ಕಲಬುರಗಿ: ಕಲ್ಯಾಣ ಕರ್ನಾಟಕದ ವಿಭಾಗೀಯ ಕೇಂದ್ರವಾದ ಕಲಬುರಗಿ ನಗರದ ಹೊರ ವಲಯದಲ್ಲಿ ನಿರ್ಮಾಣವಾಗಿರುವ ವಿಮಾನ ನಿಲ್ದಾಣಕ್ಕೆ ಶ್ರೀ ಜಗದ್ಗುರು ರೇಣುಕಾಚಾರ್ಯರ ಹೆಸರು ನಾಮಕರಣ ಮಾಡುವಂತೆ ಶ್ರೀ ಜಗದ್ಗುರು ರೇಣುಕಾಚಾರ್ಯ ಭಕ್ತ ಬಳಗದ ಅಧ್ಯಕ್ಷರಾದ ಅಣವೀರಯ್ಯ ಸ್ವಾಮಿ ಕೋಡ್ಲಿ ರಾಜ್ಯ ಸರ್ಕಾರಕ್ಕೆ ಒತ್ತಯಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಸಿಲೂರಿನ ಜನತೆಯ ಬಹುದಿನಗಳ ಬೇಡಿಕೆಯಾಗಿದ್ದ ವಿಮಾನಯಾನ ಸೇವೆ ಪ್ರಾರಂಭಗೊಳ್ಳುತ್ತಿರುವುದು ನಿಜಕ್ಕೂ ಸಂತೋಷದ ವಿಷಯವಾಗಿದ್ದು, ಶ್ರೀನಿವಾಸ ಸರಡಗಿ ಸೀಮೆಯಲ್ಲಿ ಸುಮಾರು ೬೦೦ ಕ್ಕಿಂತಲೂ ಹೆಚ್ಚು ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ವಿಮಾನ ನಿಲ್ದಾಣದ ಬಹುತೇಕ ಕಾಮಗಾರಿ ಪೂರ್ಣಗೊಂಡಿರುವುದು ವಿಮಾನ ನಿಲ್ದಾಣ ಸೇವೆಗೆ ಸಜ್ಜಾಗಿ ನಿಂತಿದೆ.
ರಾಜ್ಯ ಸರ್ಕಾರ ಕೂಡಾ ಕೇಂದ್ರದ ವಿಮಾನಯಾನ ಇಲಾಖೆಯೊಂದಿಗೆ ಒಪ್ಪಂದದ ಪ್ರಕ್ರಿಯೆ ಸೇರಿದಂತೆ ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡಿದ್ದು, ಸಣ್ಣಪುಟ್ಟ ಕಾಮಗಾರಿಗಳು ಆಗಬೇಕಾಗಿದೆ. ಬರುವ ನವೆಂಬರ್ ತಿಂಗಳಲ್ಲಿ ವಿಮಾನಯಾನ ಸೇವೆ ಪ್ರಾರಂಭವಾಗುವ ಲಕ್ಷಣಗಳು ಕಂಡುಬರುತ್ತಿವೆ. ಅದೇ ರೀತಿಯಾಗಿ ಹೈದ್ರಾಬಾದ ಕರ್ನಾಟಕ ಪ್ರದೇಶ ಹೆಸರನ್ನು ತೆಗೆದು ರಾಜ್ಯ ಸರ್ಕಾರ ಕಲ್ಯಾಣ ಕರ್ನಾಟಕ ಪ್ರದೇಶವೆಂದು ಹೆಸರು ಘೋಷಣೆ ಮಾಡಿರುವ ಕ್ರಮವನ್ನು ಬಳಗದ ವತಿಯಿಂದ ಹೃದಯಪೂರ್ವಕವಾಗಿ ಸ್ವಾಗತಿಸುತ್ತೇವೆ. ಬಸವಾದಿ ಶಿವಶರಣರ, ಸಂತರ, ಸೊಫಿಗಳ ನೆಲಕ್ಕೆ ಕಲ್ಯಾಣ ಕರ್ನಾಟಕ
ಎಂದು ಕರೆದಿರುವುದು ಅತೀವ ಹೆಮ್ಮೆಯ ಸಂಗತಿಯಾಗಿದ್ದು, ಇದೇ ನಿಟ್ಟಿನಲ್ಲಿ ನಾಡು ಸೇರಿದಂತೆ ದಕ್ಷಿಣ ಭಾರತದಾದ್ಯಂತೆ ಕೋಟ್ಯಾಂತರ ಭಕ್ತರ ಬಳಗ ಹೊಂದಿರುವ ಶ್ರೀ ಜಗದ್ಗುರು ರೇಣುಕಾಚರ್ಯರ ಹೆಸರು ವಿಮಾನ ನಿಲ್ದಾಣಕ್ಕೆ ಇಡುವುದು ಸೂಕ್ತವಾಗಿದ್ದು ಈ ದಿಶೆಯಲ್ಲಿ ಮಾನ್ಯ ಮುಖ್ಯಮಂತ್ರಿಗಳು ಕೂಡಲೇ ವಿಶೇಷ ಆಸಕ್ತಿ ವಹಿಸಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ನಾವುಗಳು ಒತ್ತಾಯಿಸುತ್ತೇವೆ. ನಾಳೆ ಕಲಬುರಗಿ ಮಹಾನಗರಕ್ಕೆ ಆಗಮಿಸುತ್ತಿರುವ ಮಾನ್ಯ ಮುಖ್ಯಮಂತ್ರಿಗಳಿಗೆ ಈ ವಿಷಯದ ಕುರಿತು ಮನವಿ ಸಲ್ಲಿಸಲು ನಿಯೋಗದ ಮೂಲಕ ತೆರಳಿ ಕೋರಿಕೊಳ್ಳಲಾಗುವುದೆಂದು ಅವರು ವಿವರಿಸಿದ್ದಾರೆ.
ಪತ್ರಿಕಾ ಗೋಷ್ಠಿಯಲ್ಲಿ ಬಳಗದ ಗೌರವ ಅಧ್ಯಕ್ಷರಾದ ಅನೀಲ ದೇವಿಂದ್ರಪ್ಪ ಜಮಾದಾರ, ಬಳಗದ ಪದಾಧಿಕಾರಿಗಳಾದ ಬಸವರಾಜ ಕೊಲಕುಂದಿ, ಶಿವರಾಜ ಪಾಟೀಲ ಗೊಣಗಿ, ಸಂಗಯ್ಯ ಸ್ವಾಮಿ ಹಿರೇಮಠ, ಸಂತೋಷ ಆಡೆ, ಶಿವಾನಂದ ಮಠಪತಿ, ವಿಠ್ಠಲ ಮೋನಪ್ಪ ಟೇಂಗಳಿ, ಶರಣಬಸಪ್ಪ ಬಗಲಿ, ರುದ್ರಯ್ಯ ಹಿರೇಮಠ, ನಿಂಗರಾಜ ಮಾಲಿಪಾಟೀಲ ಉಪಸ್ಥಿತರಿದ್ದರು.