ಅ. 8 ರಂದು ಖಜೂರಿಯಲ್ಲಿ ವೆಂಕಟೇಶ್ವರ ರಥೋತ್ಸವ

0
481

ಹಣಮಂತ ಶೇರಿ, ಖಜೂರಿ

ಆಳಂದ: ವೆಂಕಟೇಶ್ವರ ಎಂದ ತಕ್ಷಣ ನಮ್ಮ ನೆನಪಿನಾಳದಲ್ಲಿ ಹಾದು ಹೋಗುವ ಹೆಸರು ತಿರುಪತಿ. ಭಾರತೀಯ ಹಿಂದೂ ಧರ್ಮದ ಶ್ರೀಮಂತ ದೇವರುಗಳಲ್ಲಿ ತಿರುಪತಿಯ ವೆಂಕಟೇಶ್ವರನಿಗೆ ಅಗ್ರಪಟ್ಟ. ಭಕ್ತರ ಇಷ್ಟಾರ್ಥಗಳನ್ನು ಪೂರೈಸುವ ಕಾಮಧೇನು ಕಲ್ಪವೃಕ್ಷ. ದೇಶ ವಿದೇಶಗಳಲ್ಲೂ ಭಕ್ತರನ್ನು ಹೊಂದಿರುವ ಈ ದೇವರ ಮೂಲಸ್ಥಾನ ನಮ್ಮ ಪಕ್ಕದ ಆಂಧ್ರಪ್ರದೇಶದ ತಿರುಪತಿ.

ಹಬ್ಬ, ಜಾತ್ರೆ, ರಥೋತ್ಸವಗಳು ನಮ್ಮ ಭವ್ಯ ಭಾರತದ ಸಂಸ್ಕೃತಿಯ ಪ್ರತೀಕಗಳು. ಒಂದೊಂದು ಹಬ್ಬಕ್ಕೂ ಒಂದೊಂದು ಐತಿಹಾಸಿಕ ಹಿನ್ನಲೆ. ಹೀಗಾಗಿಯೆ ಭಾರತೀಯರು ಮನೆ ಮನಗಳಲ್ಲಿ ಹಬ್ಬಗಳನ್ನು ಇಂದಿಗೂ ಸಡಗರದಿಂದ ಆಚರಿಸಿಕೊಂಡು ಬರುತ್ತಿದ್ದಾರೆ. ಮೂವತ್ತಾರು ಕೋಟಿ ದೇವರುಗಳನ್ನು ಹೊಂದಿರುವ ಜಗತ್ತಿನ ಏಕೈಕ ರಾಷ್ಟ್ರ ಭಾರತ. ಸರ್ವಜನರ ಸಹಬಾಳ್ವೆಯ ತೋಟ ಭಾರತ. ಮಹಾರಾಷ್ಟ್ರದ ಗಡಿಗೆ ಅಂಟಿಕೊಂಡಿರುವ ಖಜೂರಿ ಗ್ರಾಮದ ಪುರಾತನ ವೆಂಕಟೇಶ್ವರ ದೇವಸ್ಥಾನ ಈ ಭಾಗದ ಭಕ್ತರ ಪಾಲಿನ ತಿರುಪತಿ. ಪ್ರತಿವರ್ಷ ಇಲ್ಲಿಗೆ ಸಾವಿರಾರು ಭಕ್ತರು ಬಂದು ದರ್ಶನ ಪಡೆದು ಪುನೀತರಾಗುತ್ತಾರೆ. ಎಲ್ಲ ಧರ್ಮ, ಜಾತಿ ಜನಾಂಗದ ಜನರು ಶೃದ್ಧೆ ಇಲ್ಲಿಯ ವೆಮಕಟೇಶ್ವರನನ್ನು ಭಕ್ತಿಯಿಂದ ನಡೆದುಕೊಳ್ಳುತ್ತಾರೆ. ತಿರುಪತಿಗೂ ಖಜೂರಿಗೂ ಎಲ್ಲಿಯ ಸಂಬಂಧ ಎಂದು ಹುಡಕಲು ಹೊರಟರೆ ಹಲವಾರು ಐತಿಹಾಸಿಕ ಸಂಗತಿಗಳು ಗೊತ್ತಾಗುತ್ತವೆ.

Contact Your\'s Advertisement; 9902492681

ರಥೋತ್ಸವದ ಸಂದರ್ಭದಲ್ಲಿ ಸರ್ವಧರ್ಮ ಸಮಭಾವವನ್ನು ಕಾಣಬಹುದು. ರಥೋತ್ಸವದ ಎದುರು ಇಸ್ಲಾಂ ಧರ್ಮದ ಪೀರಗಳು, ಹಿಂದೂ  ಧರ್ಮದ ನಂದಿಕೋಲಗಳನ್ನು ನೋಡಬಹುದು. ರಥೋತ್ಸವದ ದಿನ ಎಲ್ಲಾ ಭಕ್ತಾದಿಗಳಿಗೆ ಮಹಾಪ್ರಸಾದದ ವ್ಯವಸ್ಥೆ ಇರುತ್ತದೆ. ಕಲ್ಯಾಣೋತ್ಸವ ಮಾಡಿದವರಿಗೆ ವೆಂಕಟೇಶ್ವರ ಅವರ ಇಷ್ಟಾರ್ಥಗಳನ್ನು ಪೂರೈಸಿದ ಉದಾಹರಣೆಗಳು ಇವೆ.

ಖಜೂರಿಯ ರಾಜ ಮನೆತನದವರಾದ ದೇಶಮುಖ ಮನೆತನದವರು ತಿರುಪತಿಯ ವೆಂಕಟೇಶ್ವರನ ಆರಾಧ್ಯ ಭಕ್ತರು. ವಾಹನ ಸೌಕರ್ಯವಿಲ್ಲದ ಕಾಲದಲ್ಲಿ ಈ ಮನೆತನದ ರಘುನಾಥ ದೇಶಮುಖರು ಪ್ರತಿವರ್ಷ ಕಾಲ್ನಡಿಗೆ ಮೂಲಕ ನವರಾತ್ರಿಯಲ್ಲಿ ತಿರುಪತಿಗೆ ಹೋಗಿ ವೆಂಕಟೇಶ್ವರರ ದರ್ಶನ ಪಡೆದುಕೊಂಡು ಬರುತ್ತಿದ್ದರು. ಹೀಗೆ ಸುಮಾರು ಅರವತ್ತು ವರ್ಷಗಳ ಕಾಲ ಪ್ರತಿ ದಸರೆಯಲ್ಲಿ ತಿರುಪತಿಗೆ ಹೋಗಿ ಬರುತ್ತಿದ್ದರು. ತಮ್ಮ ಅರವತ್ತೋಂದನೆ ವಯಸ್ಸಿನಲ್ಲಿ ತಿರುಪತಿಯ ಕುಂಡದಲ್ಲಿ ಸ್ನಾನ ಮಾಡುತ್ತಿದ್ದಾಗ ರಘುನಾಥ ದೇಶಮುಖರಿಗೆ ವೆಂಕಟೇಶ್ವರ, ಪದ್ಮಾವತಿ, ಲಕ್ಷ್ಮೀಯ ಮೂರ್ತಿಗಳು ದೊರೆತವು. ಹೀಗೆ ದೊರೆತ ಮೂರ್ತಿಗಳನ್ನು ತಂದು ತಮ್ಮ ವಿಶಾಲವಾದ ಆರು ಎಕರೆಯ ಮನೆಯ ಆವರಣದಲ್ಲಿ ದೇವರುಗಳಿಗೆ ದೇವಸ್ಥಾನಗಳನ್ನು ನಿರ್ಮಿಸಿ ಪೂಜೆ ಮಾಡಲು ಆರಂಭಿಸಿದರು. ಮುಂದೆ ವಯಸ್ಸಾಗುತ್ತಾ ಬಂದ ಹಾಗೆ ಅವರು ತಿರುಪತಿಗೆ ಹೋಗುವುದನ್ನು ಬಿಟ್ಟು ಖಜೂರಿಯಲ್ಲಿಯೇ ದಸರಾ ಆಚರಿಸಲು ಪ್ರಾರಂಭಿಸಿದರು. ೮೦೦ ವರ್ಷಗಳ ಹಿಂದೆ ದೇಶಮುಖ ಮನೆತನದ ರಘುನಾಥರಾಯರು ಆರಂಭಿಸಿದ ನವರಾತ್ರಿ ಮಹೋತ್ಸವ ಇಂದಿಗೂ ನಡೆದುಕೊಂಡು ಬರುತ್ತಿದೆ.

ಸಧ್ಯ ೮೮೧ನೇ ದಸರಾ ಆರಂಭವಾಗಿದ್ದು. ತಿರುಪತಿಯ ವೈಭವದಂತೆ ಖಜೂರಿಯಲ್ಲಿ ವೆಂಕಟೇಶ್ವರನಿಗೆ ಪೂಜೆ ಪುನಸ್ಕಾರಗಳು ನಡೆದಿವೆ. ತಿರುಪತಿಯಲ್ಲಿ ಜರುಗುವ ಎಲ್ಲ ವೈಭವಗಳನ್ನು ಖಜೂರಿಯಲ್ಲಿ ನೋಡಿ ಕಣ್ತುಂಬಿಕೊಳ್ಳಬಹುದು. ಗ್ರಾಮದ ಮತ್ತು ಸುತ್ತಮುತ್ತಲಿನ ಭಕ್ತರು ದಿನನಿತ್ಯ ದರ್ಶನ ಪಡೆಯುತ್ತಿದ್ದಾರೆ. ಕಳೆದ ೮೦೦ ವರ್ಷಗಳಿಂದ ರಥೋತ್ಸವಕ್ಕಾಗಿ ವಿಶೇಷವಾಗಿ ರಥವನ್ನು ಸ್ಥಳೀಯ ಜನರಿಂದ ತಯಾರಿಸಲಾಗುತಿತ್ತು. ರಥದ ತಯಾರಿಕೆಗಾಗಿಯೇ ತಿಂಗಳುಗಟ್ಟಲೇ ಶ್ರಮ ಹಾಕಬೇಕಾಗಿತ್ತು. ಆದರೆ ಕಳೆದ ಎರಡು ವರ್ಷಗಳ ಹಿಂದೆ ಭಕ್ತರೇ ದೇಣಿಗೆ ನೀಡಿದ ಹಣದಿಂದ ಸುಮಾರು ೫೦ ಲಕ್ಷ ರೂ. ವೆಚ್ಚದಲ್ಲಿ ನೂತನ ರಥೋತ್ಸವ ನಿರ್ಮಿಸಲಾಗಿದೆ. ರಥೋತ್ಸವವು ಗ್ರಾಮದ ಪ್ರಮುಖ ರಾಜಬೀದಿಗಳಲ್ಲಿ ಸಾಗಿ ಆಂಜನೇಯನ ದರ್ಶನ ಪಡೆದು ಪುನ: ದೇವಸ್ಥಾನಕ್ಕೆ ಮರಳಿ ಸಾಗುತ್ತದೆ.

ಈಗಾಗಲೇ ಪದ್ದತಿಯಂತೆ ಧಾರ್ಮಿಕ ವಿಧಿಗಳು ನಡೆಯುತ್ತಿದ್ದು. ಪ್ರತಿದಿನ ಒಂದೊಂದು ರೀತಿಯ ವಾಹನದಲ್ಲಿ ಅಂದರೆ ಚಂದ್ರ, ಸೂರ್ಯ, ಕಲ್ಪವೃಕ್ಷ, ಗಜ, ಹಂಸ, ವಾಯು, ಮಯೂರ, ಸಿಂಹ ಮತ್ತು ಅಶ್ವ ವಾಹನಗಳಲ್ಲಿ ವೆಂಕಟೇಶ್ವರ ದೇವರ ದರ್ಶನ ನಡೆಯುತ್ತಿದೆ. ರಥೋತ್ಸವದ ದಿನ ರಥವನ್ನು ಅದ್ದೂರಿಯಾಗಿ ಸಿಂಗರಿಸಿ ಅ.೮ರಂದು ಮಂಗಳವಾರ ಮಧ್ಯಾಹ್ನ ೩  ಗಂಟೆಗೆ ವಿಜಯದಶಮಿಯಂದು  ರಥೋತ್ಸವ ನಡೆಸಲಾಗುತ್ತದೆ. ನಂತರ ಗೋಪಾಳ ಕಾಲಾ, ಕಲ್ಪವೃಕ್ಷವಾಹನ, ಕಲ್ಯಾಣ ಉತ್ಸವ, ಸರಸ್ವತಿ ವಿಸರ್ಜನ ಇತ್ಯಾದಿ ಕಾರ್ಯಕ್ರಮಗಳು ಜರುಗಲಿವೆ. ಅ. ೯ ರಂದು ನವರಾತ್ರಿ ಉತ್ಸವ ಮುಕ್ತಾಯವಾಗಲಿದೆ.

ಗ್ರಾಮದ ದೇಶಮುಖ ಮನೆತನದವರು ದಾನ, ಧರ್ಮಕ್ಕೆ ಹೆಸರುವಾಸಿಯಾಗಿದ್ದಾರೆ. ಮೊದಲು ಇವರ ಆಡಳಿತಕ್ಕೆ ಒಳಪಡುತ್ತಿದ್ದ ನಲವತ್ತು ಹಳ್ಳಿಗಳ ನೂರಾರು ದೇವಸ್ಥಾನಗಳಿಗೆ ಹೊಲಗಳನ್ನು ದಾನವಾಗಿ ನೀಡಿದ್ದಾರೆ. ಖಜೂರಿಯಲ್ಲಿರುವ ಕೋರಣ್ಣೇಶ್ವರ ದೇವಸ್ಥಾನ, ಸಿದ್ದೇಶ್ವರ ದೇವಸ್ಥಾನ, ಸುಕ್ಷೇತ್ರ ಬುರಾಣಪುರದಲ್ಲಿರುವ ಅನಂತಚೈತನ್ಯ ದೇವಸ್ಥಾನಗಳಿಗೆ ನೂರಾರು ಎಕರೆ ಭೂಮಿಯನ್ನು ನೀಡಿ ಮಠ, ಮಂದಿರಗಳ ಬೆಳವಣಿಗೆಗೆ ಕಾರಣವಾಗಿದ್ದಾರೆ. ಗ್ರಾಮದಲ್ಲಿನ ಸರ್ಕಾರಿ ಆಸ್ಪತ್ರೆ, ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆ, ಬಸ್ ನಿಲ್ದಾಣ, ವಿವಿಧ ಸಮುದಾಯಗಳಿಗೆ ಸ್ಮಶಾನ ಭೂಮಿ. ಕಡು ಬಡವರಿಗೆ ವಸತಿಗಾಗಿ ನಿವೇಶನ ಕೊಟ್ಟು ತಮ್ಮ ಮನೆತನದ ಹಿರಿಯರು ಆರಂಭಿಸಿದ ಸಮಾಜ ಸೇವಾ ಕೈಂಕರ್ಯವನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ. ಪ್ರಸ್ತುತ ಮನೆತನದ ಮುಖ್ಯಸ್ಥರಾಗಿರುವ ಡಾ. ಶ್ರೀನಿವಾಸರಾವ ದೇಶಮುಖ ವೃತ್ತಿಯಲ್ಲಿ ವೈದ್ಯರಾಗಿದ್ದಾರೆ. ಪತ್ನಿ ಸಮೇತ ಗ್ರಾಮದಲ್ಲಿ ಆಸ್ಪತ್ರೆ ಆರಂಭಿಸಿ ಗ್ರಾಮೀಣ ಭಾಗದಲ್ಲಿ ಉತ್ತಮ ಗುಣಮಟ್ಟದ ವೈದ್ಯಕೀಯ ಸೇವೆ ನೀಡುತ್ತಿದ್ದಾರೆ. ಹಲವು ಬಡ ರೋಗಿಗಳಿಗೆ ಉಚಿತ ಸೇವೆಯನ್ನು ಒದಗಿಸುತ್ತಿದ್ದಾರೆ.

ವೆಂಕಟೇಶ್ವರ ಮಹಾ ರಥೋತ್ಸವದಲ್ಲಿ ಬಾಜಾ ಬಜಂತ್ರಿ, ಡೊಳ್ಳು ಕುಣಿತ, ಶಿವಭಜನೆ, ಹರಿಭಜನೆ, ಲೇಜಿಮ್ ಕುಣಿತ ಮುಂತಾದ ಕಲಾ ಪ್ರಕಾರಗಳು ಇರಲಿವೆ. ರಥೋತ್ಸವದಲ್ಲಿ ಮಲ್ಲಿನಾಥ ಮುತ್ಯಾ ನಿರಗುಡಿ, ಖಜೂರಿಯ ಕೋರಣೇಶ್ವರ ಮಠದ ಮುರುಘೇಂದ್ರ ಮಹಾಸ್ವಾಮಿಗಳು ಭಾಗವಹಿಸಲಿದ್ದಾರೆ. ಈ ಎಲ್ಲಾ ಸಡಗರ ಸಂಭ್ರಮ ಕಣ್ಣಾರೆ ನೋಡಲು ಖಜೂರಿಗೆ ಒಂದು  ಭೇಟಿ ನೀಡಿ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here