ಸಾಧಿಸುವ ಛಲ, ಕಾಯಕ ನಿಷ್ಠೆ, ಬದುಕಿನ ಸರಳತೆ ಇವು ಹಳಕಟ್ಟಿ ಜೀವನದಿಂದ ಕಲಿಯಬೇಕಾದ ಪಾಠ

0
233

ಕಲಬುರಗಿ: ಫಕೀರಪ್ಪ ಗುರುಬಸಪ್ಪ ಹಳಕಟ್ಟಿ ವಚನ ಪಿತಾಮಹರು, ಅವರು ಕಡುಬಡವರಾಗಿದ್ದರೂ ಸಹ ಶರಣರ ವಚನಗಳ ಶೋಧನೆಯಲ್ಲಿ ಸಿರಿವಂತರಾಗಿದ್ದರು, ಅದಕ್ಕೇ ಅವರ ಶೋಧನೆ, ಸಂಪಾದನೆಯಲ್ಲಿ ಶರಣರು ಕಟ್ಟಿಕೊಟ್ಟ ಬದುಕಿನ ಸಾರವಾಗಿರುವ ವಚನಗಳು ಇಂದು ನಮ್ಮ ಕೈ ಸೇರಿವೆ, ಇಲ್ಲದೆ ಹೋದರೆ ವಚನಗಳ ಬಗ್ಗೆ ಗೊತ್ತೇ ಆಗುತ್ತಿರಲಿಲ್ಲ ಎಂದು ಶರಣ ಚಿಂತಕಿ ಜಯಶ್ರೀ ಚಟ್ನಳ್ಳಿ ಹೇಳಿದರು.

ಕಸಾಪ ಕಲಬುರಗಿ ತಾಲೂಕ ಘಟಕದ ಬೆಳಕು ಸಪ್ತಾಹಾದ ಚಿಂತನೆಯ ಸರಣಿಯಲ್ಲಿ ವಚನ ಪಿತಾಮಹ ಹಳಕಟ್ಟಿವರ ಕುರಿತಾಗಿ ಇಲ್ಲಿನ ರಿಂಗ್‌ ರಸ್ತೆಯ ಜಾಗೃತಿ ಕಾಲೋನಿಯಲ್ಲಿರುವ ಚನ್ನಬಸವೇಶ್ವರ ಪ್ರೌಢಾಲೆಯಲ್ಲಿ ನಡೆದ ಸಮಾರಂಭದಲ್ಲಿ ಉಪನ್ಯಾಸ ನೀಡಿದರು.

Contact Your\'s Advertisement; 9902492681

ತಮ್ಮ 1 ಗಂಟೆಯ ಉಪನ್ಯಾಸದಲ್ಲಿ ಜಜಯಶ್ರೀಯವರು ಸೇರಿದ್ದ ಮಕ್ಳ ಮನಕ್ಕೆ ತಟ್ಟುವಂತೆ ಹಳಕಟ್ಟಿಯ ವಚನಗಳ ಸಂಶೋಧನೆ, ಪರಿಷ್ಕರಣೆ, ಮುದ್ರಣದ ಹಂತಗಳಲ್ಲಿ ವಿವರಿಸುತ್ತ ಅವರ ಬಡತನ, ಕಷ್ಟ ಸಂಕಷ್ಟಗಳನ್ನೆಲ್ಲ ಎದುರಿಸಿದ ಪರಿಯನ್ನು ವಿವರಿಸುತ್ತ ಗಮನ ಸೆಳೆದರು.

ಹಳಕಟ್ಟಿಯವರು ವಚನಗಳ ಮುದ್ರಣಕ್ಕೆ ಮನೆಯನ್ನೇ ಮಾರಿ ಹಿತಚಿಂತಕ ಮುದ್ರಣಾಲಯ ಶುರು ಮಾಡಿದ್ದ ಪ್ರಸಂಗ, ಹಳಕಟ್ಟಿವರ ವಿದೇಶದಲ್ಲಿದ್ದ ಪುತ್ರನ ಅಕಾಲಿಕ ನಿಧನ ವಾರ್ತೆ, ಅದರಿಂದ ನೊಂದರೂ ವಚನ ಸಂಗ್ರಹ, ಸಂಶೋಧನೆಯ ಕಾಯಕ ಬಿಡದ ಹಳಕಟ್ಟಿಯವರ ಛಲವನ್ನು ವಿವರಿಸುತ್ತ ಇಂದಿನ ಮಕ್ಕಳು ಕಾಯಕ ಜೀವನ, ಹೊಸತನ್ನು ಹುಡುಕುವ ಜಾಣತನ, ಸಮಾಜಕ್ಕೆ ಉತ್ತಮವಾದುದನ್ನು ಕೊಡುವ ತವಕಗಳನ್ನು ಹಳಕಟ್ಟಿಯವರ ಬದುಕಿನಿಂದ ಕಲಿಯಬೇಕು ಎಂದರು.

12 ನೇ ಶತಮಾನದ ಶರಣರ ವಚನ ಚಳುವಳಿ ಮುಂದಿನ 300 ವರ್ಷ ಮೌನವಗಿತ್ತು. ವಚನಗಳು ಎಲ್ಲೆಂದು ಯಾರಿಗೂ ಗೊತ್ತಿರಲಿಲ್ಲ. ಹಳಕಟ್ಟಿಯವರು ವಿಜಯಪುರ ಭಾಗದಲ್ಲಿ ಗೋಡೆ, ಮಾಡುಗಳಿಗೆ ಪೂಜಿಸುವ ಸಂಪ್ರದಾಯದ ಬೆನ್ನತ್ತಿ ಅಲ್ಲೇನಿದೆ ಪೂಜಿಸಲು ಎಂದು ಶೋಧಿಸಿದ್ದರ ಫಲವೇ ಇಂದು ವಚನ ಭಂಡಾರ ನಮಗೆಲ್ಲರಿಗೂ ದೊರಕಿತು ಎಂದು ಹೇಳುತ್ತ ಹಳಕಟ್ಟಿಯವರನ್ನು ಕರುನಾಡಿನ ಮ್ಯಾಕ್ಸಮುಲ್ಲರ್‌ ಎಂದು ಕೆದಿದ್ದಾರೆ. ಅವರ ಈ ಕೆಲಸಕ್ಕೆ ನಾವು ಸದಾ ರುಣಿಯಾಗಿರಬೇಕು. ವಚನಗಳನ್ನು ಕಂಠಪಾಠ ಮಾಡುವ ಮೂಲಕ ಅಲ್ಲಿನ ಸಾರ ಅರಿತು ಬದುಕು ಕಟ್ಟಬೇಕು ಎಂದರು.

ಸಿಸಿಗೆ ನೀರು ಹಾಕುವ ಮೂಲಕ ಸಮಾರಂಭವನ್ನು ಉದ್ಘಾಟಿಸಿದ ಪತ್ರಕರ್ತ ಶೇಷಮೂರ್ತಿ ಅವಧಾನಿ ದಶದಿಕ್ಕುಗಳಿಂದ ಬುರವ ಸದ್ವಿಚಾರಗಳಿಗೆ ಸದಾ ಮಿಡಿಯಿರಿ ಎಂದು ಸೇರಿದ್ದ ಮಕ್ಕಳಿಗೆ ಕಿವಿಮಾತು ಹೇಳಿದರು.

ಮೋಬೈಲ್‌ನಿಂದಾಗಿ ಒಳ್ಳೆಯ, ಕೆಟ್ಟ ಸಂಗತಿಗಳು ಕ್ಷಣಾರ್ಧದಲ್ಲಿ ಅಂಗೇಯಲ್ಲಿ ಸೇರುತ್ತಿವೆ.ಹೀಗಾಗಿ ಮೋಬೈಲ್‌ನ ವಿಷಯಗಳಲ್ಲಿ ಒಳ್ಳೆಯದ್ದು, ಕೆಟಟ್ಟದ್ದು ಹೆಕ್ಕಿ ತೆಗೆದು ಬದುಕು ಕಟ್ಟಿರಿ. ಪುಸ್ತಕಗಳು, ದಿನ ಪತ್ರಿಕೆಗಳನ್ನು ಓದುವ ಅಭ್ಯಾಸ ರೂಢಿಸಿಕೊಳ್ಳಿರಿ. ಅದರಿಂದ ಹೊರಜಗತ್ತಿನ ಅನೇ ಬೆಳವಣಿಗೆಗಳು ನಿಖರವಾಗಿ ಅರಿಯಲು ಸಾಧ್ಯವೆಂದರು.

ವಿಜಯಪುರಕ್ಕೆ ಬಂದ ಕನ್ನಡದ ಕಣ್ವ ಬಿಎಂ ಶ್ರೀಕಂಠಟ್ಟನವರು ಗೋಳಗುಮ್ಮಟ ನೋಡೋದಕ್ಕಿಂತ ತಾವು ವಚನ ಗುಮ್ಮಟವಾಗಿರುವ ಫಗು ಹಳಕಟ್ಟಿಯವರನ್ನು ಕಾಣುವ ಹಂಬಲ ವ್ಯಕ್ತಪಡಿಸಿದ್ದರ ಹಿಂದೆ ಹಳಕಟ್ಟಿಯವರ ಮಹತ್ವ ಅಡಗಿದೆ ಎಂದು ಹೇಳುತ್ತ ವಚನಗಳು ಬದುಕಿನ ಸಾರ, ವಚನಗಳನ್ನು ಅರಿತು ಉಜ್ವಲ ಭವಿಷ್ಯ ನಿಮ್ಮದಾಗಿಸಿಕೊಳ್ಳಿರೆಂದು ಅವಧಾನಿ ಕರೆ ನೀಡಿದರು.

ಸಾಧಕರು ನಮ್ಮ ಸುತ್ತಲೇ ಇದ್ದರೂ ಅವರನ್ನು ಗುರಿಸೋದಿಲ್ಲ. ಅವರಿದ್ದಾಗಲೇ ಅವರ ಸದುಪಯೋಗಕ್ಕೂ ಸಮಾಜ ಮುಂದಾಗೋದಿಲ್ಲ, ಅವದು ಮರೆಯಾದ ಮೇಲೆ ಹಳಹಳಿಸುತ್ತ ಸ್ಮರಣೆ ಮಾಡಲು ಮುಂದಾದರೆ ಪ್ರಯೋಜನವಿಲ್ಲ ಎಂದ ಅವಧಾನಿ, ಹಿತ್ತಲ ಗಿಡ ಸದಾಕಾಲ ಮದ್ದಾಗಲಿ, ಸಾಧಕರು ಉಪೆಕ್ಷೆಗೊಳಪಡದೆ ಸದಾಕಾಲ ಎಲ್ಲರ ಮನ್ನಣೆಗೆ ಪಾತ್ರರಾಗಲಿ ಎಂದರು.

ಮೋಬೈಲ್‌ನಲ್ಲೇ ಕಾಲ ಕಳೆಯೋದಕ್ಕಿಂತ ಸಮಾಜಕಟ್ಟಿದ ಮಹನೀಯರ ಬಗ್ಗೆ ಅರಿಯಿರಿ, ಅಂತಹವರ ಪುಸ್ತಕಗಳನ್ನು ಕೊಂಡು ಓದಿರಿ ಎಂದು ಕರೆ ನೀಡಿದ ಅವಧಾನಿ, ಪುಸ್ತಕ ನಿಮ್ಮ ಮಸ್ತಕ ಬೆಳಗುತ್ತದೆ. ಓದುವ ಹವ್ಯಾಸ್ಯ ಕೊನೆಯುಸಿರು ಇರೋವರೆಗೂ ಇಟ್ಟುಕೊಳ್ಳಿರೆಂದರು.

ಕಲಬುರಗಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಗುರುಬಸಪ್ಪ ಎಸ್ ಸಜ್ಜನಶೆಟ್ಟಿ ಪ್ರಾಸ್ತಾವಿಕ ಮಾತನ್ನಾಡುತ್ತ ನಮ್ಮ ಬದುಕಿಗೆ ಬೆಳಕಾದವರನ್ನು ಗುರುತಿಸಿ ಅವರ ಬಗ್ಗೆ ಮಕ್ಕಳಿಗೆ ಹೇಳುವುದೇ ಬೆಳಕು ಸರಣಿಯ ಉದ್ದೇಶವೆಂದರಲ್ಲದೆ ವಚನಗಳ ಪಿತಾಮಹ ಫಗು ಹಳಕಟ್ಟಿ ಬಗ್ಗೆ ಎಲ್ಲರು ಅರಿಯುವಂತೆ ಕರೆ ನೀಡಿದರು.

ಕಸಾಪ ಉತ್ತರ ವಲಯದ ಅಧ್ಯಕ್ಷ ಪ್ರಭುಲಿಂಗ ಮೂಲಗೆ ಮಾತನಾಡುತ್ತ ಮಕ್ಕಳಿಗೆ ಬದುಕಲ್ಲಿ ಉತ್ತಮವಾದುದ್ದನ್ನು ಕಲಿತು ಚೆಂದದ ಬದುಕು ಕಟ್ಟುವಂತೆ ಸಲಹೆ ನೀಡಿದರೆ, ಶಾಲೆಯ ಮುಖ್ಯಗುರು ಮಾತಾಜಿ ನಾಗೂರ ಮಾತನಾಡುತ್ತ ಕಸಾಪ ಸಮಾರಂಭವನ್ನು ಮೆಚ್ಚಿಕೊಂಡರಲ್ಲದೆ ತಮ್ಮ ಶಾಲೆಯಲ್ಲಿ ಕನ್ನಡ, ವಿಜ್ಞಾನದ ಚಿಂತನೆಯ ಸಮಾರಂಭಗಳಿಗೆ ಮುಕ್ತ ಸ್ವಾಗತವಿದೆ ಎಂದರು.

ಕನ್ನಡ ವಿಷಯದಲ್ಲಿ 125 ಅಂಕ ಪಡೆದ ಚೆನ್ನಬಸವೇಶ್ವರ ಶಾಲೆಯ ಪ್ರತಿಭಾವಂತ ಮಕ್ಕಳನ್ನು ಸಮಾರಂಭದಲ್ಲಿ ಪ್ರಶಂಸನಾ ಪತ್ರ, ಕನ್ನಡ ಧ್ವಜ ಕೊಟ್ಟು ಸನ್ಮಾನಿಸಲಾಯ್ತು. ಹಿರಿಯರಾದ ಚೆನ್ನವೀರಪ್ಪ ಗುಡ್ಡಾ ಉಪಸ್ಥಿತರಿದ್ದರು.

ಕಸಾಪ ಗೌರವ ಕಾರ್ಯದರ್ಶಿಗಳಾದ ವಿಶಾಲಾಕ್ಷೀ ಮಾಯಣ್ಣವರ, ವಿಶ್ವನಾಥ ಯನಗುಂಟಿ, ಕುಪೇಂದ್ರ ಬರಗಾಲಿ, ತಾಲೂಕ ಸಹ ಕಾರ್ಯದರ್ಶಿಯಾದ ಪ್ರಭವ ಪಟ್ಟಣಕರ ಮಹಿಳಾ ಪ್ರತಿನಿಧಿ ಭಾಗ್ಯಶ್ರೀ ಮರಗೋಳ. ಸಾಹಿತ್ಯ ಪ್ರೇಮಿ ಶಿವಾನಂದ್ ಮಠಪತಿ. ಇತರರು ಇದ್ದರು.

ಶಿಕ್ಷಕಿ ಕವಿತಾ ವಿ ಪಾಟೀಲ ನಿರೂಪಿಸಿದರು. ನಾಗರತ್ನ ಎಸ್ ಪಾಟೀಲ ಸ್ವಾಗತಿಸಿದರು. ಸೂರ್ಯಕಾಂತ ಗಾರಂಪಳ್ಳಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here