ಸುರಪುರ: ಸಾರ್ವಜನಿಕರು ತಮ್ಮ ಕೆಸಲ ಕಾರ್ಯಗಳಿಗಾಗಿ ಕಚೇರಿಗೆ ಬಂದಾಗ ವಿಳಂಬ ಮಾಡದೆ ನ್ಯಾಯಯುತವಾದ ಅರ್ಜಿಗಳ ಕೆಲಸ ಮಾಡಿಕೊಡುವಂತೆ ಕರ್ನಾಟಕ ಲೋಕಾಯುಕ್ತ ಯಾದಗಿರಿ ಠಾಣೆ ಪೊಲೀಸ್ ಇನ್ಸ್ಪೇಕ್ಟರ್ ಸಿದ್ದರಾಯ ಬಳೂರ್ಗಿ ತಿಳಿಸಿದರು.
ಕೆಲಸಕ್ಕೆ ಅನಗತ್ಯವಾಗಿ ವಿಳಂಬ ಮಾಡಿರುವುದರ ವಿರುದ್ಧ ದೂರು ನೀಡಿದರೆ ತಕ್ಕ ಕ್ರಮ ಕೈಗೊಳ್ಳಲು ಕರ್ನಾಟಕ ಲೋಕಾಯುಕ್ತ ಕಚೇರಿಗೆ ವರದಿ ಸಲ್ಲಿಸಲಾಗುವುದು ಎಂದು ಲೋಕಾಯುಕ್ತ ಪೊಲೀಸ್ ನಿರೀಕ್ಷಕ ಸಿದ್ದರಾಜು ಬಳುರುಗಿ ಹೇಳಿದರು.
ನಗರದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಲೋಕಾಯುಕ್ತ ಇಲಾಖೆಯಿಂದ ಹಮ್ಮಿಕೊಂಡಿದ್ದ ಸಾರ್ವಜನಿಕರಿಂದ ದೂರು, ಕುಂದುಕೊರತೆ ಅರ್ಜಿ ಸ್ವೀಕಾರ ಸಭೆಯಲ್ಲಿ ಮಾತನಾಡಿದ ಅವರು, ಜನರ ಯಾವುದೇ ಅರ್ಜಿಗಳಿಗೆ ಹಣಕಾಸಿನ ಬೇಡಿಕೆ ಇಡುವಂತಿಲ್ಲ,ಅರ್ಜಿ ವಿಲೇವಾರಿಯನ್ನೂ ವಿಳಂಬ ಮಾಡಿ ಕಿರುಕುಳ ನೀಡುವಂತಿಲ್ಲ. ಸರಕಾರಿ ಹುದ್ದೆ ದುರ್ಬಳಕೆ ಮಾಡಿಕೊಂಡು ಅವ್ಯವಹಾರ ಮಾಡುತ್ತಿರುವುದು ಕಂಡು ಬಂದಿದ್ದರ ಕುರಿತು ಸಾರ್ವಜನಿಕರ ದೂರು ಬಂದಲ್ಲಿ ಅಂತಹ ಅಧಿಕಾರಿ ವಿರುದ್ಧ ಕರ್ನಾಟಕ ಲೋಕಾಯುಕ್ತ ಕಚೇರಿಗೆ ವರದಿ ಸಲ್ಲಿಸಲಾಗುವುದು ಎಂದು ಎಚ್ಚರಿಸಿದರು.ಅಲ್ಲದೆ ಸಾರ್ವಜನಿಕರು ತಮ್ಮ ಯಾವುದೇ ಅರ್ಜಿಗೆ ಅಧಿಕಾರಿಗಳು ಏನಾದರು ಲಂಚದ ಬೇಡಿಕೆ ಇಟ್ಟಲ್ಲಿ ಕೂಡಲೇ ಲೋಕಾಯುಕ್ತ ಕಚೇರಿಗೆ ಮಾಹಿತಿ ನೀಡುವಂತೆ ತಿಳಿಸಿದರು.
ಅಲ್ಲದೆ ಅಹವಾಲು ಸ್ವೀಕಾರ ಸಭೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ತಪ್ಪದೇ ಹಾಜರಿರಬೇಕು. ಸಮಸ್ಯೆಗಳಿದ್ದರೆ ಸ್ಥಳದಲ್ಲೇ ಇತ್ಯರ್ಥ ಪಡಿಸಬಹುದು. ಸಭೆಗೆ ತಾಲೂಕು ಮಟ್ಟದ ಅಧಿಕಾರಿಗಳು ಕಚೇರಿಯಲ್ಲಿದ್ದು, ಸಭೆಗೆ ಬಾರದೆ ಅಧೀನ ಅಧಿಕಾರಿಗಳನ್ನು ಕಳುಹಿಸಿದರೆ ಅದನ್ನು ಸಹಿಸಲಾಗದು ಎಂದರು.
ಇದೇ ಸಂದರ್ಭದಲ್ಲಿ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಹಾಗೂ ತಾಲೂಕಿನ ವಿವಿಧ ಕಡೆಗಳಿಂದ ಆಗಮಿಸಿದ್ದ ಸಾರ್ವಜನಿಕರಿಂದ ರಂಗಂಪೇಟೆಯ ಮಂಡಾಳ ಬಟ್ಟಿ ಬಳಿ ಮಹಿಳಾ ಶೌಚಾಲಯ ಅಕ್ರಮವಾಗಿ ನೆಲಸವiಗೊಳಿಸಲಾಗಿದೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎನ್ನುವುದು, ಹೆಮ್ಮಡಗಿಯಲ್ಲಿ ಮಳೆಗಾಳಿಗೆ ಮನೆ ಬಿದ್ದರೂ ಪರಿಹಾರ ಕೊಟ್ಟಿಲ್ಲ, ಪಿಡಬ್ಲ್ಯುಡಿ ಇಲಾಖೆಯು ಆರ್‍ಟಿಐ ನಡಿ ಅರ್ಜಿ ಹಾಕಿದರೂ ಚಿಕ್ಕನಹಳ್ಳಿ, ಚಿಕ್ಕಹೆಬ್ಬಳ್ಳಿವರೆಗೆ ರಸ್ತೆ ಕಾಮಗಾರಿ ಮಾಹಿತಿ ನೀಡುತ್ತಿಲ್ಲ, ಬಾದ್ಯಾಪುರ ವ್ಯಕ್ತಿಯೊಬ್ಬರಿಗೆ ಪಿಡಿಪಿ ಪ್ರಮಾಣ ಪತ್ರ ನೀಡುತ್ತಿಲ್ಲ ಸೇರಿದಂತೆ ಒಟ್ಟು 12 ಅರ್ಜಿಗಳನ್ನು ಸಲ್ಲಿಸಲಾಗಿದೆ.
ಸಭೆಯಲ್ಲಿ ತಹಸೀಲ್ದಾರ್ ಹುಸೇನಸಾಬ್ ಅಪ್ಪಾಸಾಬ್ ಸರಕಾವಸ್, ತಾಪಂ ಇಒ ಬಸವರಾಜ ಸಜ್ಜನ್, ಟಿಎಚ್‍ಒ ಡಾ. ಆರ್.ವಿ. ನಾಯಕ,ನಗರಸಭೆ ಪೌರಾಯುಕ್ತ ಜೀವನ್ ಕಟ್ಟಿಮನಿ, ಲೋಕಾಯುಕ್ತ ಸಿಬ್ಬಂದಿಗಳಾದ ಮಹಮದ್ ಅಭೀದ್, ಸತೀಶಕುಮಾರ, ವಿನಯಕುಮಾರ, ವಿಕಾಸ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.