ಕಲಬುರಗಿ: ಕೇಂದ್ರ ಸರಕಾರ ಮಂಡಿಸಿದ ಬಜೆಟ್ ನಲ್ಲಿ ಬಡವರಿಗಾಗಿ ಯಾವುದೇ ಹೊಸ ಯೋಜನೆಗಳು ಜಾರಿಗೆ ತಂದಿಲ್ಲ. ಬದಲಾಗಿ ಮನರೇಗಾ, ಬಿಸಿಯೂಟ, ಐಸಿಡಿಎಸ್ ಯೋಜನೆಗಳ ಅನುದಾನ ಕಡಿತ ಮಾಡಲಾಗಿದೆ.
ಇದರಿಂದ ಕೇಂದ್ರ ಸರಕಾರದ ಬಜೆಟ್ ಅದಾನಿ, ಅಂಬಾನಿ ಸೇರಿದಂತೆ ದೇಶದ ಬಂಡವಾಳಶಾಹಿ ಶ್ರೀಮಂತರ ಪರವಾಗಿದೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷದ(ಮಾಕ್ರ್ಸ್ ವಾದಿ) ರಾಜ್ಯ ಸಭಾ ಸದಸ್ಯರಾದ ಶಿವದಾಸನ್ ಕಳವಳ ವ್ಯಕ್ತಪಡಿಸಿದರು.
ನಗರದ ಭಾರತ ಕಮ್ಯುನಿಸ್ಟ್ ಪಕ್ಷದ(ಮಾಕ್ರ್ಸ್ ವಾದಿ) ಜಿಲ್ಲಾ ಸಮಿತಿ ಕಚೇರಿ ಮಹ್ಮದ ಹಸನ್ ಖಾನ್ ಭವನದಲ್ಲಿ ಪಕ್ಷದ ವತಿಯಿಂದ ಆಯೋಜಿಸಿದ 2024 ರ ಚುನಾವಣಾ ಫಲಿತಾಂಶ ಮತ್ತು ನಮ್ಮ ಮುಂದಿರುವ ಸವಾಲುಗಳು ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಆರ್.ಬಿ ಮೋರೆ ಮೊದಲ ದಲಿತ ಕಮ್ಯನಿಸ್ಟ್’ ಎಂಬ ಅವರ ಮಗ ಸತ್ಯೇಂದ್ರ ಮೋರೆ ಬರೆದ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಕೇಂದ್ರ ಸರಕಾರದ ಒಟ್ಟು ಜಿ.ಎಸ್.ಟಿ ಆದಾಯದಲ್ಲಿ ಶ್ರೀಮಂತರ ಪಾಲು ಕೇವಲ ಶೇ.3 ರಷ್ಟು ಮಾತ್ರ ಇದೆ. ಆದರೆ ಶೇ.64.3 ರಷ್ಟು ಸಂಪಾದನೆಯ ಭಾಗ ಬಡವರ ತೆರಿಗೆಯಿಂದ ಬರುತ್ತಿದೆ. ಆದರೂ ಬಡವರಿಗಾಗಿ ಯಾವುದೇ ಹೇಳಿಕೊಳ್ಳುವಂತಹ ಯೋಜನೆಗಳು ಮೋದಿ ಸರಕಾರದಿಂದ ನಿರೀಕ್ಷೆ ಮಾಡುವಂತಿಲ್ಲ. ಬದಲಾಗಿ ಅಮೆರಿಕದ ಡಾಲರ್ ಎದುರು ದೇಶದ ರೂಪಾಯಿ ಮೌಲ್ಯ ಶೇ.84 ಕ್ಕೆ ಕುಸಿದಿದೆ. ಪರಿಣಾಮ ಬಡವರ ದಿನಬಳಕೆಯ ವಸ್ತುಗಳ ಬೆಲೆ ಏರಿಕೆಯಾಗುತ್ತಿವೆ ಎಂದು ಕೇಂದ್ರ ಸರಕಾರದ ವಿರುದ್ಧ ಕಿಡಿಕಾರಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಐಸಿಡಿಎಸ್ ಯೋಜನೆಯಡಿ ನಡೆಸುತ್ತಿರುವ ಅಂಗನವಾಡಿ ಕೇಂದ್ರಗಳಲ್ಲಿ ಬಡಮಕ್ಕಳು ಪೂರಕ ಪೌಷ್ಟಿಕ ಆಹಾರ ಮತ್ತು ಶಿಕ್ಷಣ ಪಡೆಯುತ್ತಿದ್ದಾರೆ. ಆದರೆ ಕೇಂದ್ರ ಸರಕಾರ ಐಸಿಡಿಎಸ್ ಗೆ ನೀಡುತ್ತಿರುವ ಅನುದಾನದಲ್ಲಿ ಶೇ.300 ಕೋಟಿ ರೂಪಾಯಿ ಕಡಿತ ಮಾಡಲಾಗಿದೆ. ಇದರಿಂದ ಅಂಗನವಾಡಿ ಕೇಂದ್ರಗಳು ಚೇತರಿಕೆ ಕಾಣದೇ ಮತ್ತಷ್ಟು ದುರ್ಬಲಗೊಳಿಸಲಾಗುತ್ತಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಮನರೇಗಾ ಯೋಜನೆಯಡಿ ಲಕ್ಷಾಂತರ ಕೃಷಿ ಕೂಲಿ ಕಾರ್ಮಿಕರು ದುಡಿಯುತ್ತಿದ್ದಾರೆ. ಇದರಲ್ಲೇ ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತಿದ್ದಾರೆ. ಆದರೆ ಇಂತಹ ಯೋಜನೆ ಬಲಪಡಿಸುವ ಬದಲು ಕೇಂದ್ರ ಸರಕಾರ ಮನರೇಗಾ ಯೋಜನೆಗೆ ನೀಡುವ ಅನುದಾನದಲ್ಲಿ ಈ ಬಾರಿ 86 ಸಾವಿರ ಕೋಟಿ ರೂಪಾಯಿ ಅನುದಾನ ಕಡಿತ ಮಾಡಿದೆ. ಈ ಗ್ರಾಮೀಣ ಭಾಗದಲ್ಲಿ ಮತ್ತಷ್ಟು ಉದ್ಯೋಗ ಸಮಸ್ಯೆ ಗಂಭೀರ ಸ್ವರೂಪ ತಾಳಲಿದೆ ಎಂದು ಕೇಂದ್ರ ಸರಕಾರದ ಅವೈಜ್ಞಾನಿಕ ಬಜೆಟ್ ಮಂಡನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕೃಷಿಗೆ ಸಂಬಂಧಿಸಿದ ಯೋಜನೆಗಳಿಗೆ ನೀಡುವ ಅನುದಾನದಲ್ಲಿ ಸುಮಾರು 400 ಕೋಟಿ ರೂಪಾಯಿ ಅನುದಾನ ಕಡಿತ ಮಾಡಲಾಗಿದೆ. ಸುಧಾರಣೆ ಕಾಣಬೇಕಾದ ಕೃಷಿ ಕ್ಷೇತ್ರದಲ್ಲಿ ಬಿಕ್ಕಟ್ಟು ಸೃಷ್ಟಿಯಾಗಲಿದೆ. ಹೀಗೆ ಜನಸಾಮಾನ್ಯರ ಯೋಜನೆಗಳಿಗೆ ಕೇಂದ್ರ ಕತ್ತರಿಯಾಕುತ್ತಿದೆ. ಇದರಿಂದ ಇಂತಹ ಜನ ವಿರೋಧಿ ಸರಕಾರದ ವಿರುದ್ಧ ಜನಸಾಮಾನ್ಯರು ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ಕರೆ ನೀಡಿದರು.
ಪ್ರಾಸ್ತಾವಿಕವಾಗಿ ಜಿಲ್ಲಾ ಕಾರ್ಯದರ್ಶಿ ಕೆ ನೀಲಾ ಮಾತನಾಡುತ್ತ “2024 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ನಿರೀಕ್ಷಿತ ಸ್ಥಾನಗಳು ಬರಲಿಲ್ಲ. ಆದರೆ ಬಿಜೆಪಿಯು ಆರ್ ಎಸ್ ಎಸ್ ರಾಜಕೀಯ ವಿಭಾಗವಾಗಿರಯವುದರಿಂದ ಅದಕ್ಕೆ ಸ್ಥಾನಗಳ ಎಷ್ಟೇ ಬಂದರೂ ಆರ್ ಎಸ್ ಎಸ್ ತೀವ್ರವಾಗಿ ಜಾರಿಗೊಳಿಸುವುದೇ ಗುರಿಯಾಗಿರುತ್ತದೆ. ಆದ್ದರಿಂದ ಭಾರತದ ಶ್ರಮಿಕ ಜನತೆ ಅಪಾಯದಿಂದ ಪಾರಾಗಿಲ್ಲ. ಸಾಂಸ್ಕøತಿಕ ಧಾಳಿ, ರಾಜಕೀಯ ಧಾಳಿ ಮತ್ತು ಅಸರ್ಥಿಕ ಧಾಳಿ ಏಕಕಾಲದಲ್ಲಿ ಭಾರತವು ಎದುರಿಸುತ್ತಿದೆ. ಸಿಪಿಐಎಂ ಪಕ್ಷವು ಭಾರತದ ಬಹುತ್ವ ಪರಂಪರೆಯ ಉಳಿವಿಗಾಗಿ, ಶ್ರಮಿಕರ ಸಮತೆಯ ಘನತೆಯ ಬದುಕಿಗಾಗಿ ನಿರಂತರ ಸೈದ್ಧಾಂತಿಕ, ಆರ್ಥಿಕ ಸಂಘರ್ಷ ನಡೆಸುತ್ತಿದೆ ಎಂದು ಹೇಳಿದರು.
ಡಾ.ಅನಿಲಕುಮಾರ, ಸಿಪಿಐ(ಎಮ್) ಪಕ್ಷದ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಶರಣಬಸಪ್ಪ ಮಮಶೆಟ್ಟಿ, ಸುಧಾಮ ದನ್ನಿ, ಗೌರಮ್ಮ ಪಾಟೀಲ, ಶ್ರೀಮಂತ ಬಿರದಾರ್, ಅಖಿಲ ಭಾರತ ಜನಾವಾದಿ ಮಹಿಳಾ ಸಂಘಟನೆ ರಾಜ್ಯಾಧ್ಯಕ್ಷೆ ಮೀನಾಕ್ಷಿ ಬಾಳಿ ಇದ್ದರು.
ಸುಜಾತಾ ನಿರೂಪಿಸಿದರು. ಶ್ರೀಮಂತ ಬಿರದಾರ್ ಸ್ವಾಗತಿಸಿದರು. ಶರಣಬಸಪ್ಪ ಮಮಶೆಟ್ಟಿ ವಂದಿಸಿದರು.