ಸುರಪುರ: ಗ್ರಾಮೀಣ ಪ್ರದೇಶದ ಜನತೆಯ ಪಾಲಿಗೆ ವಿಶ್ವಾಸ ಹಾಗೂ ನಂಬಿಕೆ ಕರ್ನಾಟಕ ಗ್ರಾಮೀಣ ಬ್ಯಾಂಕ್ ಆಗಿದೆ. ಬ್ಯಾಂಕಿಗೆ ಆಗಮಿಸುವ ರೈತರ ನೋವಿಗೆ ನಾವು ಸದಾ ಸ್ಪಂದಿಸಬೇಕು. ಸೌಜನ್ಯದಿಂದ ವರ್ತಿಸಿ ಕೆಲಸ ಮಾಡಿಕೊಟ್ಟಾಗ ಹೃದಯ ಪ್ರೀತಿಯನ್ನು ಧಾರೆ ಎರೆದು ಕೃತಜ್ಞತೆಯನ್ನು ಅರ್ಪಿಸುತ್ತಾರೆ ಎಂದು ತಮ್ಮ ಬ್ಯಾಂಕಿನ ಸಿಬ್ಬಂದಿಗೆ ವರ್ಗಾವಣೆಗೊಂಡ ಪೇಠ ಅಮ್ಮಾಪುರದ ಶಾಖಾ ವ್ಯವಸ್ಥಾಪಕ ವಿನೋದ ಪಿ.ನಾಯಕ ಕಿವಿ ಮಾತು ಹೇಳಿದರು.
ತಾಲ್ಲೂಕಿನ ಪೇಠ ಅಮ್ಮಾಪುರ ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಶಾಖಾಧಿಕಾರಿಯಾಗಿ ಸೇವೆ ಸಲ್ಲಿಸಿ ವರ್ಗಾವಣೆಯಾದಾಗ ಗ್ರಾಮಸ್ಥರು ನೀಡಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿ, ಸರ್ಕಾರಿ ಹುದ್ದೆಯಲ್ಲಿರುವಾಗ ವರ್ಗಾವಣೆಯಾಗುವುದು ಸಾಮಾನ್ಯ. ಆದರೆ ನಾವು ಸಲ್ಲಿಸಿದ ಸೇವೆ ಜನಮಾಸದಲ್ಲಿ ಉಳಿಯುವಂತೆ ಮಾಡಬೇಕು. ಕಳೆದ ಮೂರು ವರ್ಷ ಇಲ್ಲಿನ ಶಾಖೆಯಲ್ಲಿಯೇ ಕ್ಲರ್ಕ್, ಫಿಲ್ಡ್ ಅಧಿಕಾರಿ ಹಾಗೂ ಶಾಖಾ ವ್ಯವಸ್ಥಾಪಕನಾಗಿ ಸೇವೆ ಸಲ್ಲಿಸಿರುವೆ ಎಂಬುವುದು ಹೆಮ್ಮೆಯ ಸಂಗತಿ. ಇಲ್ಲಿನ ಶಾಖೆ ಹಾಗೂ ಗ್ರಾಮಸ್ಥರ ಪ್ರೀತಿಯನ್ನು ಎಂದಿಗೂ ಮರೆಯವುದಿಲ್ಲ. ಬ್ಯಾಂಕ್ ಸಿಬ್ಬಂದಿಗೆ ಕೆಲಸ ನಿರ್ವಹಿಸಲು ಇಲ್ಲಿನ ಜನತೆ ತುಂಬಾ ಸಹಕಾರ ನೀಡುತ್ತಾರೆ ಎಂದು ಹೇಳಲು ಖುಷಿಯಾಗುತ್ತದೆ. ನಾನು ಸಹ ರೈತರಿಗೆ ಹೆಚ್ಚಿನ ಕೃಷಿ ಸಾಲ ನೀಡಿರುವುದು ಸಮಧಾನ ತಂದಿದೆ. ರೈತರು ಸಹ ಸಾಲ ಪಡೆದಾಗ ಅವಶ್ಯಕತೆಯು ಸಾಲ ಮರು ಪಾವತಿಸುವಾಗಲೂ ಅಷ್ಟೆ ಅಗತ್ಯವೆಂದು ಭಾವಿಸಿ ಸಾಲ ತಿರುವಳಿ ಮಾಡಬೇಕು ಎಂದು ಸಲಹೆ ನೀಡಿದರು.
ಗ್ರಾಮದ ಮುಖಂಡರಾದ ಬಸವರಾಜ ಗುಡ್ಡಡಗಿ, ಶೇಖಪ್ಪ ಮಂಗಳೂರು, ಅನೀಲಕುಮಾರ, ವಿರುಪಾಕ್ಷಿ, ಭೀಮರಾಯ, ದೇವಪ್ಪ ಜಾಲಿಬೆಂಚಿ, ಲಾಲನ್ ಖಾಜಾ ಹುಸೇನ್, ಅಯ್ಯಣ್ಣ ಉಪಸ್ಥಿತರಿದ್ದರು.