ಮಾರುಕಟ್ಟೆ ದರ ಜಿ.ಐ.ಎಸ್.ನಲ್ಲಿ ಮ್ಯಾಪಿಂಗ್ ಹಿನ್ನೆಲೆ
ಕಲಬುರಗಿ; ಕಲಬುರಗಿ ಮಹಾನಗರ ಎಲ್ಲಾ ವಾಣಿಜ್ಯ, ಗೃಹಪಯೋಗಿ, ಕೈಗಾರಿಕೆ, ರಸ್ತೆ ಸೇರಿದಂತೆ ಎಲ್ಲಾ ಬಗೆಯ ಆಸ್ತಿಗಳನ್ನು ಜಿ.ಐ.ಎಸ್. ಆಧಾರಿತ ತಂತ್ರಾಂಶದಲ್ಲಿ ಮ್ಯಾಪಿಂಗ್ ಮಾಡಲಾಗುತ್ತಿದ್ದು, ಮಹಾನಗರದ ಎಲ್ಲಾ ಆಸ್ತಿಗಳನ್ನು ಇ-ಆಸ್ತಿಯನ್ನಾಗಿ ಪರಿವರ್ತಿಸಬೇಕು. ಇದಕ್ಕಾಗಿ ವಿಶೇಷ ಅಭಿಯಾನ ನಡೆಸಬೇಕೆಂದು ರಾಜ್ಯದ ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತೆ ಡಾ. ಮಮತಾ ಬಿ.ಆರ್. ತಿಳಿಸಿದರು.
ಇತ್ತೇಚೆಗೆ ಇಲ್ಲಿನ ಪ್ರಾದೇಶಿಕ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಜಿ.ಐ.ಎಸ್. ಆಧಾರಿತ ಮಾರ್ಗದರ್ಶಿ ಮೌಲ್ಯ ತರ್ಕಬದ್ಧಗೊಳಿಸುವಿಕೆ ಸಂಬಂಧ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ರಾಜ್ಯದಲ್ಲಿ ಬೆಂಗಳೂರಿನ ರಾಜಾಜಿನಗರ ಮತ್ತು ಕಲಬುರಗಿ ಉಪ ನೋಂದಣಾಧಿಕಾರಿಗಳ ಕಚೇರಿ ವ್ಯಾಪ್ತಿಯಲ್ಲಿ ಪ್ರಾಯೋಗಿಕವಾಗಿ ಎಲ್ಲಾ ರೀತಿಯ ಆಸ್ತಿಗಳನ್ನು ಜಿ.ಐ.ಎಸ್. ಮ್ಯಾಪಿನಲ್ಲಿ ಅಳವಡಿಸಲಾಗುತ್ತಿದೆ. ಇದರಿಂದ ಸಾರ್ವಜನಿಕರು ಮುಕ್ತವಾಗಿ ನಿಖರ ಮಾರುಕಟ್ಟೆ ದರ ತಿಳಿಯಬಹುದಾಗಿದೆ ಎಂದರು.
ಜಿ.ಐ.ಎಸ್. ಆಧಾರಿತ ಈ ತಂತ್ರಾಂಶದಿಂದ ವಾಣಿಜ್ಯ, ಕೈಗಾರಿಕಾ ಹಾಗೂ ವಾಸಯೋಗ್ಯ ಪ್ರದೇಶಗಳನ್ನು ಮತ್ತು ವಿವಿಧ ಸ್ಥರದ ಲೇಯರ್ರ್ಸ್‍ಗಳನ್ನು ಗುರುತಿಸುವುದು, ಮುಖ್ಯ ರಸ್ತೆ, ಅಡ್ಡ ರಸ್ತೆ, ಮೂಲೆ ನಿವೇಶನ ಇತ್ಯಾದಿ ಗುರುತಿಸಲು ಸಹಕಾರಿಯಾಗಿ ನಿಖರ ಮಾರುಕಟ್ಟೆ ದರ ಸಾರ್ವಜನಿಕರಿಗೆ ಲಭ್ಯವಾಗಲಿದೆ. ಹೀಗಾಗಿ ಮಹಾನಗರ ಪಾಲಿಕೆ, ಸಿಟಿ ಸರ್ವೇ, ಕರ್ನಾಟಕ ರಾಜ್ಯ ದೂರಸಂವೇದಿ ಅನ್ವಯಿಕ ಇಲಾಖೆ ಹಾಗೂ ನೋಂದಣಿ ಮತ್ತು ಮುದ್ರಾಂಕ ಇಲಾಖೆಗಳು ಪರಸ್ಪರ ಸಮನ್ವಯತೆಯೊಂದಿಗೆ ಕಾರ್ಯನಿರ್ವಹಿಸಿ ಆಸ್ತಿಗಳ ಜಿ.ಐ.ಎಸ್. ಮ್ಯಾಪಿಂಗ್ ಮಾಡುವತ್ತ ಕೂಡಲೆ ಕಾರ್ಯಪ್ರವೃತ್ತರಾಗಬೇಕೆಂದು ಡಾ. ಮಮತಾ ಬಿ.ಆರ್. ಅವರು ನಿರ್ದೇಶನ ನೀಡಿದರು.
ಕಲಬುರಗಿ ನಗರದಲ್ಲಿನ ವಿವಿಧ ಪ್ರದೇಶ, ಬಸ್ ನಿಲ್ದಾಣ, ರೈಲು ನಿಲ್ದಾಣ, ಸ್ಲಮ್ ಪ್ರದೇಶ, ಕೈಗಾರಿಕೆ ಪ್ರದೇಶ ಶಾಲಾ ವಲಯ, ಕೆ.ಐ.ಎ.ಡಿ.ಬಿ., ಕೆ.ಎಸ್.ಎಸ್.ಐ.ಡಿ.ಸಿ., ಎ.ಪಿ.ಎಂ.ಸಿ, ಮಾರ್ಕೆಟ್ ಏರಿಯಾ ಹೀಗಿ ಇನ್ನಿತರ ಪ್ರದೇಶಗಳ ಮಾರುಕಟ್ಟೆ ಮೌಲ್ಯವನ್ನು ಮಹಾನಗರ ಪಾಲಿಕೆ, ಸಿಟಿ ಸರ್ವೇ, ನಗರಾಭಿವೃದ್ಧಿ ಪ್ರಾಧಿಕಾರದ ಸಿಬ್ಬಂದಿಗಳ ಸಹಕಾರದೊಂದಿಗೆ ಕಲಬುರಗಿ ಹಿರಿಯ ಉಪ ನೋಂದಣಾಧಿಕಾರಿಗಳು ಜಿ.ಐ.ಎಸ್. ಆಧಾರಿತ ತಂತ್ರಾಂಶದಲ್ಲಿ ದತ್ತಾಂಶ ನಮೂದಿಸಬೇಕು. ಈ ನಾಲ್ಕು ಸಂಸ್ಥೆಗಳು ತಮ್ಮ ಬಳಿ ಇರುವ ದತ್ತಾಂಶಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡು ಕಾರ್ಯನಿರ್ವಹಿಸಬೇಕೆಂದರು.
ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಕೃಷ್ಣ ಭಾಜಪೇಯಿ ಮಾತನಾಡಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಈ ಯೋಜನೆಗೆ ವಿಭಾಗದಲ್ಲಿ ಕಂದಾಯ ಇಲಾಖೆಯಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುತ್ತದೆ ಎಂದರು.
ಕಲಬುರಗಿ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಮಾತನಾಡಿ, ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೂಡಲೆ ಇ-ಆಸ್ತಿ ನೋಂದಣಿ ಅಭಿಯಾನ ಕೈಗೊಳ್ಳುವಂತೆ ಪಾಲಿಕೆ ಅಧಿಕಾರಿಗಳೀಗೆ ನಿರ್ದೇಶನ ನೀಡಿದ ಅವರು ಜಿ.ಐ.ಎಸ್. ಆಧಾರಿತ ಮ್ಯಾಪಿಂಗ್ ಕಾರ್ಯಕ್ಕೆ ತುಂಬಾ ಉತ್ಸುಕತೆ ತೋರಿದರು.
ಆರಂಭಿಕವಾಗಿ ಕಲಬುರಗಿ ನಗರದ ನಿಜಾಮಪೂರ ಬಡಾವಣೆಯ ಎಲ್ಲಾ ಆಸ್ತಿಗಳನ್ನು ಡಿಜಿಟಲೈಸ್ ಮಾಡಿ 7 ದಿನದೊಳಗೆ ಜಿ.ಐ.ಎಸ್. ಆಧಾರಿತ ಆಸ್ತಿ ದತ್ತಾಂಶ ನಮೂದಿಸಿದ ನಂತರ ಒಂದು ತಿಂಗಳೊಳಗೆ ಉಳಿದ ಬಡಾವಣೆ ಕಾರ್ಯ ಮಾಡಬೇಕು ಎಂದು ಸಭೆಯಲ್ಲಿ ನಿರ್ಧರಿಸಲಾಯಿತು.
ಸಭೆಯಲ್ಲಿ ಭಾಗವಹಿಸಿದ ಮಹಾನಗರ ಪಾಲಿಕೆ ಅಧಿಕಾರಿಗಳು ಕಲಬುರಗಿ ನಗರದಲ್ಲಿ 1.20 ಲಕ್ಷ ಆಸ್ತಿಗಳಿದ್ದು, ಇದರಲ್ಲಿ 30 ಸಾವಿರ ಆಸ್ತಿಗಳಿಗೆ ಇ-ಆಸ್ತಿ ಫಾರಂ-3 ಲಭ್ಯವಿದ್ದು, ಉಳಿದ ಆಸ್ತಿಗಳು ಫಾರಂ-3ಗೆ ಬಾಕಿ ಇವೆ ಎಂದು ಸಭೆಗೆ ತಿಳಿಸಿದರು. ಸಿಟಿ ಸರ್ವೇ ಅಧಿಕಾರಿಗಳು ಮಾತನಾಡಿ ತಮ್ಮ ಬಳಿ 1975 ರಿಂದ ಇದೂವರೆಗೆ ಸುಮಾರು 27 ಸಾವಿರ ಆಸ್ತಿಗಳ ಮಾಹಿತಿ ಲಭ್ಯವಿದೆ ಎಂದರು.
ಸಭೆಯಲ್ಲಿ ನೋಂದಣಿ ಉಪ ಮಹಾಪರಿವೀಕ್ಷಕ(ಸಿವಿಸಿ) ಜೆ.ವಿ.ಯಶೋಧರ, ಸಹಾಯಕ ನೋಂದಣಿ ಉಪ ಮಹಾಪರಿವೀಕ್ಷಕ ಪ್ರಭಾಕರ ಎಲ್.ಎಲ್., ಜಿಲ್ಲಾ ನೋಂದಣಾಧಿಕಾರಿ ಮಲ್ಲಿಕಾರ್ಜುನ ಎಚ್., ಕಲಬುರಗಿ ಮಹಾನಗರ ಪಾಲಿಕೆಯ ಆರೀಫ್ ಪಟೇಲ್, ಪ್ರಹ್ಲಾದ ಬಿ.ಕೆ., ರಮೇಶ ಎಂ. ಪಟ್ಟೇದಾರ, ಉಮೇಶ ಚವ್ಹಾಣ, ಪೀರಪ್ಪ ಪೂಜಾರಿ, ಸಿಟಿ ಸರ್ವೇ ಕಚೇರಿಯ ಈಶ್ವರಚಂದ್ರ, ಕೆ.ಎಸ್.ಆರ್.ಎಸ್.ಎ.ಸಿ. ರಿಜಿನಲ್ ಸೆಂಟರಿನ ಜಗದೀಶ ಎನ್.ಎಸ್., ಶ್ರೀನಿವಾಸ ಬಿ. ಸೇರಿದಂತೆ ಜಿಲ್ಲೆಯ ಎಲ್ಲಾ ಉಪ ನೋಂದಣಾಧಿಕಾರಿಗಳು ಇದ್ದರು.