ಓದಿನಿಂದ ಜೀವನ ಶೈಲಿ ಬದಲಾವಣೆ ಸಾಧ್ಯ; ಡಾ.ರೇಣುಕಾ ಬಗಾಲೆ
ಕಲಬುರಗಿ,ಜು.13: ಕಲಬುರಗಿ ಶ್ರೀಮತಿ ಇಂದುಮತಿ ಚಾರಿಟೇಬಲ್ ಟ್ರಸ್ಟ್(ರಿ) ಮತ್ತು ಹೆಚ್.ಕೆ.ಇ. ಸಂಸ್ಥೆಯ ಮಹಿಳಾ ಪಾಲಿಟೆಕ್ನಿಕ್ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಶನಿವಾರ ಇಲ್ಲಿನ ಐವಾನ್-ಎ-ಶಾಹಿ ಪ್ರದೇಶದಲ್ಲಿನ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನಲ್ಲಿ “ಮಂದಹಾಸ” ಸಮುದಾಯಧಾರಿತ ಮನೋಸಾಮಾಜಿಕ ಪುರ್ನವಸತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ವಿದ್ಯಾರ್ಥಿಗಳ ಓದುವ ಆಸಕ್ತಿ ಹೆಚ್ಚಿಸಲು ಆಯೋಜಿಸಿದ “ಓದು ಒಂದು ಸರಳ ಕಲೆ” ವಿಷಯಾಧಾರಿತ ಕಾರ್ಯಕ್ರಮವನ್ನು ಹೆಚ್.ಕೆ.ಇ. ಸೋಸೈಟಿಯ ಕೌನ್ಸಿಲ್ ಸದಸ್ಯ ಡಾ. ಶರಣಬಸಪ್ಪ ಹರವಾಳ ಉದ್ಘಾಟಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಜಿಮ್ಸ್ ಆಸ್ಪತ್ರೆಯ ಕ್ಲಿನಿಕಲ್ ಸೈಕಾಲಜಿಸ್ಟ್ ಡಾ.ರೇಣುಕಾ ಬಗಾಲೆ ಅವರು ಮಾತನಾಡಿ, ಓದುವುದರಿಂದ ನಮ್ಮ ಜೀವನ ಶೈಲಿಯಲ್ಲಿ ಬದಲಾವಣೆ ಕಾಣಬಹುದಾಗಿದೆ. ಹೊಸ ಕಲ್ಪನೆಗಳು ಸೃಷ್ಟಿ, ಉತ್ಕೃಷ್ಟ ಜೀವನ ಸುಧಾರಣೆಯಾಗಲಿದೆ. ನಮ್ಮಲ್ಲಿ ಭಾವನಾತ್ಮಕ ತಿಳುವಳಿಕೆ ಸಹ ಹೆಚ್ಚಿಸುತ್ತದೆ ಎಂದು ಓದಿನ ಮಹತ್ವದ ಬಗ್ಗೆ ವಿವರಿಸಿದರು.
ಎಚ್.ಕೆ.ಇ. ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಎನ್.ಜಿ.ಪಾಟೀಲ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀಮತಿ ಇಂದುಮತಿ ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷ ರಮೇಶ ಎಸ್. ಹತ್ತಿ, ಮನಸ್ವಿನಿ ವಿಶೇಷ ಮಕ್ಕಳ ಶಾಲೆಯ ಪ್ರಾಂಶುಪಾಲರಾದ ಆಶಾ ನಿಪ್ಪಾಣಿ, ಕಾಲೇಜಿನ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.