ಕಲಬುರಗಿ: ‘ಜೈಲು ಶಿಕ್ಷೆಯ ಜತೆಗೆ ಕೈದಿಗಳ ಪರಿವರ್ತನೆ ಮತ್ತು ಪುನರ್ವಸತಿ ಕೇಂದ್ರ’ಎಂದು ಕಲಬುರಗಿ ಕೇಂದ್ರ ಕಾರಾಗೃಹದ ಪ್ರಭಾರ ಅಧೀಕ್ಷಕ ಬಿ.ಸುರೇಶ ಹೇಳಿದರು.
ಅದಾನಿ ಗ್ರೂಪ್‌ನ ಸಕ್ಷಮ ಕೌಶಲ ತರಬೇತಿ ಕೇಂದ್ರ ಮತ್ತು ಶೃಂಗೇರಿ ಶಾರದಾ ಪೀಠದ ಸೋಕೇರ್ ಇಂಡ್ ಸಂಸ್ಥೆ ಸಹಯೋಗದಲ್ಲಿ ಕಂಪ್ಯೂಟರ್ ತರಬೇತಿ ಪಡೆದ ಕೈದಿಗಳಿಗೆ ಪ್ರಮಾಣಪತ್ರ ವಿತರಿಸಿ ಮಾತನಾಡಿದ ಅವರು, ‘ಕೈದಿಗಳ ಸುಧಾರಣೆ ನಮ್ಮ ಕರ್ತವ್ಯ, ಪುನರ್ವಸತಿ ಸಂಸ್ಥೆಗಳಿಂದ. ತರಬೇತಿ ಪಡೆದ ಕೈದಿಗಳು ಬಿಡುಗಡೆಯಾದ ನಂತರ ಕೆಲಸಕ್ಕೆ ಸೇರಿಕೊಳ್ಳಿ’ ಎಂದು ಸಲಹೆ ನೀಡಿದರು. ಕಂಪ್ಯೂಟರ್ ತರಬೇತಿಯ ಎರಡನೇ ಬ್ಯಾಚ್‌ನ ಕೈದಿಗಳೂ ವಿಧೇಯತೆಯಿಂದ ಕಲಿತುಕೊಳ್ಳಿ’ಎಂದು ಎಚ್ಚರಿಸಿದರು.
ಕಾರಾಗೃಹ ಆಡಳಿತಾಧಿಕಾರಿ ಭೀಮಾಶಂಕರ ಡಾಂಗೆ ಮಾತನಾಡಿ, ‘ಜವಾಹರ್‌ಲಾಲ್ ನೆಹರೂರವರು ಜೈಲಿನಲ್ಲಿದ್ದಾಗಲೇ ಡಿಸ್ಕವರಿ ಆಫ್ ಇಂಡಿಯಾ ಕೃತಿ ಬರೆದಿದ್ದು. ದುಡುಕಿ ಇಲ್ಲಿಗೆ ಬಂದಿದ್ದೀರಿ, ಇಲ್ಲಿರುವ ಅವಕಾಶ ಬಳಸಿಕೊಂಡು ತರಬೇತಿ ಪಡೆಯಿರಿ’ ಎಂದು ಹೇಳಿದರು.
ಶೃಂಗೇರಿ ಶಾರದಾ ಪೀಠದ ಪ್ರತಿನಿಧಿ ಉಮೇಶ್ ಹರಿಹರ ಮಾತನಾಡಿ, ‘ದೇವನೊಬ್ಬ ನಾಮ ಹಲವು. ಅವನು ಸಂದರ್ಭಕ್ಕನುಗುಣವಾಗಿ ಅನೇಕ ರೂಪಗಳನ್ನು ತಾಳುತ್ತಾನೆ. ಶೃಂಗೇರಿ ಪೀಠದಲ್ಲಿ ಸಮಾಜದ ಚಿಂತನೆ ಇದೆ. 5000 ವಿದ್ಯಾರ್ಥಿಗಳಿಗೆ ನಿತ್ಯ ಮಠದಿಂದ ಬಿಸಿಯೂಟ ಹೋಗುತ್ತದೆ. ನಿಮ್ಮ ತರಬೇತಿಗೂ ಶ್ರೀಗಳು ಸಹಾಯ ಮಾಡಿದ್ದಾರೆ. ಉಜ್ವಲ ಭವಿಷ್ಯವಿದೆ. ಹೊರಬಂದು ಉತ್ತಮ ಪ್ರಜೆಗಳಾಗಿ’ಎಂದು ಹೇಳಿದರು.
ಸೋಕೇರ್ ಇಂಡ್ ಸಂಸ್ಥೆಗೆ ಶೃಂಗೇರಿ ಮಠದಿಂದ ಅನುದಾನ ಲಭಿಸುತ್ತದೆ. ಕೈದಿಗಳ ಮಕ್ಕಳಿಗೂ ನಾವು ಶಿಕ್ಷಣ ಕೊಡುತ್ತೇವೆ. ಸದ್ಯ ನಮ್ಮಲ್ಲಿ 30 ಮಕ್ಕಳಿದ್ದಾರೆ. ನಿಮ್ಮ ಬಡ ಸಂಬಂಧಿಕರ ಮಕ್ಕಳಿದ್ದರೂ ಅವರನ್ನೂ ಸೇರಿಸಿಕೊಳ್ಳುತ್ತೇವೆ’ ಎಂದು ಸೋಕೇರ್ ಇಂಡ್ ಕಲಬುರಗಿ ಅಧ್ಯಕ್ಷ ಪ್ರಕಾಶ್ ಕುಲಕರ್ಣಿ ಕೈದಿಗಳಿಗೆ ತಿಳಿಸಿದರು.
ಅದಾನಿ ಗ್ರೂಪ್‌ನ ಕೌಶಲ ತರಬೇತಿ ಕೇಂದ್ರದ ಆಪರೇಷನಲ್ ಮ್ಯಾನೇಜರ್ ಅಶೋಕ್ ಕುಮಾರ್ ಎಚ್. ಮಾತನಾಡಿ, ‘ಜಗತ್ತು ಕೌಶಲದ ಮೇಲೆ ಅವಲಂಬಿತವಾಗಿದೆ. ಕಲಿತಿದ್ದನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ. ಎಜುಕೇಟ್ ಮತ್ತು ಎಂಪ್ಲಾಯ್‌ಮೆಂಟ್ ನಮ್ಮ ಉದ್ದೇಶ. ನೀವು ಹೊರಗೆ ಬಂದ ಮೇಲೆ ಕೆಲಸದ ಅವಕಾಶ ಕೂಡ ಕೊಡುತ್ತೇವೆ. ನಾವು ಅಪರಾಧಿಗಳು ಎಂಬುದನ್ನು ತಲೆಯಿಂದ ತೆಗೆದುಹಾಕಿ’ ಎಂದು ಹೇಳಿದರು.
ಕಂಪ್ಯೂಟರ್ ಶಿಕ್ಷಕ ಹರೀಶ್ ದತ್ತಾತ್ರೇಯ ಗೌಳಿ ಮಾತನಾಡಿ, ‘ಕೈದಿಗಳಿಗೆ ಕಂಪ್ಯೂಟರ್ ತರಬೇತಿ ನೀಡಿದ್ದು, ನನಗೆ ಖುಷಿ ತಂದಿದೆ. ಮೊದಲ ಬ್ಯಾಚ್‌ನಲ್ಲಿ ಎಲ್ಲರೂ ಒಳ್ಳೆಯವರಿದ್ದರು. ಎರಡನೇ ಬ್ಯಾಚ್‌ನವರೂ ಸಹಕಾರ ನೀಡಿ ಕಂಪ್ಯೂಟರ್ ಕಲಿಯಬೇಕು. ನಿಮ್ಮ ಸಾಧನೆಯೇ ನನಗೆ ಗೌರವ’ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜೈಲರ್‌ಗಳಾದ ಪರಮಾನಂದ ಹರವಾಳ, ಶೈನಾಜ್ ನಿಗೆವಾನ್, ಶೃಗೇರಿ ಪೀಠದ ವಿನೀತ್ ಹಾಜರಿದ್ದರು. ಕಾರಾಗೃಹದ ಶಿಕ್ಷಕ ನಾಗರಾಜ ಮೂಲಗೆ ಕಾರ್ಯಕ್ರಮ ನಿರೂಪಿಸಿದರು. ಮೊದಲ ಬ್ಯಾಚ್‌ನಲ್ಲಿ ತರಬೇತಿ ಪಡೆದ 30 ಕೈದಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. 2ನೇ ಬ್ಯಾಚ್‌ನವರಿಗೆ ತರಬೇತಿ ಕಿಟ್ ವಿತರಿಸಲಾಯಿತು.