ಸುರಪುರ: ಕ್ಷೇತ್ರದ ಶಾಸÀಕರು ಹಾಗೂ ಕರ್ನಾಟಕ ಉಗ್ರಾಣ ನಿಗಮದ ಅಧ್ಯಕ್ಷರಾಗಿದ್ದ ದಿ.ರಾಜಾ ವೆಂಕಟಪ್ಪ ನಾಯಕ ಅವರ ನಿಧನ ದಿಂದ ಖಾಲಿಯಾಗಿದ್ದ ಸ್ಥಾನಕ್ಕೆ ಮೇ 7 ರಂದು ಉಪ ಚುನಾವಣೆ ನಡೆದಿತ್ತು,ನಂತರ ಜೂನ್ 4 ರಂದು ಯಾದಗಿರಿ ನಗರದಲ್ಲಿ ನಡೆದ ಪಮ ಎಣಿಕೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹಾಗೂ ದಿ.ರಾಜಾ ವೆಂಕಟಪ್ಪ ನಾಯಕ ಅವರ ಸುಪುತ್ರ ರಾಜಾ ವೇಣುಗೊಪಾಲ ನಾಯಕ ಅವರು ಗೆಲುವು ಸಾಧಿಸುವುದು ನಿಚ್ಚಳವಾಗುತ್ತಿದ್ದಂತೆ ನಗರ ಸೇರಿ ತಾಲೂಕಿನಾದ್ಯಂತ ಕಾಂಗ್ರೆಸ್ ಪಕ್ಷದ ಮುಖಂಡರ ಹಾಗೂ ಕಾರ್ಯಕರ್ತರ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು.
ಮಧ್ಯಾನ 12 ಗಂಟೆಯ ವೇಳೆಗೆ ಇನ್ನು 5 ಸುತ್ತುಗಳ ಮತ ಎಣಿಕೆ ಬಾಕಿ ಇರುವಾಗಲೆ ಆಗಲೇ ಕಾಂಗ್ರೆಸ್ ಹೆಚ್ಚಿನ ಮತಗಳಿಂದ ಮುಂದೆ ಇರುವುದನ್ನು ತಿಳಿದ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ನಗರದಾದ್ಯಂತ ಬೈಕ್‍ಗಳಿಗೆ ಪಕ್ಷದ ಧ್ವಜಗಳನ್ನು ಕಟ್ಟಿಕೊಂಡು ರ್ಯಾಲಿಯನ್ನು ನಡೆಸಿದರು.ಅಲ್ಲದೆ ಎಲ್ಲರು ಗುಲಾಲು ಎರಚಿ ಸಿಹಿ ಹಂಚುತ್ತಾ ಎಲ್ಲೆಡೆ ದಿ.ರಾಜಾ ವೆಂಕಟಪ್ಪ ನಾಯಕ ಅವರ ಹಾಗೂ ನೂತನ ಶಾಸಕ ರಾಜಾ ವೇಣುಗೋಪಾಲ ನಾಯಕ ಅವರ ಮತ್ತು ಕಾಂಗ್ರೆಸ್ ಪಕ್ಷದ ಕುರಿತು ಘೋಷಣೆಗಳನ್ನು ಕೂಗುತ್ತಾ ಎಲ್ಲೆಡೆ ಸಂಚರಿಸಿದ್ದು ಕಂಡುಬಂತು.
ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮಹಾತ್ಮ ಗಾಂಧಿ ಮೂರ್ತಿಗೆ ಹಾಗೂ ಡಾ:ಬಿ.ಆರ್.ಅಂಬೇಡ್ಕರ್ ಅವರ ಮೂರ್ತಿಗೆ ಮಾಲಾರ್ಪಣೆ ಮಾಡಿ,ಪಟಾಕಿ ಸಿಡಿಸಿ ಗುಲಾಲು ಎರಚಿ ಸಂಭ್ರಮಾಚರಣೆ ನಡೆಸಿದರು.
ಅಲ್ಲದೆ ರಾಜಾ ವೇಣುಗೊಪಾಲ ನಾಯಕ ಅವರು ಕೂಡ ಯಾದಗಿರಿಯಿಂದ ಮತ ಎಣಿಕೆ ಮುಗಿಸಿಕೊಂಡು ಶಾಸಕರಾಗಿ ಸುರಪುರ ನಗರಕ್ಕೆ ಆಗಮಿಸುತ್ತಿದ್ದಂತೆ ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ವೃತ್ತದಲ್ಲಿ ನಾಲ್ವಡಿ ರಾಜಾ ವೆಂಕಟಪ್ಪ ನಾಯಕರ ಪುತ್ಥಳಿಗೆ ಮಾಲಾರ್ಪಣೆ ಮಾಡಿ,ನಂತರ ನಗರದಲ್ಲಿ ಅದ್ಧೂರಿ ಮೆರವಣಿಗೆಯ ಮೂಲಕ ಸ್ವಾಗತಿಸಲಾಯಿತು.
ಈ ಸಂದರ್ಭದಲ್ಲಿ ಮುಖಂಡರಾದ ವಿಠಲ್ ಯಾದವ್,ವೆಂಕೋಬ ಯಾದವ್, ರಾಜಾ ವಾಸುದೇವ ನಾಯಕ,ರಾಜಾ ಸಂತೋಷ ನಾಯಕ, ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜಾ ಕುಮಾರ ನಾಯಕ,ರಾಜಾ ವಿಜಯಕುಮಾರ ನಾಯಕ,ನಿಂಗರಾಜ ಬಾಚಿಮಟ್ಟಿ,ಚಂದ್ರಶೇಖರ ದಂಡಿನ್,ಅಬ್ದುಲ್ ಅಲೀಂ ಗೋಗಿ,ಭೀಮರಾಯ ಮೂಲಿಮನಿ,ರಾಜಾ ಸುಶಾಂತ ನಾಯಕ,ರಮೇಶ ದೊರೆ ಆಲ್ದಾಳ,ವೆಂಕಟೇಶ ಬೇಟೆಗಾರ,ಮಹೇಶ ಯಾದವ್,ಮಲ್ಲಿಕಾರ್ಜುನರಡ್ಡಿ ಅಮ್ಮಾಪುರ,ಹಣಮಂತ ನಾಯಕ ಠಣಕೇದಾರ, ಶರಣು ಸೋಲಾಪುರ ಸೇರಿದಂತೆ ಸಾವಿರಾರು ಜನರು ಭಾಗವಹಿಸಿದ್ದರು.