ಶಹಾಪುರ: ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳ ಸೌಲಭ್ಯ ಪ್ರತಿಯೊಬ್ಬ ಅರ್ಹ ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪಿಸಬೇಕು ಹಾಗೂ ಬಡ ಜನರ ಮನೆ ಬಾಗಿಲಿಗೆ ಮುಟ್ಟಿಸುವ ಕೆಲಸ ತಾಲೂಕು ಮಟ್ಟದ ಅಧಿಕಾರಿಗಳು ಜವಾಬ್ದಾರಿಯುತವಾಗಿ ನಿರ್ವಹಿಸಬೇಕು ಎಂದು ತಾಲೂಕ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಗೌಡಪ್ಪಗೌಡ ಆಲ್ದಾಳ ಹೇಳಿದರು.
ಕರ್ನಾಟಕ ಸರಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಕುರಿತು ಜು.10ರಂದು ಶಹಾಪುರ ತಾಲೂಕ ಪಂಚಾಯತ ಸಭಾಂಗಣದಲ್ಲಿ ನಡೆದ ತಾಲೂಕ ಮಟ್ಟದ ಪ್ರಗತಿ ಪರಿಶೀಲನ ಸಭೆಯ ಅಧ್ಕಕ್ಷತೆ ವಹಿಸಿ ಅವರು ಮಾತನಾಡಿದರು.
ಗ್ರಾಮೀಣ ಮಟ್ಟದಲ್ಲಿ ಸರ್ಕಾರದ ಗ್ಯಾರಂಟಿ ಯೋಜನೆಗಳು ಪರಿಣಾಮಕಾರಿಯಾಗಿ ಜಾರಿಯಾಗಬೇಕು. ಅಧಿಕಾರಿಗಳಲ್ಲಿ ಸೇವಾ ಮನೋಭಾವ ಇರಬೇಕು. ಸಮಾಜದಲ್ಲಿ ಇನ್ನು ಅನೇಕರು ಅಗತ್ಯ ಮೂಲ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು ಎಂದು ವಿವಿಧ ಇಲಾಖೆಗಳ ಅನುμÁ್ಠನಾಧಿಕಾರಿಗಳಿಗೆ ಸೂಚಿಸಿದರು.
ಗೃಹಜ್ಯೋತಿ ಯೋಜನೆಯಡಿ ಗ್ರಾಮೀಣ ಹಾಗೂ ನಗರ ಪ್ರದೇಶದ ಪ್ರತಿ ಕುಟುಂಬಕ್ಕೂ ಪ್ರತಿ ತಿಂಗಳು 200 ಯುನಿಟ್ ವರೆಗೆ ಉಚಿತ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಬಹಳಷ್ಟು ಗ್ರಾಹಕರು 200 ಯುನಿಟ್ ಒಳಗೆ ವಿದ್ಯುತ್ ಬಳಕೆ ಮಾಡುತ್ತಿದ್ದಾರೆ. ಗ್ರಾಮೀಣ ಭಾಗದ ಗ್ರಾಹಕರು ತಮ್ಮ ಮನೆಯಲ್ಲಿ ಮೀಟರ್ ಅಳವಡಿಸಿಕೊಂಡಿಲ್ಲ, ತಾಲೂಕಿನಲ್ಲಿ 17ಸಾವಿರ ಫಲಾನುಭವಿಗಳಷ್ಟೆ ಮೀಟರ್ ಅಳವಡಿಸಿಕೊಂಡಿದ್ದಾರೆ ಎಂದು ಶಹಾಪುರ ತಾಲೂಕ ಸಹಾಯಕ ಕಾರ್ಯಪಾಲಕ ಅಭಿಯಂತರರು ಮಾಹಿತಿ ನೀಡಿದರು.
ಸರಕಾರ ಗೃಹಜ್ಯೋತಿ ಯೋಜನೆಯಡಿ ನೀಡಿದ 200 ಯುನಿಟ್ ಮಿತಿಯೋಳಗೆ ವಿದ್ಯುತ್ ಬಳಕೆ ಮಾಡುವ ಗ್ರಾಹಕರ ಸಂಖ್ಯೆ ಹೆಚ್ಚಿರುವದರಿಂದ, ಪ್ರತಿ ಮನೆಗೂ ಮೀಟರ್ ಅಳವಡಿಕೆ ಮಾಡಿಕೊಳ್ಳುವಂತೆ ಗ್ರಾಹಕರಿಗೆ ಮನವರಿಕೆ ಮಾಡುವ ಮೂಲಕ ವಿದ್ಯುತ್ ಸೋರಿಕೆಯನ್ನು ತಡೆಯಬಹುದು ಅಲ್ಲದೇ, ಓವರ್ ಲೋಡ್‍ನಿಂದ ವಿದ್ಯುತ್ ಟ್ರಾನ್ಸಫಾರ್ಮಗಳು ಕೆಡುವುದನ್ನು ನಿಯಂತ್ರಿಸಬಹುದು ಎಂದು ವಿದ್ಯುತ್ ಇಲಾಖೆಯ ಅಧಿಕಾರಿಗೆ ಸೂಚಿಸಿದರು.
ಪಡಿತರ ಚೀಟಿ ನೋಂದಣಿ ನಿಯಮಾನುಸಾರ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಲ್ಲಿ ನೋಂದಣಿಯಾಗಬೇಕು. ಯಾರೊಬ್ಬರೂ ಸರಕಾರದ ಗ್ಯಾರಂಟಿ ಯೋಜನೆಗಳಿಂದ ವಂಚಿತರಾಗಬಾರದು. ಸರಕಾರದ ಜನಪರ ಯೋಜನೆಯ ಲಾಭ ಜನಸಾಮಾನ್ಯರಿಗೆ ನೀಡಬೇಕಾಗಿದೆ ಎಂದರು.
ತಾಲೂಕಿನಲ್ಲಿ 58,217 ರೇಷನ್ ಕಾರ್ಡ್‍ಗಳಿದ್ದು, 2,30,427 ಜನ ಫಲಾನುಭವಿಗಳಿಗೆ ಅನ್ನಭಾಗ್ಯ ಯೋಜನೆಯಡಿ 5 ಕೆಜಿ ಅಕ್ಕಿ ಜತೆಗೆ ಮಾಸಿಕ ಪ್ರತಿ ಫಲಾನುಭವಿಗೆ 170 ರೂಗಳನ್ನು ಹಣವನ್ನು ನೇರ ನಗದು ವರ್ಗಾವಣೆ ಯೋಜನೆ ಮೂಲಕ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುತ್ತಿದೆ ಎಂದು ಆಹಾರ ಇಲಾಖೆ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು.
ಗೃಹಲಕ್ಷ್ಮಿ ಯೋಜನೆಯಡಿ ನೋಂದಾಯಿತ ಫಲಾನುಭವಿಗಳಲ್ಲಿ ಕೆಲವರಿಗೆ ವಿವಿಧ ಕಾರಣಗಳಿಂದ ಮಾಸಿಕ ಹಣ ವರ್ಗಾವಣೆಯಾಗಿಲ್ಲ, ಅಂತಹ ಫಲಾನುಭವಿಗಳ ಪಟ್ಟಿ ನೀಡಿ, ಸಮಸ್ಯೆಗಳ ಇತ್ಯರ್ಥಕ್ಕೆ ಸೂಕ್ತಕ್ರಮ ವಹಿಸಿ ಎಂದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕಿನ ಬಿಪಿಎಲ್ ಹಾಗೂ ಎಪಿಎಲ್ ಕುಟುಂಬಗಳ ಯಜಮಾನಿಯ ಖಾತೆಗೆ ಮಾಸಿಕ 2000 ರೂ. ಮೊತ್ತ ವರ್ಗಾವಣೆ ಮಾಡಲಾಗುವುದು. ಈ ಯೋಜನೆಯ ಸೌಲಭ್ಯ ಪಡೆಯಲು ಮಹಿಳೆಯರು ತಮ್ಮ ಕುಟುಂಬದ ರೇಷನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್‍ನೊಂದಿಗೆ ಗ್ರಾಮ್ ಒನ್ ಕೇಂದ್ರದಲ್ಲಿ ಅರ್ಜಿ ಸಲ್ಲಿಸಿ, ಯೋಜನೆಯ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಗ್ರಾಮ ಪಂಚಾಯಿತಿಯಿಂದ ಗ್ರಾಮಗಳಲ್ಲಿ ಡಂಗೂರ ಸಾರಬೇಕು ಎಂದು ಅಂಧಿಕಾರಿಗಳಿಗೆ ಸೂಚಿಸಿದರು.
ಸರ್ಕಾರದ ಗ್ಯಾರಂಟಿ ಶಕ್ತಿ ಯೋಜನೆಯಡಿ ಶಹಾಪುರ ತಾಲೂಕಿನಲ್ಲಿ ಘಟಕದಲ್ಲೆ 67.58ಲಕ್ಷ ಮಹಿಳೆಯರಿಗೆ ಸಾರಿಗೆ ಸೌಲಭ್ಯ ಕಲ್ಪಿಸಿದ್ದು. ಇದರಿಂದ 28.14 ಕೋಟಿ ರೂ ಆದಾಯ ಬಂದಿದ್ದು, ಹೊಸದಾಗಿ 27 ವಾಹನಗಳನ್ನು ಸೇರ್ಪಡೆಗೊಳಿಸಲಾಗಿದೆ ಎಂದು ಸಾರಿಗೆ ಇಲಾಖೆಯ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಮಹಿಳೆಯರು ರಾಜ್ಯದ ಮೂಲೆ-ಮೂಲೆಗಳಿಗೆ ಉಚಿತ ಪ್ರವಾಸ ಮಾಡುತಿದ್ದಾರೆ. ವಿದ್ಯಾರ್ಥಿನಿಯರೂ ಸೇರಿದಂತೆ ಎಲ್ಲ ವರ್ಗಗಳ ಮಹಿಳೆಯರಿಗೆ ಅಂತರ್ ರಾಜ್ಯ ಸಾರಿಗೆ ಬಸ್, ಎಸಿ ಹಾಗೂ ಲಕ್ಷುರಿ ಬಸ್‍ಗಳನ್ನು ಹೊರತುಪಡಿಸಿ ಇತರ ಎಲ್ಲ ಬಸ್‍ಗಳಲ್ಲಿ ರಾಜ್ಯದೊಳಗೆ ಉಚಿತ ಪ್ರಯಾಣ ಸೌಲಭ್ಯ ನೀಡಿದ್ದು, ಆದಾರ್ ಕಾರ್ಡ್ ಅಲ್ಲದೇ, ಸರಕಾರ ನೀಡಿದ ಇತರೆ ಯಾವುದೇ ಗುರುತಿನ ಚೀಟಿಗಳನ್ನು ತೋರಿಸಿ ಮಹಿಳಾ ಪ್ರಯಾಣಿಕರು ಬಸ್‍ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಕ್ರಮವಹಿಸಿ ಎಂದು ಸಾರಿಗೆ ಇಲಾಖೆಯ ಅಧಿಕಾರಿಗೆ ನಿರ್ದೇಶಿಸಿದರು.
ಗ್ಯಾರಂಟಿ ಯೋಜನೆಗಳನ್ನು ಅನುಷ್ಟಾನ ಮಾಡುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಗಂಭೀರ ಪರಿಗಣಿಸಿ, ಯಾವ ಕಾರಣಕ್ಕಾಗಿ ಸೌಲಭ್ಯ ದಕ್ಕುತ್ತಿಲ್ಲ. ಅದಕ್ಕಾಗಿ ಏನು ಮಾಡಬೇಕೆಂಬ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವಂತಹ ಕೆಲಸ ಆಯಾ ಇಲಾಖೆಗಳು ಮಾಡಬೇಕು. ಈ ಬಾರಿ ಸಭೆಯಲ್ಲಿ ಪ್ರಾಸ್ತಾಪ ಆಗಿರುವ ಎಲ್ಲ ಸಮಸ್ಯೆಗಳಿಗೆ ಮುಂದಿನ ಸಭೆ ಹೊತ್ತಿಗೆ ಪರಿಹಾರ ಹುಡುಕಿಕೊಂಡು ಬರುವಂತೆ ಎಲ್ಲ ಅಧಿಕಾರಿಗಳಿಗೆ ಸೂಚಿಸಿದರು.
ಈ ವೇಳೆ ಶಹಾಪುರ ತಾಳೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸೋಮಶೇಖರ ಬಿರದಾರ, ಸಹಾಯಕ ನಿರ್ದೇಶಕರಾದ ಭೀಮಣ್ಣಗೌಡ ಬಿರಾದಾರ, ಗ್ಯಾರಂಟಿ ಯೋಜನೆಗಳ ತಾಲೂಕ ಸಮಿತಿ ಸದಸ್ಯರಾದ ಶರಣಗೌಡ ಅಣಬಿ, ರಮೇಶ ಗುರಿಕಾರ, ಬಸಣ್ಣಗೌಡ, ಮಲ್ಲಣ್ಣಗೌಡ ತಿಪ್ಪನಳ್ಳಿ, ಹುಸೇನ್ ಭಾಷಾ, ತಾಯಮ್ಮ, ಸಿದ್ದಣ್ಣ ದೇಸಾಯಿ ಹಾಗೂ ಮೌನೇಶ ಶಟ್ಟಿಕೇರಾ ಭಾಗವಹಿಸಿದ್ದರು.