸಂಸ್ಕಾರದಂತಹ ಜೀವನದ ಮೌಲ್ಯಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡು ಸಾಗಿದರೆ, ಬದುಕು ಸುಂದರ ಹಾಗೂ ಶ್ರೀಮಂತವಾಗುತ್ತದೆಯೆಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲೆ ಡಾ.ಮಂಜುಳಾ ಪಾಟೀಲ, ಉಪನ್ಯಾಸಕರಾದ ವಸುಂಧರಾ ದೇಶಪಾಂಡೆ, ರಾಜಕುಮಾರ ಕೋರಿ, ಪ್ರಮುಖರಾದ ಗೌಡೇಶ ಬಿರಾದಾರ, ಡಾ.ನೀಲಾಂಬಿಕಾ ಚೌಕಿಮಠ, ಜ್ಯೋತಿ ಬಿರಾದಾರ, ಶಿವರಾಜ ಬಿರಾದಾರ ಸೇರಿದಂತೆ ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.