ಕಲಬುರಗಿ: ಪ್ರಸಕ್ತ 2024-25ನೇ ಸಾಲಿನ ಆಯವ್ಯಯದಲ್ಲಿ ರಾಜ್ಯ ಸರ್ಕಾರ ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಗೆ ಘೋಷಿಸಿರುವ 5,000 ಕೋಟಿ ರೂ. ಅನುದಾನಕ್ಕೆ ಕ್ರಿಯಾ ಯೋಜನೆ ರೂಪಿಸಲು ಕೆ.ಕೆ.ಆರ್.ಡಿ.ಬಿ. ಮಂಡಳಿ ಸರ್ವಾನುಮತದಿಂದ ಅನುಮೋದನೆ ನೀಡಿದೆ.
ಸೋಮವಾರ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಡಾ.ಅಜಯ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ಇಲ್ಲಿನ ಕೆ.ಕೆ.ಆರ್.ಡಿ.ಬಿ. ಕಚೇರಿ ಸಭಾಂಗಣದಲ್ಲಿ ನಡೆದ ಪ್ರಸಕ್ತ ವರ್ಷದ ಮೊದಲ ಮಂಡಳಿ ಸಭೆಯಲ್ಲಿ ಪ್ರದೇಶದ 41 ತಾಲೂಕುಗಳಲ್ಲಿ ಸಾಂಸ್ಥಿಕ ಮತ್ತು ಮೂಲಸೌಕರ್ಯ ವರ್ಗಗಡಿ ಶಿಕ್ಷಣ, ಆರೋಗ್ಯ, ಉದ್ಯೋಗ ಸೃಜನೆ, ಕೌಶಲ್ಯಾಭಿವೃದ್ಧಿ, ಗ್ರಾಮೀಣ ರಸ್ತೆ ಹಾಗೂ ಇನ್ನಿತರ ಮೂಲಸೌಕರ್ಯಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಮೂಲಕ ಮಾನವ ಅಭಿವೃದ್ಧಿ ಸೂಚ್ಯಂಕ ಉತ್ತಮಗೊಳಿಸಲು ಯೋಜನೆ ಹಾಕಿಕೊಳ್ಳಲು ನಿರ್ಧರಿಸಲಾಯಿತು.
ಕಳೆದ ಜೂನ್ 14 ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಕೆ.ಕೆ.ಆರ್.ಡಿ.ಬಿ. ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಿಕ್ಷಣ, ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡುವಂತೆ ಸೂಚಿಸಿರುವ ಹಿನ್ನೆಲೆಯಲ್ಲಿ ಈ ವರ್ಷ ಸಹ ಶೈಕ್ಷಣಿಕ ವರ್ಷ ಎಂದು ಪರಿಗಣಿಸಿ ಶೇ. 25 ಅನುದಾನ ಶಿಕ್ಷಣ ಕ್ಷೇತ್ರಕ್ಕೆ ಮೀಸಲಿಡಲು ಸಭೆ ನಿರ್ಧರಿಸಿತು. ಅಲ್ಲದೆ ಪ್ರಸಕ್ತ ಸಾಲಿನ ಅಯವ್ಯಯದಲ್ಲಿ ಪ್ರದೇಶದ ಯೋಜನೆಗಳ ಅನುಷ್ಠಾನದ ಕುರಿತು ಸಭೆಯಲ್ಲಿ ಸುದೀರ್ಘವಾಗಿ ಚರ್ಚೆ ಮಾಡಲಾಯಿತು.
10 ದಿನದಲ್ಲಿ ಪ್ರಸ್ತಾವನೆ ಸಲ್ಲಿಸಲು ಸೂಚನೆ: ಪ್ರಸಕ್ತ ಸಾಲಿನ 5,000 ಕೋಟಿ ರೂ. ಅನುದಾನಕ್ಕೆ ಕ್ರಿಯಾ ಯೋಜನೆ ರೂಪಿಸಬೇಕಾದ ಕಾರಣ ಆಯಾ ಶಾಸಕರು ಮುಂದಿನ 10 ದಿನದೊಳಗೆ ಮಂಡಳಿಗೆ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಲು ಸಭೆ ಒಪ್ಪಿಗೆ ನೀಡಿತು.
ಸಭೆಯಲ್ಲಿ ಅರಣ್ಯ, ಜೀವಿಶಾಸ್ತ್ರ ಹಾಗೂ ಪರಿಸರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವರು ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪೂರ, ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರು ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ, ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ಎಸ್. ತಂಗಡಗಿ, ಮುಖ್ಯ ಮಂತ್ರಿಯವರ ಸಲಹೆಗಾರರು ಹಾಗೂ ಆಳಂದ ಶಾಸಕ ಬಿ.ಆರ್.ಪಾಟೀಲ, ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರರು ಹಾಗೂ ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ, ಸಿಂಧನೂರ ಶಾಸಕ ಹಂಪನಗೌಡ ಬಾದರ್ಲಿ, ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ, ವಿಜಯನಗರ ಶಾಸಕ ಎಚ್.ಆರ್.ಗವಿಯಪ್ಪ, ವಿಧಾನ ಪರಿಷತ್ ಶಾಸಕ ತಿಪ್ಪಣ್ಣಪ್ಪ ಕಮಕನೂರ ಭಾಗವಹಿಸಿದ್ದರು.
ಇದಲ್ಲದೆ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ, ಅಲ್ಪಸಂಖ್ಯಾತ, ಹಜ್ ಮತ್ತು ವಕ್ಫ್ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಮನೋಜ ಜೈನ್, ಕೆ.ಕೆ.ಆರ್.ಡಿ.ಬಿ ಕಾರ್ಯದರ್ಶಿ ಎಂ. ಸುಂದರೇಶ್ ಬಾಬು, ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಡಾ.ಆಕಾಶ ಎಸ್., ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಪ್ರದೇಶಾಭಿವೃದ್ಧಿ ಮಂಡಳಿ ವಿಭಾಗದ ನಿರ್ದೇಶಕ ಡಿ. ಚಂದ್ರಶೇಖರಯ್ಯ, ಕೆ.ಕೆ.ಆರ್.ಡಿ.ಬಿ. ಮಂಡಳಿಯ ಉಪ ಕಾರ್ಯದರ್ಶಿ ಎಂ.ಕೆ.ಪ್ರಮೀಳಾ, ಅಪರ ನಿರ್ದೇಶಕಿ ಪ್ರವೀಣ ಪ್ರಿಯಾ, ಅಧೀಕ್ಷಕ ಅಭಿಯಂತ ವಿಜಯಕುಮಾರ, ಹಣಕಾಸು ನಿಯಂತ್ರಕಿ ಅಶ್ವಿನಿ ಧನರಾಜ, ಉಪನಿರ್ದೇಶಕಿ ಸುಜಾತಾ ಕಾಳಗಿ, ಅಧೀನ ಕಾರ್ಯದರ್ಶಿ ದಯಾನಂದ ಪಾಟೀಲ ಸಭೆಯಲ್ಲಿ ಭಾಗವಹಿಸಿದ್ದರು.