ಸುರಪುರ: ನಗರದ ರಂಗಂಪೇಟೆಯ ಅಮರೇಶ್ವರ ನಿಲಯದಲ್ಲಿ ಸರ್ವಜ್ಞ ಸೇವಾ ಸಂಸ್ಥೆಯ ಪ್ರಥಮ ವಾರ್ಷಿಕೋತ್ಸವವನ್ನು ಆಚರಿಸಲಾಯಿತು.ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದ ನಗನೂರಿನ ಸೂಗುರೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ,ಇಂದು ಅನೇಕ ಯುವಕರು ಯಾವುದರ ಕಾಳಜಿ ಇಲ್ಲದೆ ಇರುತ್ತಿರುವಾಗ ಅಮರೇಶ ಕುಂಬಾರ ಸಮಾಜದ ಸೇವೆಯನ್ನು ಗಮನದಲ್ಲಿಟ್ಟುಕೊಂಡು ಸರ್ವಜ್ಞಾ ಸೇವಾ ಸಂಸ್ಥೆಯ ಮೂಲಕ ಸಮಾಜಪರ ಕೆಲಸ ಮಾಡುತ್ತಿರುವುದು ಎಲ್ಲರಿಗೂ ಮಾದರಿಯಾಗಿದೆ ಎಂದರು.ಈಗ ಪ್ರಥಮ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿರುವ ಸಂಸ್ಥೆ ಇಂತಹ ನೂರಾರು ವಾರ್ಷಿಕೋತ್ಸವ ಆಚರಿಸಿಕೊಳ್ಳಲೆಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸುರಪುರ ಪೊಲೀಸ್ ಠಾಣೆ ಆರಕ್ಷಕ ನಿರೀಕ್ಷಕ ಆನಂದರಾವ್ ಮಾತನಾಡಿ,ಸರ್ವಜ್ಞ ಸೇವಾ ಸಂಸ್ಥೆಯಂತಹ ಸಂಸ್ಥೆಗಳು ಇಂದು ಉತ್ತಮವಾದ ಸಮಾಜಮುಖಿ ಕೆಲಸ ಮಾಡುತ್ತಿವೆ.ಎಲ್ಲಾ ಕೆಲಸಗಳನ್ನು ಕೇವಲ ಸರಕಾರಗಳೆ ಮಾಡಲಿ ಎನ್ನುವ ಬದಲು ಜನರು ಕೂಡ ಹೀಗೆ ಸಂಸ್ಥೆಗಳ ಮೂಲಕ ಸಾಧ್ಯವಾದಷ್ಟು ಸಮಾಜಮುಖಿ ಕೆಲಸ ಮಾಡುವ ಮೂಲಕ ಇತರರಿಗೆ ಮಾದರಿಯಾಗಬೇಕು ಎಂದರು.ಸರ್ವಜ್ಞ ಸೇವಾ ಸಂಸ್ಥೆ ಇನ್ನೂ ಅನೇಕ ಜನರಿಗೆ ಒಳಿತಾಗುವಂತಹ ಕೆಲಸಗಳನ್ನು ಮಾಡಲಿ ಎಂದರು.
ಇದೇ ಸಂದರ್ಭದಲ್ಲಿ ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ ಶರಣಕುಮಾರ ಜಾಲಹಳ್ಳಿ,ಮುರುಗೇಶ ಹುಣಸಗಿ,ಶಿವಣ್ಣ ಇಜೇರಿ,ದೊಡ್ಡ ಹಣಮಂತ್ರಾಯ ತಿಪ್ಪನಟಿಗಿ ಹಾಗು ಬಸವರಾಜಸ್ವಾಮಿ ರುಮಾಲ ಇವರುಗಳಿಗೆ ಸರ್ವಜ್ಞ ಶ್ರೀ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.ನಂತರ ಮನೋಹರ ವಿಶ್ವಕರ್ಮ ಬಳಗದಿಂದ ಸಂಗೀತ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದ ವೇದಿಕೆ ಮೇಲೆ ಕೆಂಭಾವಿ ಹಿರೇಮಠದ ಚೆನ್ನಬಸವ ಶಿವಾಚಾರ್ಯ ಸ್ವಾಮೀಜಿ,ರುಕ್ಮಾಪುರ ಹಿರೇಮಠದ ಗುರುಶಾಂತಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಲಕ್ಷ್ಮೀಪುರ ಶ್ರೀಗಿರಿ ಮಠದ ಬಸವಲಿಂಗ ದೇವರು,ನಾಗನಟಿಗಿಯ ಸಿದ್ದರಾಮ ಶಿವಾಚಾರ್ಯ ಸ್ವಾಮೀಜಿ,ಸುರೇಶ ಸಜ್ಜನ,ಸುರೇಶ ಕುಂಬಾರ ಶಹಾಬಾದ,ಕೆಎಫ್‌ಸಿಸಿ ವ್ಯವಸ್ಥಾಪಕ ಮಲ್ಲಿಕಾರ್ಜುನಗೌಡ ಮಸ್ಕಿ ವೇದಿಕೆ ಮೇಲಿದ್ದರು.ಪ್ರಕಾಶ ಅಂಗಡಿ ಪ್ರಾಸ್ತಾವಿಕವಾಗಿ ಮಾತನಾಡಿದರು,ಸಂಸ್ಥೆಯ ಅಧ್ಯಕ್ಷ ಅಮರೇಶ ಕುಂಬಾರ ಸ್ವಾಗತಿಸಿದರು,ಗುರುಪ್ರಸಾದ ವೈದ್ಯ ನಿರೂಪಿಸಿದರು,ಅಂಬಿಕಾ ವಂದಿಸಿದರು.ಕಾರ್ಯಕ್ರಮದಲ್ಲಿ ಸೋಮರಾಯ ಶಖಾಪುರ,ಸಂಗಣ್ಣ ಎಕ್ಕೆಳ್ಳಿ,ಮುರ್ತುಜಾ ಮುಲ್ಲಾ,ಆದಪ್ಪ ಕುಂಬಾರ,ವೀರಭದ್ರಪ್ಪ ಕುಂಬಾರ,ಶಿವಕುಮಾರ ಕಮತಿಗಿ ಸೇರಿದಂತೆ ಅನೇಕರಿದ್ದರು.