ಕಲಬುರಗಿ: ಕಲಬುರಗಿಯನ್ನು ಸ್ವಾಸ್ಥ್ಯ ಮತ್ತು ಆರೋಗ್ಯವಂತ ಜಿಲ್ಲೆ ಮಾಡುವ ನಿಟ್ಟಿನಲ್ಲಿ ಯೋಗಾಭ್ಯಾಸ ನಮ್ಮೆಲ್ಲರ ದೈನಂದಿನ ಜೀವನಶೈಲಿಯಾಗಬೇಕೆಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಕರೆ ನೀಡಿದರು.
ಶುಕ್ರವಾರ ಕಲಬುರಗಿ ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ “ಸ್ವಂತ ಮತ್ತು ಸಮಾಜಕ್ಕಾಗಿ ಯೋಗ” ಧ್ಯೇಯವಾಕ್ಯದ 10ನೇ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಆಧುನಿಕ ಜೀವನಶೈಲಿ ಪದ್ದತಿಯಿಂದ ಹಲವು ರೋಗಕ್ಕೆ ನಾವು ತುತ್ತಾಗುತ್ತಿದ್ದು, ಇದರಿಂದ ಹೊರಬರಬೇಕಾದರೆ ಯೋಗವೇ ಮದ್ದಾಗಿದೆ. ಪ್ರತಿ ದಿನ ಯೋಗದಿಂದಲೆ ದೈನಂದಿನ ಚಟುವಟಿಕೆಗಳು ಆರಂಭವಾಗಬೇಕು ಎಂದ ಅವರು, ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಈ ಮಾಹೆಯ ಅಂತ್ಯ ವರೆಗೆ ಜಿಲ್ಲೆಯ ಎಲ್ಲಾ ಶಾಲೆ-ಕಾಲೇಜುಗಳಲ್ಲಿ ಸಾಮೂಹಿಕವಾಗಿ ಯೋಗಾಭ್ಯಾಸ ಮಾಡಿಸಲಾಗುತ್ತಿದ್ದು, ಮಕ್ಕಳು ಸಕ್ರಿಯರಾಗಿ ಭಾವಹಿಸಬೇಕೆಂದು ತಿಳಿಸಿದರು.
ಕಲಬುರಗಿ ನಗರ ಪೊಲೀಸ್ ಆಯುಕ್ತ ಆರ್.ಚೇತನಕುಮಾರ ಮಾತನಾಡಿ, ಭಾರತದ ಯೋಗ ಪದ್ಧತಿಗೆ ಇಡೀ ವಿಶ್ವವೇ ಮೆಚ್ಚಿದ್ದು, ಇಂದು ಭಾರತ ಮಾತ್ರವಲ್ಲದೇ ವಿವಿಧ ದೇಶಗಳಲ್ಲಿ ಯೋಗ ದಿನಾಚರಣೆ ಆಚರಿಸಲಾಗುತ್ತಿದೆ. ಉತ್ತರ ಗೋಳಾರ್ಧದಲ್ಲಿ ಬರುವ ವರ್ಷದ ಸುದೀರ್ಘ ದಿನವಾಗಿರುವ ಇಂದು ಬೆಳಕಿನ ಮಹತ್ವ ಸಾರುತ್ತಿದೆ. ಸೂರ್ಯನು ದಕ್ಷಿಣಾಯನಕ್ಕೆ ಪಯಣಿಸುವ ಪರಿವರ್ತನೆಯ ಸಂಕೇತ ದಿನವೇ ಅಂತರರಾಷ್ಟ್ರೀಯ ಯೋಗ ದಿನ ಆಚರಿಸಲಾಗುತ್ತದೆ ಎಂದು ದಿನದ ಮಹತ್ವ ತಿಳಿಸಿದ ಅವರು, ಶಾರೀರಿಕ ಮತ್ತು ಮಾನಸಿಕ ನೆಮ್ಮದಿಗೆ ಯೋಗ ಸಹಕಾರಿಯಾಗಿದೆ ಎಂದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ.ಗಿರಿಜಾ ಎಸ್.ಯು. ಪ್ರಸ್ತಾವಿಕವಾಗಿ ಮಾತನಾಡಿ, 10ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಕಳೆದ ಜೂನ್ 10 ರಿಂದ ಇಲ್ಲಿಯವರೆಗೆ ಜಿಲ್ಲೆಯ ಶಾಲೆ, ವಸತಿ ನಿಲಯ, ಸ್ಕೌಟ್ & ಗೈಡ್ಸ್ ವಿದ್ಯಾರ್ಥಿಗಳಿಗೆ ಸುಮಾರು 100 ಯೋಗಾಭ್ಯಾಸ ಮತ್ತು ಆಯುಷ್ ಪದ್ಧತಿ ಕುರಿತು ಜಾಗೃತಿ ಕಾರ್ಯಕ್ರಮ ಆಯೋಜಿಸಿ 9,000 ಜನರಿಗೆ ಅರಿವು ಮೂಡಿಸಲಾಗಿದೆ ಎಂದರು.
ಯೋಗ ಮಾಡಿದ ಡಿ.ಸಿ, ಪೊಲೀಸ್ ಕಮಿಷನರ್: ಇದಕ್ಕೂ ಮುನ್ನ ನಡೆದ ಯೋಗಾಭ್ಯಾಸ ಕಾರ್ಯಕ್ರಮದಲ್ಲಿ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂ ಖಾನ್, ಡಿ.ಸಿ. ಬಿ.ಫೌಜಿಯಾ ತರನ್ನುಮ್, ನಗರ ಪೊಲೀಸ್ ಆಯುಕ್ತ ಆರ್.ಚೇತನಕುಮಾರ, ಎಸ್.ಪಿ. ಅಕ್ಷಯ್ ಹಾಕೈ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಮಹಾನಗರ ಪಾಲಿಕೆ ಉಪ ಆಯುಕ್ತ ಮಾದವ ಗಿತ್ತೆ, ಇ.ಇ. ಶಿವಣಗೌಡ ಪಾಟೀಲ, ಡಿ.ಎಚ್.ಓ ಡಾ.ರತಿಕಾಂತ ಸ್ವಾಮಿ, ಡಿ.ಡಿ.ಪಿ.ಐ. ಸಕ್ರೆಪ್ಪಗೌಡ ಬಿರಾದಾರ, ಡಿ.ಡಿ.ಪಿ.ಯು. ಶಿವಶರಣಪ್ಪ ಮೂಳೆಗಾಂವ, ಯುವಸಬಲೀಕರಣಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಅಮೃತ ಎಸ್.ಅಷ್ಟಗಿ ಅವರು ಮಕ್ಕಳು, ಸಾರ್ವಜನಿಕರೊಂದಿಗೆ ಯೋಗಾಭ್ಯಾಸದಲ್ಲಿ ಸಕ್ರೀಯವಾಗಿ ಭಾಗಿಯಾದರು.
ಆಯುಷ್ ಇಲಾಖೆಯ ಯೋಗ ತರಬೇತುದಾರರಾದ ಸುದೀಪ ಮಾಳಗಿ ಮತ್ತು ಶಶಿಕಲಾ ಗುತ್ತೇದಾರ ಹಾಗೂ ಭೂಮಿ ಯೋಗಾ ಫೌಂಡೇಷನ್ ಸಂಸ್ಥೆಯ ಯೋಗ ಗುರು ನಾಗರಾಜ ಸಾಳೊಳ್ಳಿ ಅವರು ಸುದೀರ್ಘ 45 ನಿಮಿಷಗಳ ಕಾಲ ಯೋಗಾಭ್ಯಾಸ ಹೇಳಿಕೊಟ್ಟರು.
ಆರಂಭದಲ್ಲಿ ವ್ಯಾಯಮ ಮಾಡಿಸಲಾಯಿತು. ನಂತರ ತಾಡಾಸನ, ವೃಕ್ಷಾಸನ, ಪಾದಹಸ್ತಾಸನ, ಅರ್ಧ ಚಕ್ರಾಸನ, ತ್ರಿಕೋಣಾಸನ, ಭದ್ರಸಾನ, ವಜ್ರಾಸನ, ಅರ್ಧ ಉಷ್ಟ್ರಾಸನ, ಶಶಂಕಾಸನ, ಉತ್ಥಾನ ಮಂಡೂಕಾಸನ, ವಕ್ರಾಸನ, ಮಕರಾಸನ, ಭುಜಂಗಾಸನ, ಶಲಭಾಸನ, ಸೇತುಬಂಧಾಸನ, ಉತ್ಥಾನ ಪಾದಾಸನ, ಅರ್ಧ ಹಲಾಸನ, ಪವನಮುಕ್ತಾಸನ, ಶವಾಸನ ಹೇಳಿಕೊಡಲಾಯಿತು. ತದನಂತರ ಪ್ರಾಣಾಯಮ, ಧ್ಯಾನ, ಸಂಕಲ್ಪ ಮಾಡಿಸಲಾಯಿತು.
ಇದೇ ಸಂದರ್ಭದಲ್ಲಿ ಯೋಗ ತರಬೇತಿ ನೀಡಿದ ತರಬೇತುದಾರರಾದ ಸುದೀಪ ಮಾಳಗಿ, ಶಶಿಕಲಾ ಗುತ್ತೇದಾರ ಹಾಗೂ ನಾಗರಾಜ ಸಾಲೊಳ್ಳಿ, ಶಾಲೆಗಳಲ್ಲಿ ಯೋಗ ತರಬೇತಿ ಹೇಳಿಕೊಟ್ಟ ಪತಂಜಲಿ ಯೋಗ ಸಮಿತಿಯ ಸುಮಂಗಲಾ ಚಕ್ರವರ್ತಿ ಹಾಗೂ ಯೋಗ ಪ್ರದರ್ಶನ ನೀಡಿದ ಕಲಬುರಗಿ ನಗರದ ಬ್ರಹ್ಮಪುರ ಪ್ರದೇಶದ ಚೌಧಾಪುರಿ ಹಿರೇಮಠ ಪ್ರೌಢ ಶಾಲೆಯ ಯೋಗ ವಿದ್ಯಾರ್ಥಿ ಅನೀಲಕುಮಾರ ಅವರಿಗೆ ವಿಧಾನ ಪರಿಷತ್ ಶಾಸಕ ಶಶೀಲ ನಮೋಶಿ ಅವರು ಸನ್ಮಾನಿಸಿದರು.
ಸರ್ಕಾರಿ ನರ್ಸಿಂಗ್ ಕಾಲೇಜಿನ ಉಪ ಪ್ರಾಂಶುಪಾಲ ಶ್ರೀಕಾಂತ್ ಫುಲಾರಿ ನಿರೂಪಿಸಿದರು.