ಕಲಬುರಗಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಶಿಕ್ಷಣ ಸಂಸ್ಥೆಗಳ ಕುಂದು ಕೊರತೆಗಳ ನಿವಾರಣೆಗೆ ಕಲಬುರ್ಗಿಯಲ್ಲಿ ಜರುಗಲಿರುವ ಸಚಿವ ಸಂಪುಟ ಸಭೆಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವಿದ್ಯಾ ಸಂಸ್ಥೆಗಳ ಹಕ್ಕು ರಕ್ಷಣೆ ಒಕ್ಕೂಟದ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಬಾಬುರಾವ್ ಚವ್ಹಾಣ್ ಅವರು ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟರ ಶಿಕ್ಷಣ ಸಂಸ್ಥೆಗಳ ಶಾಲಾ ಶಿಕ್ಷಕರ ವೇತನಗಳಿಗೆ ಆರ್ಥಿಕ ಮಿತವ್ಯಯವನ್ನು ರದ್ದುಪಡಿಸುವಂತೆ, ಪಿಯುಸಿಯಲ್ಲಿ ಉಪನ್ಯಾಸಕರಿಗೆ ವರ್ಕ್‍ಲೋಡ್ ಜಾರಿಯಲ್ಲಿ ತಂದಿರುವುದರಿಂದ ಉಪನ್ಯಾಸಕರು ಎಲ್ಲಿಯೂ ಕೆಲಸ ಮಾಡದೇ ಮಕ್ಕಳ ವಿದ್ಯಾಭ್ಯಾಸ ಹಾಳಾಗುತ್ತಿದ್ದು, ಅದನ್ನು ರದ್ದುಗೊಳಿಸಿ ಮೊದಲಿನ ನೇಮಕಾತಿ ಆದೇಶವನ್ನೇ ಮುಂದುವರೆಸಿಕೊಂಡು ಹೋಗಬೇಕು ಎಂದು ಆಗ್ರಹಿಸಿದರು.
ಪರಿಶಿಷ್ಟರ ಶಿಕ್ಷಣ ಸಂಸ್ಥೆಯಲ್ಲಿ ತೆರವಾದ ಬೋಧಕೇತರ ಹುದ್ದೆಗಳನ್ನು ತಕ್ಷಣ ತುಂಬಲು ಅವಕಾಶ ಕೊಡುವಂತೆ, ಪ್ರಾಥಮಿಕ ಶಾಲೆಗಳಲ್ಲಿ ತೆರವಾದ ಹುದ್ದೆಗಳ ಭರ್ತಿಗೂ ಅವಕಾಶ ಕಲ್ಪಿಸುವಂತೆ ಒತ್ತಾಯಿಸಿದ ಅವರು, ಸರ್ಕಾರದಿಂದ ನಿಗದಿಯಾದ ವಿದ್ಯಾರ್ಥಿಗಳ ಶಿಕ್ಷಕರ ಶೇಕಡಾವಾರು ಅನುಪಾತ 40:1 ಇದಾಗಿದ್ದು, ಇದನ್ನು ಸುಮಾರು ಐದು ದಶಕಗಳಿಂದ ಹಾಗೆಯೇ ಇದೆ. ಆದ್ದರಿಂದ ಶೇಕಡಾವಾರು ಮಕ್ಕಳ ಸಂಖ್ಯೆ ಕಾಪಾಡಿಕೊಳ್ಳುವಲ್ಲಿ ಇಂದಿನ ಮಕ್ಕಳ ಸಂಖ್ಯಾನುಗುಣ ಹೊಂದಿಕೆಯಾಗುತ್ತಿಲ್ಲ. ಕಾರಣ ಶಾಲೆಗಳ ಸಂಖ್ಯೆಗಳು ಹೆಚ್ಚಾಗಿರುವುದರಿಂದ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಗಿದ್ದರಿಂದ ಸ್ವಾಭಾವಿಕವಾಗಿ ವ್ಯತ್ಯಾಸಗಳು ಉಲ್ಬಣವಾಗಿದ್ದು, ಇದನ್ನು 15:1 ಶೇಕಡಾವಾರು ವಿದ್ಯಾರ್ಥಿಗಳಂತೆ ತರಗತಿವಾರು ನಿಗದಿಪಡಿಸಬೇಕು ಎಂದು ಆಗ್ರಹಿಸಿದರು.
ಕೊರೋನಾ ಸಂದರ್ಭದಲ್ಲಿ ಸರ್ಕಾರವು ಶಾಲಾ ಮಕ್ಕಳಿಗೆ ಪರೀಕ್ಷೆ ತೆಗೆದುಕೊಳ್ಳದೇ ಯಥಾವತ್ತಾಗಿ ಮುಂದಿನ ತರಗತಿಗೆ ತೇರ್ಗಡೆ ಮಾಡಬೇಕು ಎಂದು ಸರ್ಕಾರ ಆದೇಶ ನೀಡಿತ್ತು. ಅದನ್ನು ವಿದ್ಯಾ ಸಂಸ್ಥೆಯವರು ಯಥಾವತ್ತಾಗಿ ಪಾಲಿಸಿದ್ದಾರೆ. ತದನಂತರ ಶಿಕ್ಷಣ ಇಲಾಖೆಯವರು ಶಾಲೆಗಳಲ್ಲಿ ಶೇಕಡಾವಾರು ವಿದ್ಯಾರ್ಥಿ ಸಂಖ್ಯೆ ಕೇಳುತ್ತಿದ್ದಾರೆ. ಇದರಿಂದ ಇಲಾಖೆಯು ದ್ವಂದ್ವ ನೀತಿ ಅನುಸರಿಸುತ್ತಿದೆ. ಕೂಡಲೇ ಆ ನ್ಯೂನ್ಯತೆ ಸರಿಪಡಿಸಬೇಕು ಎಂದು ಅವರು ಒತ್ತಾಯಿಸಿದರು.
1983ರ ಶಿಕ್ಷಣ ಕಾಯ್ದೆಯನ್ನು ಮುಂದುವರಿಸಬೇಕೆಂಬ ಸಂಪುಟ ನಿರ್ಣಯವಿಲ್ಲದೇ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಹೊರಡಿಸಿರುವ ಆದೇಶಗಳನ್ನೆಲ್ಲ ರದ್ದುಗೊಳಿಸುವಂತೆ ಆಗ್ರಹಿಸಿದ ಅವರು, ಪರಿಶಿಷ್ಟ ಸಂಸ್ಥೆಗಳ ಆಡಳಿತ ಮಂಡಳಿಗಳಿಗೆ ಮೊದಲು 100ಕ್ಕೆ ಶೇಕಡಾ 5ರಂತೆ ಎಂಜಿಟಿ ಅನುದಾನ ಕೊಡುತ್ತಿದ್ದರು. ಅದನ್ನು ಆಯುಕ್ತರ ಹಂತದಲ್ಲೇ ರದ್ದುಗೊಳಿಸಿರುವುದರಿಂದ ಪುನ: ಆಡಳಿತ ಮಂಡಳಿಗೆ ಎಂಜಿಟಿ ನೀಡಲು ಸರ್ಕಾರವು ಮಂಜೂರಾತಿಗೆ ಆದೇಶ ನೀಡಬೇಕು ಎಂದು ಹೇಳಿದರು.
ಪರಿಶಿಷ್ಟರ ಸಂಸ್ಥೆಗಳಿಗೆ ಶಾಶ್ವತ ಅನುದಾನ ಕೊಡುವುದನ್ನು ನಿಲ್ಲಿಸಿದ್ದು ಸಂವಿಧಾನ ವಿರೋಧಿಯಾಗಿದೆ. ಆದಾಘ್ಯೂ, ಸ್ವಯಂ ಸಂಘ ಸಂಸ್ಥೆಗಳ ಒಳಗೊಳ್ಳುವಿಕೆ ಶೇಕಡಾ 20ರಷ್ಟು ಇರಬೇಕು ಎಂಬ ಸಂವಿಧಾನಬದ್ಧವಾದ ಹಕ್ಕು ಇರುವುದರಿಂದ ಅದರನ್ವಯ ಸಂಸ್ಥೆಗಳಿಗೆ ಅನುದಾನ ರಹಿತ ಎನ್ನುವುದನ್ನು ರದ್ದುಗೊಳಿಸಿ ಅನುದಾನ ಮಂಜೂರು ಮಾಡಬೇಕು ಎಂದು ಅವರು ಒತ್ತಾಯಿಸಿದರು.
2009ರಿಂದ 2015ರವರೆಗೆ ಸರ್ಕಾರವು ಪ್ರೌಢಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ತೆರವಾದ ಹುದ್ದೆಗಳನ್ನು ತುಂಬಲು ಸರ್ಕಾರ ಅವಕಾಶ ಕೊಟ್ಟಿದೆ. ಆದಾಗ್ಯೂ, ಶಿಕ್ಷಣ ಇಲಾಖೆಯ ಕೆಲವು ಅಧಿಕಾರಿಗಳು ಸರ್ಕಾರದ ಆದೇಶವನ್ನು ಪಾಲಿಸದೇ ಇಲಾಖೆಯ ಹಂತದಲ್ಲಿ ಪ್ರಸ್ತಾವನೆಯ ಕಡತವನ್ನು ಪತ್ರ ವ್ಯವಹಾರ ಮಾಡದೇ ವಿಳಂಬ ಮಾಡಿ ಇಲಾಖೆಯ ಹಂತದಲ್ಲಿ ಉಳಿಸಿಕೊಂಡಿದ್ದಾರೆ. ಅಧಿಕಾರಿಗಳ ಕರ್ತವ್ಯ ಲೋಪವನ್ನು ಪರಿಗಣಿಸಿ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
1987-1988ರಿಂದ 1994-1995ರ ಅವಧಿಗೆ ಸರ್ಕಾರ ಸಹಾಯಧನ ಮಂಜೂರಾತಿ ಆದೇಶ ಹೊರಡಿಸಿದೆ. ಆ ಅವಧಿಯಲ್ಲಿ ಉಳಿದ ಕೆಲವು ಶಾಲಾ, ಕಾಲೇಜುಗಳು ಸಹಾಯಾನುದಾನ ಮಂಜೂರಾತಿಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಕೋರಿದ ಅವರು, ನಿವೃತ್ತಿ, ಮರಣ, ರಾಜೀನಾಮೆ ಮುಂತಾದ ತೆರವಾದ ಹುದ್ದೆಗಳಿಗೆ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು, ಸೇವಕ, ಪರಿಚಾರಕ, ಸ್ವಿಪರ್, ವಾಚಮನ್ ಹುದ್ದೆಗಳಿಗೆ ಅನುಮತಿ ನೀಡಿ ಅವಕಾಶ ಕೊಡಿಸಬೇಕು ಎಂದು ಮನವಿ ಮಾಡಿದರು.
ಪದವಿ ವಿದ್ಯಾರ್ತಿಗಳಿಗೆ ಮಂಜೂರಾಗುವ ವಿದ್ಯಾರ್ಥಿ ವೇತನವನ್ನು ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಸಂದಾಯ ಮಾಡುವುದರಿಂದ ವಿದ್ಯಾರ್ಥಿಗಳ ಹಾಜರಾತಿ ಹಾಗೂ ಫಲಿತಾಂಶದಲ್ಲಿ ಇಳಿಮುಖವಾಗಿದೆ. ಆದ್ದರಿಂದ ಅದನ್ನು ಸರಿಪಡಿಸಿ ಸಂಬಂಧಿಸಿದ ಸಂಸ್ಥೆಯ ಪ್ರಿನ್ಸಿಪಾಲರ ಖಾತೆಗೆ ಸಂದಾಯ ಮಾಡುವಂತೆ ಒತ್ತಾಯಿಸಿದ ಅವರು, ಮಹಾವಿದ್ಯಾಲಯಗಳು, ಎಂಎಸ್‍ಡಬ್ಲೂ, ಪಿಜಿ ಕೋರ್ಸ್‍ಗಳಲ್ಲಿ ವಿದ್ಯಾರ್ಥಿಗಳಿಗೆ ಶಿಷ್ಯವೇತನವನ್ನು ಮೊದಲು ಕೊಡಲಾಗುತ್ತಿತ್ತು. ಅದೇ ರೀತಿ ವೇತನ ಕೊಡಬೇಕು. ಕಾಲೇಜಿನ ಶುಲ್ಕ ಕಾಲೇಜಿಗೆ ಕೊಡುವುದರಿಂದ ಕಾಲೇಜು ನಡೆಸಲು ಸಾಧ್ಯ. ಇಲ್ಲದೇ ಹೋದಲ್ಲಿ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡದೇ ಕಾಲೇಜು ಬಿಟ್ಟು ಹೋಗುತ್ತಾರೆ. ಸಮಾಜ ಕಲ್ಯಾಣ ಇಲಾಖೆಯವರೇ ಅವಿದ್ಯಾವಂತರನ್ನಾಗಿ ಮಾಡಿದಂತೆ ಆಗುತ್ತದೆ ಎಂದು ಎಚ್ಚರಿಸಿದರು.
1995-1996ರಿಂದ 2004-2005ರವರೆಗೆ ಪರಿಶಿಷ್ಟರ ವಿದ್ಯಾ ಸಂಸ್ಥೆಗಳು ನಡೆಸುವ ಶಾಲಾ ಕಾಲೇಜುಗಳಿಗೆ ಆದ್ಯತೆ ಮೇರೆಗೆ ಸಹಾಯಾನುದಾನಕ್ಕೆ ಒಳಪಡಿಸಲು ಆದೇಶಿಸುವಂತೆ, ಸರ್ಕಾರವು 2021ರಲ್ಲಿ ಶಾಲೆಗಳ ಮನ್ನಣೆ ನವೀಕರಣಕ್ಕಾಗಿ ಕೆಲವು ಶರತ್ತುಗಳನ್ನು ಹೊರಡಿಸಿದ್ದು, ಕೇವಲ ಒಂದು ವರ್ಷಕ್ಕೆ ಶಾಲೆಗಳ ಮನ್ನಣೆ ನವೀಕರಣ ಮಾಡಲಾಗುತ್ತಿದೆ. ಇದು ತೊಂದರೆಯಾಗುತ್ತಿದೆ. ಆದ್ದರಿಂದ ಅಗ್ನಿಶಾಮಕ, ಕಟ್ಟಡ ಸುರಕ್ಷತೆ ಅನುಮತಿ ಇವು ಎರಡನ್ನೂ ತೆಗೆದುಹಾಕಿ ಯಥಾವತ್ತಾಗಿ ಐದು ವರ್ಷಗಳ ಅವಧಿಗಾಗಿ ಮನ್ನಣೆ ನವೀಕರಣ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷ ಶಂಕರ್ ಕೋಡ್ಲಾ, ಡಾ. ಗೋಪಾಲರಾವ್ ತೆಲಂಗಿ, ಬಕ್ಕಪ್ಪ ಕೋಟೆ, ಸಚಿನ್ ಚವ್ಹಾಣ್, ಸಂತೋಷ್ ಮುಂತಾದವರು ಉಪಸ್ಥಿತರಿದ್ದರು.