ಶರಣರ ವಿಚಾರಧಾರೆ ಬದುಕಿಗೆ ದಾರಿದೀಪ: ಕೋರಣೇಶ್ವರ ಸ್ವಾಮೀಜಿ

0
39

ಕಲಬುರಗಿ: ಹಿರಿಯರ ಸ್ಮರಣೋತ್ಸವ ನಿಮಿತ್ತ ವಿದ್ಯಾರ್ಥಿಗಳ ಹೆಚ್ಚಿನ ವ್ಯಾಸಾಂಗಕ್ಕಾಗಿ ಅವರಿಗೆ ಧನಸಹಾಯ ನೀಡುವ, ಸಮಾಜಮುಖಿಯಾಗಿ ಕೆಲಸ ಮಾಡುವ ಸಂಘ ಸಂಸ್ಥೆಗಳು ಹೆಚ್ಚಾಗಬೇಕು ಎಂದು ಆಳಂದ ತೋಂಟದಾರ್ಯ ಅನುಭವ ಮಂಟಪದ ವಿಶ್ವನಾಥ ಕೋರಣೇಶ್ವರ ಸ್ವಾಮೀಜಿ ನುಡಿದರು.

ನಗರದ ಬಸವ ಮಂಟಪದಲ್ಲಿ ಸೋಮವಾರ ಗುರುಬಸವ ಸೇವಾ ಪ್ರತಿಷ್ಠಾನದ ತೃತೀಯ ವಾರ್ಷಿಕೋತ್ಸವ ಹಾಗೂ ಲಿಂ. ಬಸವರಾಜ ನಾಗೂರ ಅವರ ನಾಲ್ಕನೆ ಸ್ಮರಣೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಶರಣರ ವಿಚಾರಧಾರೆಯಲ್ಲಿ ಬಾಳಿ ಬದುಕಿದರೆ ಜೀವನ ಸಾರ್ಥಕವಾಗಲಿದೆ ಎಂದು ತಿಳಿಸಿದರು.

Contact Your\'s Advertisement; 9902492681

ಕಾರ್ಯಕ್ರಮ ಉದ್ಘಾಟಿಸಿದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ನ ನಿಕಟಪೂರ್ವ ಅಧ್ಯಕ್ಷ ಅಪ್ಪಾರಾವ ಅಕ್ಕೋಣೆ ಮಾತನಾಡಿ, ಹಿರಿಯರ ಆದರ್ಶಗಳನ್ನು ಪಾಲಿಸುವುದರ ಜೊತೆಗೆ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆಯಬೇಕು. ವಚನ ವಿಚಾರಗಳನ್ನು ಅನುಷ್ಠಾನಕ್ಕೆ ತರಬೇಕು ಎಂದು ಕರೆ ನೀಡಿದರು.

ಪತ್ರಕರ್ತ- ಲೇಖಕ ಡಾ. ಶಿವರಂಜನ ಸತ್ಯಂಪೇಟೆ ಅವರು ‘ಕಾಯಕ ಮತ್ತು ದಾಸೋಹ’ ಕುರಿತು ವಿಶೇಷ ಉಪನ್ಯಾಸ ನೀಡಿ, ಕಾಯಕ ಎಲ್ಲಿ ಇಲ್ಲವೋ ಅಲ್ಲಿ ಜೀವನಕ್ಕೆ ಅರ್ಥವಿರುವುದಿಲ್ಲ. ಅವಶ್ಯಕತೆಗಿಂತ ಹೆಚ್ಚಿನದನ್ನು ಬಳಸದೆ ದಾಸೋಹ ರೂಪದಲ್ಲಿ ಸಮಾಜಕ್ಕೆ ಅರ್ಪಿಸಬೇಕು. ಕೆಲಸಕ್ಕೆ-ಕಾಯಕ, ದಾನಕ್ಕೆ-ದಾಸೋಹದ ಪರಿಕಲ್ಪನೆ ಕೊಟ್ಟ ಶರಣರು ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದರು ಎಂದರು.

ವೀರಶೈವ- ಲಿಂಗಾಯತ ಸಮಾಜದ ಹಿರಿಯ ಮುಖಂಡ ಕಲ್ಯಾಣರಾವ ಪಾಟೀಲ ಮಳಖೇಡ, ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷ ರಾಜಶೇಖರ ಯಂಕಂಚಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ಗುರುಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಶರಣಬಸಪ್ಪ ನಾಗೂರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ರವೀಂದ್ರ ಶಾಬಾದಿ ಪ್ರಾಸ್ತಾವಿಕ ಮಾತನಾಡಿದರು. ಬಸವ ಪ್ರಭು ಶಾಬಾದಿ ಸ್ವಾಗತಿಸಿದರು. ರೇಣುಕಾ ಅಲ್ಲದ ಪ್ರಾರ್ಥನೆಗೀತೆ ಹಾಡಿದರು. ಪರಮೇಶ್ವರ ಶೆಟಕಾರ ನಿರೂಪಿಸಿದರು. ಮಾತಾಜಿ ಎಂ.ಗೋಳಾ ವಂದಿಸಿದರು.

ಇದೇವೇಳೆಯಲ್ಲಿ ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಅಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಧನ ಸಹಾಯ ಮಾಡಲಾಯಿತು. ಪ್ರತಿಷ್ಠಾನಕ್ಕೆ ದಾಸೋಹ ಸೇವೆಗೈದ ಮಹನೀಯರನ್ನು ಸತ್ಕರಿಸಲಾಯಿತು.

ಬಸವರಾಜ ಎಸ್. ಪರಶೆಟ್ಟಿ, ಕಮಲಾಬಾಯಿ ಶಾಬಾದಿ, ಸತೀಶ ಸಜ್ಜನ್, ಅಯ್ಯನಗೌಡ, ಕವಿತಾ ನಾಗೂರ, ಶಿವಲಿಂಗಮ್ಮ, ಡಾ. ವಡ್ಡನಕೇರಿ ಶಿವಶಂಕರ ನಾಗೂರ, ಶಾರದಾ ಜಾಕಾ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here