ಚಿಂಚೋಳಿ: ವಿದ್ಯಾರ್ಥಿನಿ ರೇಣುಕಾ ಮಾದರ್ ಅತ್ಯಾಚಾರ, ಕೊಲೆಯನ್ನು ಖಂಡಿಸಿ ಹಾಗೂ ವಿದ್ಯಾರ್ಥಿ, ವಿದ್ಯಾರ್ಥಿನಿ ನಿಲಯಗಳಲ್ಲಿ ಅಸಮರ್ಪಕ ಸೌಲಭ್ಯಗಳನ್ನು ನೀಡಿ ವಿದ್ಯಾರ್ಥಿಗಳನ್ನು ವಂಚಿಸುತ್ತಿರುವುದರ ವಿರುದ್ಧ ಬಹುಜನ ವಿದ್ಯಾರ್ಥಿ ಸಂಘ(BVS) ತಾಲೂಕು ಘಟಕ ಬೃಹತ್ ಪ್ರತಿಭಟನೆ ನಡೆಸಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಬಿವಿಎಸ್ ಮುಖಂಡರು, ಬಿಜಾಪುರದಲ್ಲಿ ರೇಣುಕಾ ಮಾದರ್ ಎಂಬ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆ ಗೈಯ್ಯಲಾಗಿದೆ. ಈ ಘಟನೆ ಈಗ ಬಿಜಾಪುರದಲ್ಲಿ ನಡೆದಿದೆ. ಈ ಘಟನೆಗೆ ಸಂಬಂಧಪಟ್ಟಂತೆ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳದಿದ್ದರೆ, ಮುಂದೆ ಇನ್ನೊಂದು ಕಡೆಯಲ್ಲಿ ಇಂತಹದ್ದೇ ಘಟನೆ ನಡೆಯುತ್ತದೆ. ಹಾಗಾಗಿ ರೇಣುಕಾ ಮಾದರ್ ಪ್ರಕರಣದಲ್ಲಿ ತಪ್ಪಿತಸ್ತರಿಗೆ ಶೀಘ್ರವೇ ಕಠಿಣ ಶಿಕ್ಷೆ ನೀಡುವ ಕೆಲಸವಾಗಬೇಕು ಎಂದು ಒತ್ತಾಯಿಸಿದರು.
ಮಹಿಳೆಯರಿಗೆ ಹಾಗೂ ವಿಶೇಷವಾಗಿ ವಿದ್ಯಾರ್ಥಿನಿಯರಿಗೆ ರಕ್ಷಣೆ ನೀಡುವುದು ಸರ್ಕಾರದ ಕರ್ತವ್ಯವಾಗಿದೆ. ಬಸ್ಸು ನಿಲ್ದಾಣಗಳಲ್ಲಿ, ಮಹಿಳಾ ವಸತಿ ನಿಲಯಗಳಲ್ಲಿ ಹಾಗೂ ಶಾಲಾ ಕಾಲೇಜಿನ ವಿದ್ಯಾರ್ಥಿನಿಯರು ಓಡಾಡುವ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಕಣ್ಗಾವಲಿಡಬೇಕು. ಮಹಿಳೆಯರಿಗೆ ಮತ್ತು ವಿದ್ಯಾರ್ಥಿನಿಯರ ರಕ್ಷಣೆಗೆ ಪೊಲೀಸ್ ಬಂದೋಬಸ್ತ್ ನ ಅಗತ್ಯವಿದೆ. ಈ ವ್ಯವಸ್ಥೆಗಳನ್ನು ಸರ್ಕಾರ ಕಲ್ಪಿಸಬೇಕು ಎಂದು ನಾವು ಈ ಪ್ರತಿಭಟನೆಯ ಮೂಲಕ ಸರ್ಕಾರವನ್ನು ಒತ್ತಾಯಿಸಿದ್ದೇವೆ ಎಂದು ಬಿವಿಎಸ್ ತಾಲೂಕು ಅಧ್ಯಕ್ಷ ಯಲ್ಲಾಲಿಂಗ ದಂಡಿನ್ ರಾಷ್ಟ್ರಧ್ವನಿಗೆ ತಿಳಿಸಿದ್ದಾರೆ.
ಜಿಲ್ಲೆ ಹಾಗೂ ತಾಲೂಕಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರ ವಸತಿ ನಿಲಯಗಳ ಪರಿಸ್ಥಿತಿ ಅದೋಗತಿಯಾಗಿದೆ. ಇಲ್ಲಿನ ಸಮಸ್ಯೆಗಳನ್ನು ಯಾರೂ ಕೇಳದಂತಹ ಸ್ಥಿತಿ ನಿರ್ಮಾಣವಾಗಿದೆ. ಚಿಂಚೋಳಿ ತಾಲೂಕಿನ ಅಲ್ಪಸಂಖ್ಯಾತರ ಹಾಗೂ ಬಿಸಿಎಂ ಹಾಸ್ಟೆಲ್ ಗಳಲ್ಲಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಆಹಾರದಲ್ಲೂ ವಂಚನೆ ಮಾಡಲಾಗುತ್ತಿವೆ. ವಿದ್ಯಾರ್ಥಿಗಳಿಗೆ ಕಳಪೆ ಮಟ್ಟದ ಆಹಾರವನ್ನು ಪೂರೈಸಲಾಗುತ್ತಿದೆ. ಸರ್ಕಾರದ ವತಿಯಿಂದ ವಿದ್ಯಾರ್ಥಿಗಳಿಗಾಗಿ ರೂಪಿಸಿರುವ ಮೆನುವಿನಂತೆ ಹಾಸ್ಟೆಲ್ ಗಳಲ್ಲಿ ಆಹಾರ ನೀಡಲಾಗುತ್ತಿಲ್ಲ. ಇವುಗಳನ್ನು ಪ್ರಶ್ನಿಸಿದ ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕಿ ಬಾಯಿ ಮುಚ್ಚಿಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ಮಾದಿಗ ಸಂಘದ ಜಿಲ್ಲಾಧ್ಯಕ್ಷ ಸುನೀಲ್ ಬಿವಿಎಸ್ ಪ್ರತಿಭಟನೆಗೆ ಬೆಂಬಲ ಸೂಚಿಸಿ ಭಾಗವಹಿಸಿದ್ದರು. ಸಂಯೋಜಕ ಅಕ್ಷಯ್ ಕುಮಾರ್ ಸೇರಿದಂತೆ ಚಿಂಚೋಳಿ ತಾಲೂಕು ಬಿವಿಎಸ್ ಕಾರ್ಯರ್ತರು, ಮುಖಂಡರು ಭಾಗವಹಿಸಿದ್ದರು.