ಪಾಸಿಟಿವ್ ಬಂದರೆ ಸುತ್ತ 100 ಮನೆ ಸರ್ವೆ ಮಾಡಿ: ಡೆಂಗ್ಯೂ ಪಾಸಿಟಿವ್ ಪತ್ತೆಯಾದಲ್ಲಿ ರೋಗಿಯ ಮನೆ ಸುತ್ತ 100 ಮನೆಗಳು ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಸರ್ವೆ ಮಾಡಿ ಸೊಳ್ಳೆಗಳ ಮೂಲ ತಾಣಗಳನ್ನು ನಾಶಪಡಿಸಬೇಕೆಂದು ಆರೋಗ್ಯ ಅಧಿಕಾರಿಗಳಿಗೆ ಡಿ.ಸಿ. ಖಡಕ್ ಸೂಚನೆ ನೀಡಿದರು.
ಕಲಬುರಗಿ,ಜು.12(ಕ.ವಾ) ವ್ಯಾಪಕವಾಗಿ ಹರಡುತ್ತಿರುವ ಡೆಂಗ್ಯೂ ರೋಗವನ್ನು ಜಿಲ್ಲೆಯಲ್ಲಿ ತಡೆಗಟ್ಟುವ ನಿಟ್ಟಿನಲ್ಲಿ ಸೊಳ್ಳೆಗಳ ಮೂಲ ತಾಣಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಕೆಲಸ ಚುರುಕುಗೊಳಿಸಬೇಕು ಎಂದು ಅಧಿಕಾರಿಗಳಿಗೆ ಡಿ.ಸಿ. ಬಿ.ಫೌಜಿಯಾ ತರನ್ನುಮ್ ಹೇಳಿದರು.
ಶುಕ್ರವಾರ ತಮ್ಮ ಕಚೇರಿಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಕೂಡಲೆ ತಾಲೂಕು ಮಟ್ಟದ ಟಾಸ್ಕ್ ಫೋರ್ಸ್ ಸಮಿತಿ ಸಭೆ ನಡೆಸಿ ಡೆಂಗ್ಯೂ ನಿಯಂತ್ರಣಕ್ಕೆ ಕಾರ್ಯಕ್ರಮಗಳು ರೂಪಿಸಬೇಕು ಎಂದರು.
ಜಿಲ್ಲೆಯ ಕೆರೆ, ಕುಂಟೆ, ಗದ್ದೆ, ಬಾವಿ, ಗ್ವಾರಿ, ಗಣಿ ಪ್ರದೇಶದ ನೀರು ನಿಂತ ಜಾಗದಲ್ಲಿರುವ ಈಡಿಸ್ ಸೊಳ್ಳೆಗಳನ್ನು ತಿನ್ನುವ ಗಪ್ಪೆ, ಗ್ಯಾಂಬೂಸಿಯಾ ಎಂಬ ಲಾರ್ವಾಹಾರಿ ಮೀನುಗಳನ್ನು ನೀರಿಗೆ ಬಿಡಬೇಕು. ಆರೋಗ್ಯ ಇಲಾಖೆ ಸಿಬ್ಬಂದಿಗಳು ನಗರ-ಪಟ್ಟಣ ಪ್ರದೇಶದಲ್ಲಿ ಪೌರ ಸಂಸ್ಥೆ ಮತ್ತು ಗ್ರಾಮೀಣ ಭಾಗದಲ್ಲಿ ಗ್ರಾಮ ಪಂಚಾಯತಿಯೊಂದಿಗೆ ಸಮನ್ವಯತೆಯೊಂದಿಗೆ ಕಾರ್ಯನಿರ್ವಹಿಸಬೇಕೆಂದರು.
ನಗರದ ವಾರ್ಡ್, ಕಾಲೋನಿಯಲ್ಲಿ ಅಲ್ಲಲ್ಲಿ ನೀರು ನಿಂತಿರುವ ತೆಗ್ಗು ಪ್ರದೇಶದಲ್ಲಿ ಮುಂಜಾಗ್ರತಾ ಕ್ರಮವಾಗಿ ಕೀಟನಾಶಕ ಸಿಂಪಡಿಸಬೇಕು. ಇದಕ್ಕೆ ಸರ್ವಜನಿಕರು ಸಹ ಸಹಕರಿಸಬೇಕೆಂದ ಜಿಲ್ಲಾಧಿಕಾರಿಗಳು ತಿಳಿಸಿದರು.
ಸಭೆಯಲ್ಲಿ ಡಿ.ಎಚ್.ಓ ಡಾ.ರತಿಕಾಂತ ಸ್ವಾಮಿ, ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ.ಎಸ್.ಡಿ.ಅವಟಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸತೀಷ ಕುಮಾರ ಸೇರಿದಂತೆ ತಾಲೂಕಾ ಆರೋಗ್ಯಾಧಿಕಾರಿಗಳು ಇದ್ದರು.