ಕಲಬುರಗಿ: ನಮ್ಮ ಹೆಣ್ಣು ಮಕ್ಕಳ ಕೈಯಲ್ಲಿ ಮೊಬೈಲ್ ಕೊಡದೆ ಪುಸ್ತಕ ಕೊಟ್ಟು ಓದುವ ಸಂಸ್ಕೃತಿ ಬೆಳೆಸಬೇಕು ಎಂದು ಕರ್ನಾಟಕ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಭಾನುವಾರ ಏರ್ಪಡಿಸಿದ ಸಮಾರಂಭದಲ್ಲಿ ಆದರ್ಶ ಶಿಕ್ಷಕರೂ ಆದ ಜಿಲ್ಲಾ ಕಸಾಪ ದ ಸಂಘಟನಾ ಕಾರ್ಯದರ್ಶಿ ಸಿದ್ಧಲಿಂಗ ಜಿ ಬಾಳಿ ಅವರು ರಚಿಸಿರುವ ರಾವೂರ ಮಲ್ಲಕಂಬ ( ಗ್ರಾಮೀಣ ಕಸರತ್ತಿನ ಕ್ರೀಡೆ ) ಚೊಚ್ಚಲ ಕೃತಿಯ ಜನಾರ್ಪಣೆ ಮಾಡಿ ಅವರು ಮಾತನಾಡಿದ ಅವರು, ಇಂದಿನ ಮೊಬೈಲ್ ಬಳಕೆಯ ಕೈಗಳು ನಮ್ಮದಾಗಿವೆ. ಈ ದಿಸೆಯಲ್ಲಿ ಪ್ರಾಥಮಿಕ ಹಂತದಲ್ಲಿ ಮಹಿಳೆಯರಿಗೆ ಪುಸ್ತಕ ಕೊಟ್ಟಾಗ ಪರಿವರ್ತನೆಯ ಸಮಾಜ ಕಾಣಬಹುದು. ಹಾಗೂ ಪೋಷಕರು ಕೂಡ ಪೂರಕ ಕಾಳಜಿವಹಿಸಿ ಶಿಕ್ಷಣ ಕೊಡಬೇಕಾಗಿದೆ. ಆಗ ಮಾತ್ರ ಮಹಿಳಾ ಸಬಲೀಕರಣ ಹೊಂದಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.
ಮುಂದುವರೆದು ಮಾತನಾಡಿದ ಅವರು, ಹೆಣ್ಣು ಮಕ್ಕಳಿಗೆ ಕೇವಲ ಅಡುಗೆ ಮನೆಗೆ ಮಾತ್ರ ಸೀಮಿತಗೊಳಿಸಬಾರದು. ಅವಳು ಶಿಕ್ಷಣ ಹಾಲು ಕುಡಿದರೆ, ಹುಲಿಯಂತೆ ಘರ್ಜಿಸಬಹುದು. ಎಷ್ಟೇ ಕಷ್ಟಗಳು ಎದುರಾದರೂ ಸ್ವಂತ ಬಲದ ಮೇಲೆ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುತ್ತಾಳೆ. ಅಂಥ ಶಕ್ತಿ ಸಾಮರ್ಥ್ಯ ಬೆಳೆಯಬೇಕಾದರೆ ಶಿಕ್ಷಣ ಮುಖ್ಯ ಎಂದು ಅವರು ಪ್ರತಿಪಾದಿಸಿದರು.
ಕೃತಿ ಪರಿಚಯ ಮಾಡಿದ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ರಾಜಶೇಖರ ಗೋನಾಯಕ್, ಗ್ರಾಮೀಣ ಜನಪದ ಕಲೆ, ಸಂಸ್ಕೃತಿ ಉಳಿಸಿ ಬೆಳೆಸುತ್ತಿರುವ ಸಿದ್ಧಲಿಂಗ ಬಾಳಿ ಅವರ ಕಾರ್ಯ ಅಭಿನಂದನಾರ್ಹ. ಈ ಕಾರ್ಯಗಳಿಗೆ ಪ್ರೋತ್ಸಾಹ ನೀಡುತ್ತಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉತ್ತಮ ಕೆಲಸ ಮಾಡುತ್ತಿದೆ ಎಂದು ಶ್ಲಾಘಿಸಿದರು.
ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಕಲೆಗಳು ನಮ್ಮ ಬದುಕಿನ ಉಸಿರುಯ. ಅವು ಉಳಿದು ಬೆಳೆದಾಗ ಸಾಂಸ್ಕೃತಿಕ ಜೀವನ ಕಟ್ಟಬಹುದು. ಅಂತ ಕಲೆಗಳಲ್ಲಿ ಮಲ್ಲಕಂಬ ಎಂಬುದು ಸೂಕ್ಷö್ಮ ಪ್ರತಿಭೆ ಹೊಂದಿದ ಕಲೆಯಾಗಿದೆ. ಈ ಕಲೆ ಜೀವಂತಿಕೆಗೆ ಲೇಖಕ ಸಿದ್ಧಲಿಂಗ ಬಾಳಿ ಯವರು ನಾಡಿನಾದ್ಯಂತ ಪರಿಚಯವನ್ನು ಈ ಕೃತಿ ರಚಿಸುವ ಮೂಲಕ ದಾಖಲೀಕರಣಗೊಳಿಸಿದ್ದಾರೆ ಎಂದು ಹೇಳಿದರು.
ರಾವೂರಿನ ಶ್ರೀ ಸಿದ್ಧಲಿಂಗೇಶ್ವರ ಸಂಸ್ಥಾನ ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು. ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸೂರ್ಯಕಾಂತ ಮದಾನೆ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಹೇಶ ಹೂಗಾರ, ಶ್ರೀ ಸಿದ್ಧಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿ ಡಾ. ಗುಂಡಣ್ಣ ಬಾಳಿ, ಲೇಖಕ ಸಿದ್ಧಲಿಂಗ ಜಿ ಬಾಳಿ, ಜಿಲ್ಲಾ ಕಸಾಪ ದ ಗೌರವ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಧರ್ಮಣ್ಣ ಹೆಚ್. ಧನ್ನಿ, ರವೀಂದ್ರಕುಮಾರ ಭಂಟನಳ್ಳಿ, ರಾಜೇಂದ್ರ ಮಾಡಬೂಳ ವೇದಿಕೆ ಮೇಲಿದ್ದರು.
ಪ್ರಮುಖರಾ ಲಿಂಗಾರೆಡ್ಡಿ ಭಾಸರೆಡ್ಡಿ, ಚೆನ್ನಣ್ಣ ಬಾಳಿ, ಶಿವಲಿಂಗಪ್ಪ ವಾಡೇದ್, ಕಲ್ಯಾಣಕುಮಾರ ಶೀಲವಂತ, ಡಾ. ರೆಹಮಾನ್ ಪಟೇಲ್, ಶಕುಂತಲಾ ಪಾಟೀಲ, ಶಿಲ್ಪಾ ಜೋಶಿ, ಅನುಪಮಾ ಅಪಗೊಂಡ, ಸುರೇಶ ದೇಶಪಾಂಡೆ, ಎಸ್.ಕೆ. ಬಿರಾದಾರ, ಪ್ರಭುಲಿಂಗ ಮೂಲಗೆ, ಶಾಮಸುಂದರ ಕುಲಕರ್ಣಿ, ಸಂತೋಷ ಕುಡಳ್ಳಿ ವೀರೇಂದ್ರಕುಮಾರ ಕೊಲ್ಲೂರ, ಶರಣುಜ್ಯೋತಿ ರಾವೂರ, ಹಣಮಂತಪ್ರಭು, ಬಸಮ್ಮಾ ಸಜ್ಜನ, ಡಾ. ಜಗನ್ನಾಥ ಗಡ್ಡದ್, ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.
ನಾನು ಕಲಬುರಗಿಯ ಸೊಸೆಯಾಗಿದ್ದು, ಉನ್ನತ ಹುದ್ದೆಗೆ ತಲುಪಲು ಈ ನೆಲದ ಋಣ ಕಾರಣ. ಈ ಭಾಗ ಭೌತಿಕವಾಗಿ ಹಿಂದುಳಿದಿದ್ದರೂ ಸಾಂಸ್ಕೃತಿಕವಾಗಿ ಶ್ರೀಮಂತಿಕೆ ಹೊಂದಿದೆ. – ಡಾ. ನಾಗಲಕ್ಷ್ಮೀ ಚೌಧರಿ, ಅಧ್ಯಕ್ಷರು, ಮಹಿಳಾ ಆಯೋಗ, ಬೆಂಗಳೂರು.