ಪ್ರೊ.ಗಾದಗೆ ಮುಡಿಗೇರಿದ ಐಎಸ್ ಟಿಇ ಫೆಲೋಶಿಪ್

0
99

ಕಲಬುರಗಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಕಲಬುರಗಿ ಪ್ರಾದೇಶಿಕ ಕೇಂದ್ರದ ನಿರ್ದೇಶಕ ಪ್ರೊ.ಬಸವರಾಜ ಗಾದಗೆ ಅವರು ಭಾರತೀಯ ತಾಂತ್ರಿಕ ಶಿಕ್ಷಣ ಸಂಸ್ಥೆಯ( ಐಎಸ್ ಟಿಇ) 2023ನೇ ಸಾಲಿನ ಪ್ರತಿಷ್ಠಿತ ಗೌರವ ಫೆಲೋಶಿಪ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದಿಂದ ಈ ಗೌರವ ಪಡೆದ ಮೊದಲಿಗರು ಎಂಬ ಖ್ಯಾತಿಗೆ ಪ್ರೊ.ಗಾದಗೆ ಭಾಜನರಾಗಿದ್ದಾರೆ.

ಓರಿಸ್ಸಾ ರಾಜಧಾನಿ ಭುವನೇಶ್ವರದಲ್ಲಿರುವ ಕಳಿಂಗಾ ಇನ್ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಿಕಲ್ ಸಂಸ್ಥೆಯ (ಕೆಐಐಟಿ) ಸಭಾಂಗಣದಲ್ಲಿ ಭಾನುವಾರ ಜರುಗಿದ ಐಎಸ್ ಟಿಇ 53ನೇ ರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರೊ.ಬಸವರಾಜ ಗಾದಗೆ ಅವರಿಗೆ ಫೆಲೋಶಿಪ್ ಪ್ರಶಸ್ತಿ ಪ್ರದಾನ ‌ಮಾಡಿ ಅಭಿನಂದಿಸಲಾಯಿತು.

Contact Your\'s Advertisement; 9902492681

ಕಳೆದ ಮೂರು ದಶಕಗಳಿಂದ ಪ್ರೊ.‌ಗಾದಗೆ ಅವರು ತಾಂತ್ರಿಕ ಶಿಕ್ಷಣ ಕ್ಷೇತ್ರಕ್ಕೆ ವಿಶೇಷವಾಗಿ ಶೈಕ್ಷಣಿಕವಾಗಿ ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದಲ್ಲಿ ತಾಂತ್ರಿಕ ಶಿಕ್ಷಣ ಅಭಿವೃದ್ಧಿಗಾಗಿ ಸಲ್ಲಿಸುತ್ತಿರುವ ವಿಶಿಷ್ಟ ಸೇವೆ ಪರಿಗಣಿಸಿ ಐಎಸ್ ಟಿಇ ತನ್ನ ಪ್ರತಿಷ್ಠಿತ ಫೆಲೋಶಿಪ್ ನೀಡಿ ಗೌರವಿಸಿದೆ.

ಪ್ರೊ.ಗಾದಗೆ ಅವರಲ್ಲದೆ ದೆಹಲಿ ಐಐಟಿ ನಿರ್ದೇಶಕ ಡಾ.ರಂಜನ್ ಬ್ಯಾನರ್ಜಿ, ಎಐಸಿಟಿಇ ಮಾಜಿ ಸಲಹೆಗಾರ, ನಿವೃತ್ತ ಮೇಜರ್ ಜನರಲ್ ಮಹೇಶಕುಮಾರ ಹಡಾ, ಎಐಸಿಟಿಇ ಸಲಹೆಗಾರ ಪ್ರೊ.ರಾಜೇಂದ್ರ ಕಾಕಡೆ, ಬಿಹಾರ ರಾಜ್ಯದ ವಿಪತ್ತು ನಿರ್ವಹಣಾ ಪ್ರಾಧಿಕಾರದ ಹಿರಿಯ ಸಲಹೆಗಾರ ಡಾ.ಅನೀಲಕುಮಾರ ಅವರಿಗೆ ಈ ಸಾಲಿನ ಗೌರವ ಫೆಲೋಶಿಪ್ ನೀಡಿ ಸತ್ಕರಿಸಲಾಯಿತು.

ಕಳೆದ ವರ್ಷ ಎಐಸಿಟಿಇ ಅಧ್ಯಕ್ಷ ಪ್ರೊ.ಟಿ.ಜಿ. ಸೀತಾರಾಮ ಅವರು ಈ ಪ್ರಶಸ್ತಿ ಪಡೆದಿದ್ದರು. ಪ್ರೊ.ಬಸವರಾಜ ಗಾದಗೆ ಅವರ ಮೂಲಕ ಕಲ್ಯಾಣ ಕರ್ನಾಟಕ ಭಾಗಕ್ಕೆ ಪ್ರತಿಷ್ಠಿತ ಪುರಸ್ಕಾರ ಸಂದಿರುವುದು ಈ ಭಾಗದ ತಾಂತ್ರಿಕ ಶಿಕ್ಷಣ ಕ್ಷೇತ್ರ ವಲಯದಲ್ಲಿ ಹರ್ಷಕ್ಕೆ ಕಾರಣವಾಗಿದೆ.

“ವಿಕಸಿತ ಭಾರತ-2047-ಉನ್ನತ ಶಿಕ್ಷಣ ಸಂಸ್ಥೆಗಳ ಜೊತೆಗೂಡಿ” ಎಂಬ ಧ್ಯೇಯ ವಾಕ್ಯದೊಂದಿಗೆ ಐಎಸ್ ಟಿಇ 53ನೇ ಸಮ್ಮೇಳನ ಭುವನೇಶ್ವರದ ಕಳಿಂಗಾ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್‌ ಸೈನ್ಸ್ (ಕೆಐಎಸ್ಎಸ್) ಡೀಮ್ಡ್ ಯುನಿವರ್ಸಿಟಿ ಆಯೋಜಿಸಿತ್ತು. ಐಎಸ್ ಟಿಇ ಅಧ್ಯಕ್ಷ ಪ್ರತಾಪಸಿಂಗ್ ಕಾಕಾಸಾಹೇಬ್ ದೇಸಾಯಿ, ಕೆಐಎಸ್ಎಸ್, ಕೆಐಐಟಿ ಡೀಮ್ಡ್ ಯುನಿವರ್ಸಿಟಿ ಸಂಸ್ಥಾಪಕ ಪ್ರೊ. ಅಚ್ಯುತ್ ಸಮಂತ‌ ಅವರು ಪ್ರೊ.ಬಸವರಾಜ ಗಾದಗೆ ಅವರಿಗೆ ಫೆಲೋಶಿಪ್ ಪ್ರಶಸ್ತಿ ನೀಡಿ ಅಭಿನಂದಿಸಿದರು.

ಕೆಐಎಸ್ಎಸ್ ಡೀಮ್ಡ್ ಯುನಿವರ್ಸಿಟಿ ಉಪ ಕುಲಪತಿ ಪ್ರೊ.ದೀಪಕಕುಮಾರ್ ಬೆಹೆರಾ, ಕೆಐಐಟಿ ಡೀಮ್ಡ್ ಯುನಿವರ್ಸಿಟಿ ಉಪ ಕುಲಪತಿ ಪ್ರೊ.ಸುರಂಜೀತಸಿಂಗ್, ಐಎಸ್ ಟಿಇ ಉಪಾಧ್ಯಕ್ಷರಾದ ಆರ್.ಭಾಸ್ಕರ್, ಗುಜ್ಜಾಲ ವೆಂಕಟಸುಬ್ಬಯ್ಯ, ಖಜಾಂಚಿ ಶರಣಪ್ಪ ಜಿ.ಮಲಶೆಟ್ಟಿ, ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸೈಯದ್ ಮಾಜೀದ್ ಅಲಿ, ಪ್ರೊ.ಪ್ರಶಾಂತ ರೌತ್ರೆ, ಪ್ರೊ. ಜ್ಞಾನರಂಜನ್ ಮೊಹಾಂತಿ ಇತರರಿದ್ದರು.

2047ರಲ್ಲಿ ಭಾರತ ವಿಕಸಿತವಾಗುವ ನನಸಾಗಿಸುವಲ್ಲಿ ತಾಂತ್ರಿಕ ಶಿಕ್ಷಣ ಕ್ಷೇತ್ರ ವಲಯದ ಮೇಲೆ ದೊಡ್ಡ ಹೊಣೆಗಾರಿಕೆ ಇದೆ. ತಂತ್ರಜ್ಞಾನ ಬಹಳ ವೇಗವಾಗಿ ಬೆಳೆಯುತ್ತಿದೆ. ದಿನಗಳೆದಂತೆ ನವೀನ ತಂತ್ರಜ್ಞಾನ ಹೊರಬರುತ್ತಿವೆ.

ವಿನೂತನ ಪ್ರಯೋಗಗಳು ನಡೆಯುತ್ತಿವೆ. ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ತೊಡಗಿರುವವರು ಇನ್ನಷ್ಟು ಕ್ರಿಯಾಶೀಲತೆ, ಕೌಶಲ್ಯತೆಯೊಂದಿಗೆ ಮುಂದಿನ ಆಧುನಿಕ ದಿನಗಳಿಗೆ ತಕ್ಕಂತೆ ಹೆಜ್ಜೆ ಹಾಕಬೇಕಿದೆ. ಹಿಂದುಳಿದ ಭಾಗದ ವಿದ್ಯಾರ್ಥಿಗಳಿಗೂವ ತಾಂತ್ರಿಕ ಶಿಕ್ಷಣ ಸುಲಭವಾಗಿ ಸಿಗಬೇಕಿದೆ. ಇದಕ್ಕೆ ನಮ್ಮ ಪ್ರಯತ್ನ ನಿರಂತರ ನಡೆಯಬೇಕು.

ಈ ದಿಸೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರೊ.ಬಸವರಾಜ ಗಾದಗೆ ಮಾಡುತ್ತಿರುವ ಸೇವಾಕಾರ್ಯ, ವಿಜನ್ ಮಾದರಿಯಾಗಿದೆ ಎಂದು ಐಎಸ್ ಟಿಇ ಅಧ್ಯಕ್ಷ ಪ್ರೊ.ಪ್ರತಾಪಸಿಂಗ್ ಕಾಕಾಸಾಹೇಬ್ ದೇಸಾಯಿ ಬಣ್ಣಿಸಿದರು.

ಐಎಸ್ ಟಿಇ ಫೆಲೋಶಿಪ್ ಪ್ರಶಸ್ತಿ ಲಭಿಸಿರುವುದು ನನ್ನ ಜವಾಬ್ದಾರಿ ‌ಹೆಚ್ಚಿಸಿದ್ದು, ಮತ್ತಷ್ಟು ಸೇವೆ ಮಾಡಲು ಪ್ರೇರಣೆ ತುಂಬಿದೆ. ಕಲ್ಯಾಣ ಕರ್ನಾಟಕ ಭಾಗವು ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ಇತ್ತೀಚಿನ ವರ್ಷಗಳಲ್ಲಿ ಆಶಾದಾಯಕ ಪ್ರಗತಿಯತ್ತ ಸಾಗಿದೆ. ಬರುವ ದಿನಗಳಲ್ಲಿ ಇನ್ನಷ್ಟು ಸಾಮೂಹಿಕ ಪ್ರಯತ್ನದ ಮೂಲಕ ತೃಪ್ತಿಕರ ಅಭಿವೃದ್ಧಿ ಸಾಧಿಸಬೇಕಿದೆ. ಇನ್ನೂ ಹತ್ತು ವರ್ಷದೊಳಗೆ ನಮ್ಮ ಭಾಗ ಸಹ ಇತರೆ ಭಾಗದ ತಾಂತ್ರಿಕ ಶಿಕ್ಷಣದ ಸ್ಪರ್ಧೆಗೆ ಸಮನಾಗಿ ನಿಲ್ಲುವುದು ಖಚಿತ. -ಪ್ರೊ.ಬಸವರಾಜ ಗಾದಗೆ, ಐಎಸ್ ಟಿಇ ಫೆಲೋಶಿಪ್ ಪುರಸ್ಕೃತರು

55ರ ಹರೆಯದ ಪ್ರೊ.ಬಸವರಾಜ ಗಾದಗೆ‌ ಮೂಲತಃ ಬೀದರ್ ನಗರದ ಜೆಪಿ‌ ಕಾಲೋನಿ‌‌ ನಿವಾಸಿ. ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ 30 ದಶಕಗಳಿಂದ ಸಕ್ರಿಯವಾಗಿ ತೊಡಗಿದ್ದು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಹಿಳಾ ತಾಂತ್ರಿಕ ಶಿಕ್ಷಣಕ್ಕೆ ಉತ್ತೇಜನ ‌ನೀಡುತ್ತಿದ್ದಾರೆ.

21 ವರ್ಷ ಪ್ರೊಫೆಸರ್, ಎಚ್ಓಡಿ, ಪ್ರಾಚಾರ್ಯರಾಗಿ ಕೆಲಸ‌ ಮಾಡಿರುವ ಇವರು, ಕಳೆದ 9 ವರ್ಷಗಳಿಂದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕಲಬುರಗಿ ಪ್ರಾದೇಶಿಕ ಕೇಂದ್ರದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕಲಬುರಗಿ ಕೇಂದ್ರದಲ್ಲಿ ಸ್ನಾತಕ ಹಾಗೂ ಸ್ನಾತಕೋತ್ತರ ವಿಷಯಗಳಲ್ಲಿ ನಾನಾ ಕೋಸ್೯ ನಡೆಯುತ್ತಿದ್ದು, ತಮ್ಮ ದೂರದೃಷ್ಟಿತ್ವ, ಹಿಂದುಳಿದ ಭಾಗದ ಏಳ್ಗೆಯ ಸಾಮಾಜಿಕ ಚಿಂತನೆ ಫಲವಾಗಿ ಈ ಕೇಂದ್ರಕ್ಕೆ‌ ಮಾದರಿಯಾಗಿ ಮಾಡಿದ್ದಾರೆ. ಕೇಂದ್ರದ ಅಡಿ 19 ಇಂಜಿನಿಯರಿಂಗ್ ಕಾಲೇಜು ಇವೆ. ಮಹಿಳೆಯರಿಗೆ ಮಾರ್ಗದರ್ಶನ ಮಾಡುತ್ತ ಅವರಿಗೆ ತಾಂತ್ರಿಕ ಶಿಕ್ಷಣಕ್ಕೆ ಸೆಳೆಯುವ ಬಹು ಮುಖ್ಯ ಕೆಲಸ ಪ್ರೊ.ಗಾದಗೆ ಮಾಡುತ್ತಿದ್ದಾರೆ.

ಈ ಕೇಂದ್ರದಲ್ಲಿ ಇತ್ತೀಚೆಗೆ ಪ್ರಧಾನಮಂತ್ರಿ ಕೌಶಲ ವಿಕಾಸ ಯೋಜನೆ(ಪಿಎಂಕೆವಿವೈ) ಅಡಿಯಲ್ಲಿ “ಕೌಶಲ ಅಭಿವೃದ್ಧಿ ಕೇಂದ್ರ” ಸ್ಥಾಪಿಸಿದ್ದು, ಈ ಭಾಗದ ವಿದ್ಯಾರ್ಥಿಗಳಿಗೆ ಕೌಶಲರನ್ನಾಗಿ‌ ಮಾಡಿ ಉದ್ಯೋಗ, ಉದ್ಯಮದಲ್ಲಿ ತೊಡಗಲು ಪ್ರೇರಣೆ ನೀಡಲಾಗುತ್ತಿದೆ. 5ಜಿ ಲ್ಯಾಬೋರೇಟರಿ ಸೌಲಭ್ಯ ಸಹ ಕಲ್ಪಿಸಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಯಾಗಿದೆ. 15ಎಕರೆ ಕ್ಯಾಂಪಸ್ ಸಂಪೂರ್ಣ ಹಸಿರುಮಯಗೊಳಿಸಲಾಗಿದೆ.

ಮಳೆ ನೀರು ಕೊಯ್ಲು ಅಳವಡಿಸಿಕೊಂಡ ಏಕೈಕ ಪ್ರಾದೇಶಿಕ ಕೇಂದ್ರ ಎನಿಸಿದೆ‌. ತ್ಯಾಜ್ಯ ವಿಲೇವಾರಿ ಘಟಕ ಸಹ ಸ್ಥಾಪಿಸಿದ್ದು, ನಿತ್ಯ 40 ಸಾವಿರ ಲೀಟರ್ ನೀರು ಮರು ಬಳಕೆಗೆ ಉಪಯೋಗಿಸಲು‌ ಕ್ರಮ ಕೈಗೊಳ್ಳಲಾಗಿದೆ. ಪ್ರೊ.ಗಾದಗೆ ಅವರ 100ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳು ರಾಷ್ಟ್ರೀಯ, ಅಂತಾರಾಷ್ಟ್ರೀಯ ಜರ್ನಲ್ ಗಳಲ್ಲಿ ಪ್ರಕಟವಾಗಿವೆ‌‌. 25 ಪೇಟೆಂಟ್ ಪಬ್ಲಿಶ್ ಆಗಿದ್ದು, ಇದರಲ್ಲಿ ಎರಡಕ್ಕೆ ಗ್ರ್ಯಾಂಟ್ ಸಿಕ್ಕಿದೆ. ಹಾರ್ವರ್ಡ್ ವಿವಿ ಇಂಗ್ಲೆಂಡ್, ಬ್ರೌನ್ ವಿವಿ ಅಮೆರಿಕ ಸೇರಿ ಹಲವು ವಿದೇಶಿ ವಿವಿಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸುವ ಜೊತೆಗೆ ಅಲ್ಲಿ ವಿಷಯ ಮಂಡನೆ ಮಾಡಿ ಗಮನ ಸೆಳೆದಿದ್ದಾರೆ.

ಅಮೆರಿಕ ಮೆಸ್ಸಾಚುಸೆಟ್ಸ್ ಕ್ವಿನ್ಸಿ ಮೇಯರ್ ಅವರಿಂದ ಇವರು ಗೌರವ ಪೌರತ್ವ ಸಹ ಪಡೆದಿದ್ದಾರೆ. ಪ್ರಾದೇಶಿಕ ಕೇಂದ್ರದ ಆಡಳಿತಾತ್ಮಕ‌ ಕೆಲಸಕಾರ್ಯಗಳ ಜೊತೆಗೆ ಪ್ರೊ. ಗಾದಗೆ ಅವರು 10 ಪಿಎಚ್ ಡಿ ವಿದ್ಯಾರ್ಥಿಗಳಿಗೆ ಮಾಗದರ್ಶನ ಮಾಡಿದ್ದು, ಇವರು ಡಾಕ್ಟರೇಟ್ ಪಡೆದಿದ್ದಾರೆ.

ಐಇಟಿಇ, ಐಎಸ್ ಟಿಇ, ಐಇಇಇ, ಐಎಂಎಪಿ ಹೀಗೆ ವಿವಿಧ ಸಂಸ್ಥೆಗಳಲ್ಲಿ‌ ನಾನಾ‌ ಹುದ್ದೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಎನ್ ಎಸ್ಎಸ್, ರೆಡ್ ಕ್ರಾಸ್, ಆಟ್೯ ಆಫ್ ಲಿವಿಂಗ್ ಸೇರಿ ಅನೇಕ ಸಾಮಾಜಿಕ ಸಂಘ-ಸಂಸ್ಥೆಗಳಲ್ಲಿ ಸಹ ಇವರು ಸಕ್ರಿಯವಾಗಿದ್ದಾರೆ. ಇವರ ಬಹುಮುಖಿ ಸೇವಾ ಕಾರ್ಯಕ್ಕೆ‌ ಮನ್ನಿಸಿ ಐಎಸ್ ಟಿಇ ಮನ್ನಿಸಿದೆ. ಪ್ರೊ.ಗಾದಗೆ ಅವರಿಗೆ ಫೆಲೋಶಿಪ್ ಪ್ರಶಸ್ತಿ ಬಂದಿದ್ದಕ್ಕೆ ವಿಟಿಯು ಪ್ರಾದೇಶಿಕ ಕೇಂದ್ರದ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ಪ್ರೊ. ಗಾದಗೆ ಅವರ ಮಿತ್ರಮಂಡಳಿ‌ ಹರ್ಷ‌ ವ್ಯಕ್ತಪಡಿಸಿ, ಅಭಿನಂದಿಸಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here