ಕಲಬುರಗಿ: ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಗುರುವಾರ ಸಂಜೆ ತಮ್ಮ ಹುಟ್ಟು ಹಬ್ಬವನ್ನು ಕಲಬುರಗಿ ನಗರದ ಆಳಂದ ನಾಕಾ ರಸ್ತೆಯಲ್ಲಿರುವ ರಾಜ್ಯ ಮಹಿಳಾ ನಿಲಯದ ನಿವಾಸಿಗಳು, ಬಾಲಕಿಯರ ಬಾಲ ಮಂದಿರ ಹಾಗೂ ಬುದ್ಧಿಮಾಂದ್ಯ ಬಾಲಕಿಯರ ಬಾಲ ಮಂದಿರದ ಮಕ್ಕಳೊಂದಿಗೆ ಆಚರಿಸಿಕೊಂಡರು.
ಮಕ್ಕಳೊಂದಿಗೆ ಕೇಕ್ ಕತ್ತರಿಸಿ ಅದನ್ನು ಎಲ್ಲಾ ಮಕ್ಕಳಿಗೆ ವಿತರಿಸಿದರು. ತಮ್ಮ ಹುಟ್ಟು ಹಬ್ಬ ಆಚರಿಸಿಕೊಳ್ಳುವುದಕ್ಕೆ ಜಿಲ್ಲೆಯ ದಂಡಾಧಿಕಾರಿಗಳೆ ತಮ್ಮ ನಿಲಯಕ್ಕೆ ಬಂದಿರುವುದನ್ನು ಕಂಡ ಮಕ್ಕಳು ಮತ್ತು ನಿವಾಸಿಯಲ್ಲಿ ಎಲ್ಲಿಲ್ಲದ ಸಂಭ್ರಮ ಮನೆ ಮಾಡಿತ್ತು. ಮಕ್ಕಳು ಹೆಜ್ಜೆ ಹಾಕಿ ಸಂಭ್ರಮಪಟ್ಟಿದಲ್ಲದೆ ಡಿ.ಸಿ. ಜೊತೆ ಗ್ರೂಪ್ ಫೋಟೊ ತೆಗೆಸಿಕೊಂಡರು.
ಇದೇ ಸಂದರ್ಭದಲ್ಲಿ ನಿಲಯದ ನಿವಾಸಿಯೊಬ್ಬರು ತಾವು ಬಿಡಿಸಿದ ಕೃಷ್ಣನ ಚಿತ್ರವನ್ನು ಜಿಲ್ಲಾಧಿಕಾರಿಗಳಿಗೆ ಹುಟ್ಟು ಹಬ್ಬದ ಉಡುಗೊರೆಯಾಗಿ ನೀಡಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ರಾಜಕುಮಾರ ರಾಥೋಡ್, ಮಹಿಳಾ ಅಭಿವೃದ್ಧಿ ಅಧಿಕಾರಿ ಶರಣಪ್ಪ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಂಜುಳಾ ಪಾಟೀಲ್, ಬುದ್ಧಿಮಾಂದ್ಯ ಬಾಲಕಿಯರ ಬಾಲ ಮಂದಿರ ಶಾಲೆಯ ಅಧೀಕ್ಷಕಿ ಜ್ಯೋತಿ ಬೊಮ್ಮನಗಿ, ಬಾಲಕಿಯರ ಬಾಲ ಮಂದಿರದ ಅಧೀಕ್ಷಕಿ ಶಾಂತಾಬಾಯಿ, ರಾಜ್ಯ ಮಹಿಳಾ ನಿಲಯದ ಅಧೀಕ್ಷಕಿ ಅನುರಾಧ ಪಾಟೀಲ ಸೇರಿದಂತೆ ಇತರೆ ಸಿಬ್ಬಂದಿಗಳು ಇದ್ದರು.