ಕಲಬುರಗಿ: ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್.. ರಾಜ್, ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಸೋಮವಾರ ತಮ್ಮ ಸ್ವಕ್ಷೇತ್ರ ಚಿತ್ತಾಪುರ ಪಟ್ಟಣದಲ್ಲಿ ಅಂದಾಜು 6.28 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಹೈಟೆಕ್ ತಾಲೂಕಾ ಕ್ರೀಡಾಂಗಣಕ್ಕೆ ಭೇಟಿ ನೀಡಿ ಪ್ರಗತಿಯಲ್ಲಿರುವ ಕಾಮಗಾರಿ ವೀಕ್ಷಿಸಿದರು.
ನಿರ್ಮಾಣದ ಹಂತದಲ್ಲಿರುವ ವಿವಿಧ ಕ್ರೀಡೆಗಳ ಅಂಕಣ, ಮೈದಾನ ಕಾಮಗಾರಿಗಳನ್ನು ವೀಕ್ಷಿಸಿದ ಅವರು, ಕ್ರೀಡಾ ಚಟುವಟಿಕೆಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ತಾಲೂಕಾ ಮಟ್ಟದಲ್ಲಿ ಇಂಡೋರ್ ಸ್ಟೇಡಿಯಂ, ಫುಟ್‍ಬಾಲ್ ಮೈದಾನ, ಸೆಟಲ್ ಬ್ಯಾಡ್ಮಿಂಟನ್, ವಾಲಿಬಾಲ್ ಅಂಕಣ, ಕಬ್ಬಡ್ಡಿ ಮೈದಾನ, ಕ್ರಿಕೆಟ್ ನೆಟ್ ಪ್ರ್ಯಾಕ್ಟೀಸ್ ಅಂಕಣಗಳನ್ನು ಸ್ಥಾಪಿಸಲಾಗುತ್ತಿದೆ. ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು. ಉಳಿದ ಕಾಮಗಾರಿ ಜುಲೈ ಮಾಸಾಂತ್ಯಕ್ಕೆ ಮುಗಿಸಬೇಕು ಎಂದು ಗುತ್ತಿಗೆದಾರರಿಗೆ ಗಡುವು ನೀಡಿದರು. ಜಿಲ್ಲಾಧಿಕಾರಿಗಳು ಜುಲೈ ಅಂತ್ಯಕ್ಕೆ ಕಾಮಗಾರಿ ಅಂತಿಮವಾಗಿ ವೀಕ್ಷಿಸಬೇಕು. ಮುಂದಿನ ಅಗಸ್ಟ್ ಮಾಹೆಯಲ್ಲಿ ಇದನ್ನು ಉದ್ಘಾಟಿಸಲಾಗುವುದು ಎಂದರು.
ಕ್ರೀಡಾಂಗಣ ಸುತ್ತ ಫೆನ್ಸಿಂಗ್ ಮಾಡಬೇಕೆಂದು ಕಾಮಗಾರಿ ನಿರ್ಮಾಣದ ಜವಾಬ್ದಾರಿ ಹೊತ್ತಿಕೊಂಡಿರುವ ಕೆ.ಆರ್.ಐ.ಡಿ.ಎಲ್ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು. ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಲಿಮಿಟೆಡ್ ಇ.ಇ. ಸೌರಭ ಮತ್ತು ಎಸ್.ಇ. ಮಾಶೆಟ್ಟಿ ಅವರು ಕಾಮಗಾರಿ ಕುರಿತು ಸಚಿವರಿಗೆ ಮಾಹಿತಿ ನೀಡಿದರು.
*ಕನ್ಯಾ ಪ್ರೌಢ ಶಾಲೆ ವೀಕ್ಷಣೆ:*
ಇದೇ ಸಂದರ್ಭದಲ್ಲಿ ಪಟ್ಟಣದಲ್ಲಿ ಖಾಸಗಿ ಶಾಲೆಗೂ ಮೀರಿಸುವಂತೆ ಸಕಲ ಸೌಕರ್ಯಗಳೊಂದಿಗೆ ನಿರ್ಮಿಸಲಾಗುತ್ತಿರುವ 25 ಕೋಟಿ ರೂ. ವೆಚ್ಚದ ಸರ್ಕಾರಿ ಕನ್ಯಾ ಪ್ರೌಢ ಶಾಲೆ ಸಂಕೀರ್ಣ ಕಟ್ಟಡಕ್ಕೆ ಭೇಟಿ ನೀಡಿ ಪರಿಶೀಲಿಸಿದ ಸಚಿವ ಪ್ರಿಯಾಂಕ್ ಖರ್ಗೆ, ಕಾಮಗಾರಿಯಲ್ಲಿ ಗುಣಮಟ್ಟ ಕಾಪಾಡಬೇಕು. ಹಳೇ ಕಟ್ಟಡದಲ್ಲಿ ಬಾಲಕ-ಬಾಲಕೀಯರು ವ್ಯಾಸಂಗ ಮಾಡುತ್ತಿದ್ದು ತುಂಬಾ ತೊಂದರೆಯಾಗುತ್ತಿದೆ. ಬರುವ ಫೆಬ್ರವರಿ ಒಳಗೆ ಕಾಮಗಾರಿ ಮುಗಿಸಬೇಕು. ಮುಂದಿನ ಶೈಕ್ಷಣಿಕ ತರಗತಿಗಳು ಇಲ್ಲಿಯೆ ಪ್ರಾರಂಭಿಸಬೇಕು ಎಂದು ಸ್ಥಳದಲ್ಲಿದ್ದ ಬಿ.ಇ.ಓ ಜಗದೇವಿ ಅವರಿಗೆ ಸಚಿವರು ನಿರ್ದೇಶನ ನೀಡಿದರು.
*ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೂ ಭೇಟಿ:*
ನಾಗಾವಿ ಎದುಕೇಷನ್ ಕ್ಯಾಂಪಸ್ ಆವರಣದಲ್ಲಿ ನಿರ್ಮಿಸಲಾಗಿರುವ ಪ್ರಾದೇಶಿಕ ಉಪ ವಿಜ್ಞಾನ ಕೇಂದ್ರಕ್ಕೂ ಭೇಟಿ ನೀಡಿದ ಸಚಿವರು ಲೊಕೋಪಯೋಗಿ ಇಲಾಖೆಯಿಂದ ನಿರ್ಮಾಣಗೊಂಡ ಕಟ್ಟಡಕ್ಕೆ ತಾರೇ ಜಮೀನ್ ಪರ್ ಸಂಸ್ಥೆ ಪೂರೈಸಿದ ವಿವಿಧ ಉಪಕರಣಗಳನ್ನು ವೀಕ್ಷಿಸಿ ಸಂಸ್ಥೆಯ ಪ್ರತಿನಿಧಿ ಚೇತನ ಅವರಿಂದ ಮಾಹಿತಿ ಪಡೆದರು.
ಉಪಕರಣಗಳ ಗುಣಮಟ್ಟ ಸರಿಯಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಈ ಸಂಬಂಧ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸುವೆ ಎಂದರು.
ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ಎಸ್.ಪಿ. ಅಕ್ಷಯ್ ಹಾಕೈ, ಸಹಾಯಕ ಆಯುಕ್ತ ಆಶಪ್ಪ ಪೂಜಾರಿ, ಚಿತ್ತಾಪುರ ತಹಶೀಲ್ದಾರ ಅಮರೇಶ ಬಿರಾದಾರ, ತಾಲೂಕ ಪಂಚಾಯತ ಇ.ಓ ನೀಲಗಂಗಾ ಬಬಲಾದ. ಯುವ ಸಬಲೀಕರಣ ಮತ್ತು ಕ್ರಿಡಾ ಇಲಾಖೆಯ ಸಹಾಯಕ ನಿರ್ದೇಶಕ ಅಮೃತ ಅಷ್ಟಗಿ, ಕೋಚ್ ಮರಿಯಪ್ಪ ಬೊಮ್ಮನಳ್ಳಿಕರ್ ಇದ್ದರು.