ಕಲಬುರಗಿ: ಜಿಲ್ಲೆಯಲ್ಲಿ ಡೆಂಗ್ಯೂ ಜ್ವರ ನಿಯಂತ್ರಣ ನಿಟ್ಟಿನಲ್ಲಿ ಅದಕ್ಕೆ ಪೂರಕವಾಗಿ ಶನಿವಾರ ಜಿಲ್ಲೆಯ ಸರ್ಕಾರಿ ಕಚೇರಿ, ಆಸ್ಪತ್ರೆ, ಶಾಲಾ-ಕಾಲೇಜು, ಗ್ರಾಮ ಪಂಚಾಯತಿ, ವಸತಿ ನಿಲಯಗಳಲ್ಲಿ ಸ್ವಚ್ಚತಾ ಕಾರ್ಯ ನಡೆಯಿತು.
ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಸ್ವತ ಜಿಲ್ಲಾ ಪಂಚಾಯತ್ ಸಿ.ಇ.ಓ ಪೊರಕೆ ಹಿಡಿದು ಕಸಗೂಡಿಸಿದರು. ಸಹ ಅಧಿಕಾರಿ, ಸಿಬ್ಬಂದಿಗಳು ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡರು
ಈ ಸಂದರ್ಭದಲ್ಲಿ ಮಾತನಾಡಿದ ಸಿ.ಇ.ಓ ಭಂವರ್ ಸಿಂಗ್ ಮೀನಾ ಅವರು, ಸಾಮಾನ್ಯವಾಗಿ ಈಡಿಸ್ ಸೊಳ್ಳೆಗಳು ದಿನದಲ್ಲಿ ಕಚ್ಚುತ್ತವೆ. ದಿನದಲ್ಲಿ ಬಹುತೇಕರು ತಮ್ಮ ತಮ್ಮ ಕಚೇರಿ, ಕಾರ್ಖಾನೆ, ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಾರೆ. ರೋಗಿಗಳು ಅಸ್ಪತ್ರೆಯಲ್ಲಿರುತ್ತಾರೆ. ಮಕ್ಕಳು ಶಾಲಾ-ಕಾಲೇಜು ಹಾಗೂ ಅಂಗನವಾಡಿಗಳಲ್ಲಿ ಇರುವುದರಿಂದ ಇಲ್ಲಿಯೆ ಡೆಂಗ್ಯೂ ಹರಡುವ ಸಾಧ್ಯತೆ ಹೆಚ್ಚಿದ್ದು, ಹೀಗಾಗಿ ಇಲ್ಲಿ ಸ್ವಚ್ಚತೆ ಕಾಪಾಡುವುದರ ಮೂಲಕ ಸೊಳ್ಳೆಗಳ ತಾಣ ನಿರ್ಮೂಲನೆ ಮಾಡುವುದು ಸ್ವಚ್ಚತಾ ಅಭಿಯಾನದ ಉದ್ದೇಶವಾಗಿದೆ ಎಂದರು.
ನೀರಿನ ಟ್ಯಾಂಕ್ ಗೆ ಗಪ್ಪೆ ಮೀನು: ಜಿಲ್ಲಾ ಪಂಚಾಯತ್ ಸಿ.ಇ.ಓ ಅವರ ಕರೆ ಹಿನ್ನೆಲೆಯಲ್ಲಿ ಇಲ್ಲಿನ ಡಿ.ಎಚ್.ಓ ಕಚೇರಿ ಅವರಣದಲ್ಲಿಯೂ ಸ್ವಚ್ಚತಾ ಅಭಿಯಾನದಲ್ಲಿ ವೈದ್ಯರು, ಅಧಿಕಾರಿ ಸಿಬ್ಬಂದಿಗಳು ಭಾಗವಹಿಸಿದ್ದರು. ಆವರಣದಲ್ಲಿನ ನೀರಿನ ಟ್ಯಾಂಕಿಗೆ ಡಿ.ಎಚ್.ಓ ಡಾ.ರವಿಕಾಂತ ಸ್ವಾಮಿ ಅವರು ಈಡೀಸ್ ಸೊಳ್ಳೆ ತಿನ್ನುವ ಗಪ್ಪೆ ಮೀನು ಬಿಟ್ಟರು. ಇವರಿಗೆ ಸಹೋದ್ಯೋಗಿ ವಿವಿಧ ಆರೋಗ್ಯ ಕಾರ್ಯಕ್ರಮ ಅಧಿಕಾರಿ- ಸಿಬ್ಬಂದಿ ವರ್ಗ ಸಾತ್ ನೀಡಿತು.ಇದೇ ಸಂದರ್ಭದಲ್ಲಿ ಡೆಂಗ್ಯೂ ವಿರೋಧಿ ಮಾಸಾಚರಣೆಯ ಜಾಗೃತಿ ಪೋಸ್ಟರ್ ಸಹ ಬಿಡುಗಡೆಗೊಳಿಸಲಾಯಿತು.