ಬೀದರ್: ವಿಶ್ಬಗುರು ಬಸವಣ್ಣನವರ ಕಾಯಕ ಭೂಮಿಯಾದ ಬೀದರ್ ನಲ್ಲಿ ರಾಜ್ಯ ಕಾಯಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ನಡೆಸಿ ರಾಜ್ಯದ ಎಲ್ಲ ಜಿಲ್ಲೆಗಳ ಕಾಯಕ ಜೀವಿಗಳನ್ನು ಗುರುತಿಸಿ ಗೌರವಿಸುವುದು ಸ್ತುತ್ಯರ್ಹವಾದ ಕೆಲಸ ಎಂದು ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ನುಡಿದರು.
ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ನಗರದ ಡಾ. ಚನ್ನಬಸವಪಟ್ಟದ್ದೇವರ ರಂಗಮಂದಿರದಲ್ಲಿ ಶನಿವಾರ ನಡೆದ ಶಿಕ್ಷಣ ನಮ್ಮ ಹಕ್ಕು ವಿಚಾರ ಸಂಕಿರಣ ಮತ್ತು ರಾಜ್ಯ ಮಟ್ಟದ ಕಾಯಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಮಾನವೀಯ ಮೌಲ್ಯ ತುಂಬುವ ನೈತಿಕ ಶಿಕ್ಷಣದ ಜೊತೆಗೆ ವ್ಯಕ್ತಿತ್ವ ವಿಕಸನದ ಪಾಠದ ಅಗತ್ಯವಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಡಾ. ಅಂಜನಪ್ಪ ಮಾತನಾಡಿ, ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವುದರ ಜೊತೆಗೆ ಆತ್ಮ ವಿಶ್ವಾಸ ತುಂಬುವ ಕೆಲಸ ಮಾಡಬೇಕು. ಐ ಆ್ಯಮ್ ದಿ ಬೆಸ್ಟ್ ಎಂಬ ಪಾಸಿಟಿವ್ ಅಟಿಟ್ಯೂಡ್ ಬಿತ್ತುವ ಕೆಲಸ ಆಗಬೇಕಿದೆ ಎಂದು ಹೇಳಿದ ಅವರು, ಡೆಂಗೆ, ಕೊರೊನಾ ಬಗ್ಗೆ ಭಯ ಬೇಡ. ಆದರೆ ಮುನ್ನೆಚ್ಚರಿಕೆ ಅಗತ್ಯ ಎಂದರು.
ವ್ಯಕ್ತಿತ್ವ ವಿಕಸನ ಕುರಿತು ವಿಶೇಷ ಭಾಷಣ ಮಾಡಿದ ಅಂತಾರಾಷ್ಟ್ರೀಯ ಖ್ಯಾತಿಯ ಕೌಶಲ ತರಬೇರುದಾರ ಚೇತನ ರಾಮ್, ಜ್ಞಾನ, ವಿಜ್ಞಾನ ತಂತ್ರಜ್ಞಾನ ದ ಜೊತೆಗೆ ಸುಜ್ಞಾನ ಕಲಿಸಬೇಕು. ಅಸಾಧ್ಯವೆನ್ನುವುದು ನಮ್ಮ ಹತ್ತಿರ ಸುಳಿಯಬಾರದು.ಅಸಾಧ್ಯವನ್ನು ಸಮಾದಿ ಮಾಡಿ ಬದುಕಬೇಕು ಎಂದರು.
ಏನನ್ನಾದರೂ ಅಂದುಕೊಳ್ಳುವ, ಮಾಡುವ, ಆಗುವ ಜಗತ್ತಿನ ಏಕೈಕ ಜೀವಿ ಮನುಷ್ಯ. ನಗು ಜೀವನವನ್ನು ಉಳಿಸಿದರೆ ಹಣ ಜೀವನವನ್ನು ಉಳಿಸುವುದಿಲ್ಲ. ಪ್ರೀತಿಯಲ್ಲಿ ನಗುವಿದೆ. ನಗುವಿನಲ್ಲಿ ಪ್ರೀತಿಯಿದೆ. ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳು ಪ್ರತಿಭಾವಂತರಾಗಿದ್ದು, ಅವರಿಗೆ ಇಂಗ್ಲಿಷ್ ಮಾತನಾಡುವುದು ಮತ್ತು ತರಬೇತಿಯ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಶಾಸಕರಾದ ಶೈಲೇಂದ್ರ ಬೆಲ್ದಾಳೆ, ಚಂದ್ರಶೇಖರ ಪಾಟೀಲ, ಮಾರುತಿರಾವ ಮೂಳೆ, ಭೂದಾನಿ ಆರ್. ಬಿಳಿಶಿವಾಲೆ, ಬಸವರಾಜ ಧನ್ನೂರ, ಗೌರಿ ಪ್ರಸನ್ನ ಸೇರಿದಂತೆ ಹಲವು ಗಣ್ಯರು ವೇದಿಕೆಯಲ್ಲಿ ಇದ್ದರು.
ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಸಂಸ್ಥಾಪಕ ಅಧ್ಯಕ್ಷ ಹುಲಿಕಲ್ ನಟರಾಜ ಅಧ್ಯಕ್ಷತೆ ವಹಿಸಿದ್ದರು.
ರೇಣುಕಾ ಮಳ್ಳಿ ನಿರೂಪಿಸಿದರು. ಬಾಬುರಾವ ದಾನಿ ಸ್ವಾಗತಿಸಿದರು. ವಿ.ಟಿ.ಸ್ವಾಮಿ ಪ್ರಾಸ್ತಾವಿಕ ಮಾತನಾಡಿದರು.
ಇದೇವೇಳೆಯಲ್ಲಿ ಬೆಂಗಳೂರು, ಮೈಸೂರು, ಕಲಬುರಗಿ, ಬೆಳಗಾವಿ ವಿಭಾಗದ ಸುಮಾರು 38 ಜನರಿಗೆ ಕಾಯಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಯಾದಗಿರಿ ಜಿಲ್ಲೆಯ ಚನ್ನಪ್ಪ ಆನೇಗುಂದಿ, ಕಲಬುರಗಿ ಜಿಲ್ಲೆಯ ಶಿವಣ್ಣಗೌಡ ಹಂಗರಗಿ, ಬೀದರ್ ಜಿಲ್ಲೆಯ ಡಾ. ಗಂಗಾಂಬಿಕಾ ಅಕ್ಕ, ಡಾ. ಜಿ.ವಿ. ಶಿವಪ್ರಕಾಶ ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಇಂಡಿಯನ್ ಐಡಲ್ ಸ್ಪರ್ಧಿ ಶಿವಾನಿ ಶಿವದಾಸ ಸ್ವಾಮಿ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.
ಕರಾವಿಪ ರಾಜ್ಯ ಪ್ರಧಾನ ಕಾರ್ಯದರ್ಶಿ ಚಿಕ್ಕ ಹನುಮಂತೇಗೌಡ, ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ ಚನಶೆಟ್ಟಿ, ಸಂತೋಷ ಪಾಟೀಲ, ವಿಜಯಕುಮಾರ, ಶರಣಬಸವ ಕಲ್ಲಾ, ರವೀಂದ್ರ ಶಾಬಾದಿ, ಡಾ. ಶಿವರಂಜನ ಸತ್ಯಂಪೇಟೆ, ಶರಣಬಾಪ್ಪ ನಾಗೂರ, ಸತೀಶ ಸಜ್ಜನ್, ನೀಲಕಂಠ ಅವಂಟಿ, ಕರಾವಿಪ ಜಿಲ್ಲಾಧ್ಯಕ್ಷ ಕಲಾಲ ದೇವಿಂದ್ರಪ್ಪ ಸೇರಿದಂತೆ ಹಲವರು ಇದ್ದರು.