ಕೊಪ್ಪಳ: ಇತಿಹಾಸದ ಅರಿವು ಇಲ್ಲದವರು ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯವಿಲ್ಲ ಎಂದು ಕರ್ನಾಟಕ ವಿವಿ ನಿವೃತ್ತ ಪ್ರಾಧ್ಯಾಪಕ ಡಾ.ಆರ್.ಎಂ.ಷಡಕ್ಷರಯ್ಯ ಹೇಳಿದರು.
ಅವರು ತಾಲ್ಲೂಕಿನ ಇರಕಲ್ಲಗಡ ಗ್ರಾಮದ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಇತಿಹಾಸ ತಜ್ಞ ಲಿಂ.ಬಿ.ಸಿ.ಪಾಟೀಲ ದತ್ತಿ ಉಪನ್ಯಾಸ ಹಾಗೂ ಲಿಂ.ಮರಿಗೌಡ ಮಲ್ಲನಗೌಡ ದತ್ತಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ, ಜಿಲ್ಲೆಯು ಜೈನರ, ಬೌದ್ಧರ ಬಹುದೊಡ್ಡ ಕೇಂದ್ರ ಆದಿ ಮಾನವನ ಇತಿಹಾಸದಿಂದ ಹಿಡಿದು ರಾಜ, ಮಹಾರಾಜರ ಆಳ್ವಿಕೆ ಒಳಗಾದ ನೆಲ. ಇಲ್ಲಿನ ಸ್ಮಾರಕಗಳು, ಶಿಲಾಶಾಸನಗಳು ತಮ್ಮದೇ ಆದ ವಿಶೇಷತೆಯನ್ನು ಹೊಂದಿವೆ. ಇತಿಹಾಸದ ಮೇಲೆ ಬೆಳಕು ಚೆಲ್ಲಿವೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಿರಿಯ ಸಾಹಿತಿ ಈಶ್ವರ ಹತ್ತಿ, ಲಿಂ.ಬಿ.ಸಿ.ಪಾಟೀಲ ದಣಿವರಿಯದ ಚೇತನ. ತಮ್ಮ 94ನೇ ಇಳಿವಯಸ್ಸಿನಲ್ಲಿಯೂ ಸಂಶೋಧನೆ ಮಾಡಬೇಕು ಎಂಬ ಹಂಬಲ ಹೊಂದಿದ್ದರು. ಶಿಕ್ಷಕ ವೃತ್ತಿಯಿಂದ ನಿವೃತ್ತಿಗೊಂಡು ದುರ್ಗಮವಾದ ಸಂಶೋಧನಾ ವೃತ್ತಿಯನ್ನು ಕೈಗೊಂಡು ಸುಮಾರು 10 ಪುಸ್ತಕಗಳನ್ನು ಪ್ರಕಟಿಸಿದರು. ಅವರ ಅವಿರತ ಶ್ರಮ, ಧೀಮಂತಿಕೆಯಿಂದ ಜಿಲ್ಲೆಯ ಇತಿಹಾಸ ಪ್ರಜ್ಞೆ ಉಳಿದುಕೊಂಡು ಬಂದಿದೆ ಎಂದರು.
ನಂತರ ಡಿವೈಎಸ್‍ಪಿ ಡಾ. ಬಿ.ಪಿ. ಚಂದ್ರಶೇಖರ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ಮೊಬೈಲ್ ದಾಸರಾಗುತ್ತಿದ್ದಾರೆ. ಅತಿ ಹೆಚ್ಚು ಕಲಿತು ಜಾತಿವಾದಿಗಳಾಗುತ್ತಿದ್ದಾರೆ. ಗಾಂಧಿಯವರ ಮೂರು ಮಂಗಗಳ ಜೊತೆ ಮೊಬೈಲ್ ಹಿಡಿದ ನಾಲ್ಕನೇ ಮಂಗಗಳು ಆಗಿದ್ದಾರೆ ಎಂದು ಕಾರ್ಯಕ್ರಮದ ಉದ್ದಕ್ಕೂ ಹಾಸ್ಯ ಮಿಶ್ರಿತ ಶೈಲಿಯಲ್ಲಿ ಭಾಷಣ ಮಾಡಿದ ಗಮನ ಸೆಳೆದರು.
ನಂತರ ದತ್ತಿ ದಾನಿ, ಪುರಾತತ್ವ ಇಲಾಖೆಯ ನಿವೃತ್ತ ಅಧಿಕಾರಿ ಸಿ.ಬಿ.ಪಾಟೀಲ ಮಾತನಾಡಿದರು. ಸಿದ್ದನಗೌಡ ಪಾಟೀಲ ಭುವನೇಶ್ವರಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಬಂಡಾಯ ಸಾಹಿತಿ ರಮೇಶ ಗಬ್ಬೂರ ಅವರ ‘ಕಾಮ್ರೇಡ್ ಬಸವಣ್ಣ’ ಕೃತಿಗೆ ಲಿಂ.ಮರಿಗೌಡ ಮಲ್ಲನಗೌಡರ ದತ್ತಿ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಸಾಪ ಅಧ್ಯಕ್ಷ ರಾಜಶೇಖರ ಅಂಗಡಿ ವಹಿಸಿದ್ದರು. ಕಾಲೇಜಿನ ಗ್ರಂಥಪಾಲಕ ಪ್ರಕಾಶ ಎಸ್.ಯು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಚನ್ನಬಸಪ್ಪ ಕಡ್ಡಿಪುಡಿ ಸ್ವಾಗತಿಸಿದರು. ಶಂಕ್ರಯ್ಯ ಅಬ್ಬಿಗೇರಿಮಠ ದತ್ತಿ ನುಡಿ ಪರಿಚಯಿಸಿದರು. ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಬಸವರಾಜ ಪಿನ್ನಿ, ನಿವೃತ್ತ ಪ್ರಾಚಾರ್ಯ ಮಹಾಂತೇಶ ಮಲ್ಲನಗೌಡರ, ಪ್ರಾಚಾರ್ಯ ವಿಠೋಬಾ.ಎಸ್. ಸೇರಿದಂತೆ ಇತರರು ಇದ್ದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಹಿತಿ ಎಸ್.ಬಿ.ಗೊಂಡಬಾಳ, ಬಸವರಾಜ ಮೂಲಿಮನಿ, ಡಾ.ಗೀತಾ ಪಾಟೀಲ, ಶರಣಬಸವರಾಜ ಗದಗ, ಶ್ರೀನಿವಾಸ ದಾಸರನ್ನು ಸನ್ಮಾನಿಸಲಾಯಿತು.