ಕಲಬುರಗಿ: ಉಳ್ಳವರು ಸಹ ಸರ್ಕಾರಿ ಸೌಲಭ್ಯ ಪಡೆಯಲು ಬಿ.ಪಿ.ಎಲ್ ಪಡಿತರ ಚೀಟಿ ಪಡೆದಿರುವ ಸಾಧ್ಯತೆ ಇದ್ದು, ಕೂಡಲೆ ಇಂತಹ ಅನರ್ಹ ಬಿ.ಪಿ.ಎಲ್ ಪಡಿತರ ಚೀಟಿ ಪತ್ತೆ ಹಚ್ಚಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅಹಾರ ಇಲಾಖೆ ಅಧಿಕಾರಿಗಳಿಗೆ ಡಿ.ಸಿ. ಬಿ.ಫೌಜಿಯಾ ತರನ್ನುಮ್ ಸೂಚನೆ ನೀಡಿದರು.
ಸೋಮವಾರ ತಮ್ಮ ಕಚೇರಿಯಲ್ಲಿ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಹಾಗೂ ಅಬಕಾರಿ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಹೊಸ ಪಡಿತರ ಚೀಟಿ ಕೋರಿ ಸಲ್ಲಿಕೆಯಾದ ಅರ್ಜಿದಾರರ ಮನೆಗಳಿಗೆ ಭೇಟಿ ನೀಡಿ ಕ್ಷೇತ್ರ ತಪಾಸಣೆ ಕಾರ್ಯ ಪೂರ್ಣಗೊಳಿಸಬೇಕು. ಸರ್ಕಾರದ ಆದೇಶ ಬಂದ ಕೂಡಲೆ ಪಡಿತರ ಚೀಟಿ ವಿತರಣೆಗೆ ಕ್ರಮ ವಹಿಸಬೇಕೆಂದರು.
ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಪಡಿತರ ಚೀಟಿದಾರರಿಗೆ 5 ಕೆ.ಜಿ. ಅಕ್ಕಿ ಬದಲಾಗಿ ಹಣವನ್ನು ಡಿ.ಬಿ.ಟಿ. ಮೂಲಕ ಹಾಕಲಾಗುತ್ತಿದ್ದು, ಎನ್.ಪಿ.ಸಿ.ಐ. ಸಮಸ್ಯೆ ಕಾರಣ ಜಿಲ್ಲೆಯಲ್ಲಿ 24 ಸಾವಿರಕ್ಕೂ ಹೆಚ್ಚು ಪಡಿತರ ಚೀಟಿದಾರ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಹಣ ಹೋಗುತ್ತಿಲ್ಲ. ಕೂಡಲೆ ಪಡಿತರದಾರರಿಗೆ ಬ್ಯಾಂಕುಗಳಿಗೆ ಹೋಗಿ ಎನ್.ಪಿ.ಸಿ.ಐ ಅಪಡೇಟ್ ಮಾಡಿಕೊಳ್ಳುವಂತೆ ತಿಳಿಹೇಳಬೇಕು ಎಂದರು.
ಸಭೆಯಲ್ಲಿ ಭಾಗವಹಿಸಿದ ಆಹಾರ ಇಲಾಖೆ ಪ್ರಭಾರಿ ಉಪನಿರ್ದೇಶಕ ಡಿ.ಬಿ.ಪಾಟೀಲ ಮಾತನಾಡಿ, ಕಾರ್ಮಿಕ ಇಲಾಖೆಯಿಂದ ಇ-ಶ್ರಮ ಕಾರ್ಡ್ ಪಡೆದವರಿಗೆ ಬಿ.ಪಿ.ಎಲ್ ಪಡಿತರ ಚೀಟಿ ನೀಡಬೇಕೆಂದು ಇತ್ತೀಚೆಗೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದು, ಅದರಂತೆ ಈಗಾಗಲೆ 4 ಸಾವಿರ ಜನರಿಗೆ ಬಿ.ಪಿ.ಎಲ್. ಕಾರ್ಡ್ ನೀಡಿದ್ದು, 16 ಸಾವಿರ ಜನರಿಗೆ ನೀಡಬೇಕಿದೆ ಎಂದರು. ಡಿ.ಸಿ. ಬಿ.ಫೌಜಿಯಾ ತರನ್ನುಮ್ ಮಾತನಾಡಿ ಉಳಿದ 16 ಸಾವಿರ ಕಾರ್ಮಿಕರಿಗೆ 15 ದಿನದಲ್ಲಿ ಕಾರ್ಡ್ ನೀಡಲು ಕ್ರಮ ವಹಿಸಬೇಕು ಎಂದರು.
ಜಿಲ್ಲೆಯಲ್ಲಿ ಒಟ್ಟು ಪಡಿತರ ಚೀಟಿ ಪೈಕಿ ಶೇ.27ರಷ್ಟು ಎಸ್.ಸಿ-ಎಸ್.ಟಿ. ಸಮುದಾಯದ ಪಡಿತರದಾರರಿದ್ದು, ಇವರಲ್ಲಿ 21 ಸಾವಿರ ಕಾರ್ಡ್ ದಾರರು ತಮ್ಮ ಜಾತಿ ಪ್ರಮಾಣ ಪತ್ರವನ್ನು ಪಡಿತರ ಚೀಟಿಯೊಂದಿಗೆ ಮ್ಯಾಪಿಂಗ್ ಮಾಡಿಕೊಂಡಿದ್ದು, ಬಾಕಿ 6 ಸಾವಿರ ಕಾರ್ಡ್ ಕೂಡಲೆ ಮ್ಯಾಪಿಂಗ್ ಮಾಡಿಸಬೇಕೆಂದು ಆಹಾರ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ ಡಿ.ಸಿ. ಅವರು, ಅಗತ್ಯ ವಸ್ತುಗಳ ಕಾಯ್ದೆಯಡಿ ಅಕ್ರಮ ಅಕ್ಕಿ ಸಾಗಾಟ ಪ್ರಕರಣದಲ್ಲಿ ಎಫ್.ಐ.ಆರ್ ದಾಖಲಿಸಬೇಕು. ನಿರಂತರ ದಾಳಿ ಮಾಡಿ ಇದಕ್ಕೆ ಕಡಿವಾಣ ಹಾಕಬೇಕೆಂದರು.
ಹಳ್ಳಿಯಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಬ್ರೆಕ್ ಹಾಕಿ: ಅಬಕಾರಿ ಇಲಾಖೆ ಪ್ರಗತಿ ಪರಿಶೀಲನೆ ವೇಳೆ ಮಾತನಾಡಿದ ಡಿ.ಸಿ. ಬಿ.ಫೌಜಿಯಾ ತರನ್ನುಮ್, ಹಳ್ಳಿಯಲ್ಲಿ ಶಾಲೆ, ದೇವಸ್ಥಾನ, ಕಿರಾಣಾ ಅಂಗಡಿಯಲ್ಲಿ ಅಕ್ರಮ ಮದ್ಯ ಮಾರಾಟವಾಗುತ್ತಿವೆ. ಇಲಾಖೆ ಇದಕ್ಕೆಲ್ಲ ಕಡಿವಾಣ ಹಾಕಬೇಕು. ತಪಾಸಣೆ ತೀವ್ರಗೊಳಿಸಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಅಬಕಾರಿ ಉಪ ಆಯುಕ್ತೆ ಸೈಯದ್ ಅಜ್ಮತ್ ಅಫ್ರೀನ್ ಸೇರಿದಂತೆ ಆಹಾರ ಮತ್ತು ಅಬಕಾರಿ ಇಲಾಖೆಯ ಅಧಿಕಾರಿಗಳಿದ್ದರು.