ವಾಡಿ: ಪರಿಶಿಷ್ಟ ಜಾತಿ ಸಮುದಾಯಗಳ ಏಳಿಗೆಗಾಗಿ ಒಳ ಮೀಸಲಾತಿ ವರ್ಗೀಕರಣ ಕಲ್ಪಿಸುವ ಸದಾಶಿವ ಆಯೋಗ ವರದಿಯನ್ನು ಎತ್ತಿ ಹಿಡಿದಿರುವ ಸುಪ್ರಿಂ ಕೋರ್ಟ್‍ನ ಏಳು ಜನ ನ್ಯಾಯಾದೀಶರ ಪೀಠದ ತೀರ್ಪನ್ನು ವಾಡಿ ಮಾದಿಗ ಸಮಾಜದ ಅಧ್ಯಕ್ಷ, ಬಿಜೆಪಿ ಎಸ್‍ಸಿ ಮೋರ್ಚಾ ಚಿತ್ತಾಪುರ ತಾಲೂಕು ಅಧ್ಯಕ್ಷ ರಾಜು ಮುಕ್ಕಣ್ಣ ಸ್ವಾಗತಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಭಾರತದ ಸರ್ವೋಚ್ಛ ನ್ಯಾಯಾಲಯದ ಪೀಠಕ್ಕೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಅಸ್ಪøಶ್ಯರಲ್ಲಿ ಅಸ್ಪøಶ್ಯರಾಗಿ ಮೀಸಲಾತಿ ಸೌಲಭ್ಯಗಳಿಂದ ವಂಚಿತರಾಗಿದ್ದ ಕರ್ನಾಟಕ ರಾಜ್ಯದ ಮಾದಿಗ ಜನಾಂಗಕ್ಕೆ ಒಳ ಮೀಸಲಾತಿ ಸೌಲಭ್ಯ ಒದಗಿಸಬೇಕು ಎಂದು ನಡೆಸಿದ ಮೂವತ್ತು ವರ್ಷಗಳ ನಮ್ಮ ಹೋರಾಟಕ್ಕೆ ಇಂದು ಜಯ ಸಿಕ್ಕಂತಾಗಿದೆ.
ಪರಿಶಿಷ್ಟ ಜಾತಿ ಸಮುದಾಯಗಳಿಗೆ ಮೀಸಲಿರುವ ಜಾತಿ ಮೀಸಲಾತಿಯನ್ನು ಎಬಿಸಿಡಿ ವರ್ಗೀಕರಣ ಮಾಡಬೇಕು ಎಂಬುದು ಪ್ರಮುಖ ಬೇಡಿಕೆಯಾಗಿತ್ತು. ಇದಕ್ಕಾಗಿ ಮಾದಿಗ ಮೀಸಲಾತಿ ಹೋರಾಟ ಸಮಿತಿ ಹಾಗೂ ಮಾದಿಗ ದಂಡೋರಾ ಮೀಸಲಾತಿ ಹೋರಾಟ ಸಮಿತಿಗಳ ನೇತೃತ್ವದಲ್ಲಿ ನಾನು ಜಿಲ್ಲಾಧ್ಯಕ್ಷನಾಗಿ ಇಪ್ಪತ್ತು ವರ್ಷಗಳ ಕಾಲ ಹೋರಾಟ ನಡೆಸಿದ್ದೇನೆ. ಅಲ್ಲದೆ ಮಾದಿಗ ದಂಡೋರಾ ಮೀಸಲಾತಿ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಮಂದಾಕೃಷ್ಣ ಮಾದಿಗ ಅವರನ್ನು ಕಲಬುರಗಿಗೆ ಆಹ್ವಾನಿಸಿ ಬೃಹತ್ ಚಳುವಳಿಗಳನ್ನು ಸಂಘಟಿಸಿದ್ದಕ್ಕೆ ಇಂದು ನ್ಯಾಯ ರೂಪದಲ್ಲಿ ನೆಮ್ಮದಿ ಸಿಕ್ಕಿದೆ ಎಂದು ಪ್ರತಿಕ್ರೀಯಿಸಿದ್ದಾರೆ.
ನ್ಯಾ.ಸದಾಶಿವ ಆಯೋಗದ ವರದಿ ಕರ್ನಾಟಕದ ಮಾದಿಗ ಸಮುದಾಯಕ್ಕೆ ನ್ಯಾಯ ಒದಗಿಸಿಕೊಟ್ಟಿದೆ. ಪರಿಶಿಷ್ಟ ಜಾತಿ ಮೀಸಲಾತಿಯನ್ನು ಎಬಿಸಿಡಿ ವರ್ಗೀಕರಣ ಮಾಡುವುದರಿಂದ ಮಾದಿಗರೂ ಸಹ ಸರ್ಕಾರದ ಹಲವು ಸೌಲಭ್ಯಗಳನ್ನು ನಿರ್ಭಯವಾಗಿ ಯಾವೂದೇ ಪೈಪೋಟಿಗಳಿಲ್ಲದೆ ಪಡೆಯಬಹುದಾಗಿದೆ. ಒಳ ಮೀಸಲಾತಿ ಜಾರಿಗೊಳಿಸಲು ಸರ್ಕಾರಗಳು ಹಿಂದೇಟು ಹಾಕುತ್ತಲೇ ಬರುವ ಮೂಲಕ ಮಾದಿಗ ಸಮುದಾಯಕ್ಕೆ ಮೀಸಲಾತಿ ಅನ್ಯಾಯ ಮಾಡಿದ್ದವು.
ಇದೀಗ ದೇಶದ ಸರ್ವೋಚ್ಛ ನ್ಯಾಯಾಲವೇ ಒಳ ಮೀಸಲಾತಿ ವರದಿಯನ್ನು ಎತ್ತಿ ಹಿಡಿದಿರುವುದು ಅತ್ಯಂತ ಹರ್ಷದಾಯಕವಾಗಿದೆ. ರಾಜ್ಯ ಸರ್ಕಾರಗಳು ಮೀನಾಮೇಷ ಎಣಿಸದೆ ಸುಪ್ರಿಂ ಕೋರ್ಟ್ ಆದೇಶದಂತೆ ಒಳ ಮೀಸಲಾತಿ ಜಾರಿಗೆ ಮುಂದಾಗಬೇಕು ಎಂದು ರಾಜು ಮುಕ್ಕಣ್ಣ ಒತ್ತಾಯಿಸಿದ್ದಾರೆ.