ಕಲಬುರಗಿ: ನಗರದಲ್ಲಿ ಔಷಧ ವ್ಯಾಪಾರಸ್ಥರ ಸಂಘಕ್ಕೆ ಮಾಜಿ ಶಾಸಕ ದಿವಂಗತ ಚಂದ್ರಶೇಖರ ಪಾಟೀಲ್ ರೇವೂರ್ ಹೆಸರಿಟ್ಟಿದ್ದಕ್ಕೆ ಶಾಸಕ ಅಲ್ಲಮಪ್ರಭು ಪಾಟೀಲ್ ಟೀಕೆ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ, ಅಲ್ಲಮಪ್ರಭು ಪಾಟೀಲ್ ವಿರುದ್ಧ ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎ ಸೈಟಲ್ಲಿ ಔಷಧ ವ್ಯಾಪಾರಸ್ಥರ ಸಂಘ ಮಾಡಲಾಗಿದೆ.. ನಮ್ಮ ತಂದೆ ಎರಡು ಬಾರಿ ಶಾಸಕರಾಗಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದರಿಂದ ತಮ್ಮ ತಂದೆಯವರ ಮೇಲಿನ ಅಭಿಮಾನದಿಂದ ಔಷಧ ವ್ಯಾಪಾರಸ್ಥರ ಸಂಘಕ್ಕೆ ನಮ್ಮ ತಂದೆ ದಿವಂಗತ ಮಾಜಿ ಶಾಸಕ ಚಂದ್ರಶೇಖರ ಪಾಟೀಲ್ ರೇವೂರ್ ಹೆಸರಿಟ್ಟಿದ್ದು, ಗೌರಯುತ ಸ್ಥಾನದಲ್ಲಿರುವ ಅಲ್ಲಮಪ್ರಭು ಪಾಟೀಲ್ ಕೀಳುಮಟ್ಟದ ರಾಜಕಾರಣ ಮಾಡೊದು ಬಿಡಬೇಕೆಂದು ಹೇಳಿದರು.
ಕಲಬುರಗಿಯಲ್ಲಿ ಧಾರಾಕಾರವಾಗಿ ಮಳೆ ಸುರಿದಿದ್ದು, ನಗರದ ಸ್ಲಂ ಪ್ರದೇಶಗಳ ಮನೆಯಲ್ಲಿ ನೀರು ನುಗ್ಗಿ ಸಾಕಷ್ಟು ಹಾನಿಯಾಗಿದೆ. ರೈತರು ಬೆಳೆದ ಹೆಸರು, ಉದ್ದು ತೊಗರಿ ಬೆಳೆಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ. ಹೀಗಾಗಿ ಶಾಸಕರು ಪರಿಹಾರ ಕೊಡಿಸುವ ವ್ಯವಸ್ಥೆ ಮಾಡಬೇಕು ಎಂದರು.
ತಾವು ಪ್ರತಿ ಬಾರಿ ನನ್ನ ವಿರುದ್ಧ ದಾಖಲೆಗಳಿವೆ ಎಂದು ಹೆದರಿಸುವ ನಿಟ್ಟಿನಲ್ಲಿ ಮಾತನಾಡುತ್ತಿದ್ದು, ನಮ್ಮ ಕುಟುಂಬ ಕಳೆದ 25 ವರ್ಷಗಳಿಂದ ಸಾರ್ವಜನಿಕ ಕ್ಷೇತ್ರದಲ್ಲಿದ್ದು ನಿಮ್ಮ ಮಾತುಗಳಿಗೆ ನಾನು ಹೆದರುವ ಪ್ರಶ್ನೆಯೇ ಇಲ್ಲ. ಈ ರೀತಿ ಮುಂದುವರಿದರೆ ನಾನು ಸಹ ನನ್ನಲ್ಲಿರುವ ದಾಖಲೆ ಸಮೇತ ಜನರ ಬಳಿ ಬರುತ್ತೇನೆ ಎಂದು ಎಚ್ಚರಿಸಿದರು.
ವಿಶಾಲ ದರ್ಗಿ, ರಾಜು ವಾಡೇಕರ್, ಅಪ್ಪು ಕಣಕಿ ಇತರರಿದ್ದರು.