ಕಲಬುರಗಿ: ಕಳೆದ ಕೆಲವು ತಿಂಗಳುಗಳಿಂದ 371ನೇ ಜೇ ಕಲಂ ನಿಯಮಗಳ ವಿರುದ್ದ ಮತ್ತು ಸಂಪುಟ ಉಪಸಮಿತಿ ನಿರ್ಣಯದ ಸುತ್ತೋಲೆಗೆ ಪ್ರತಿಕೂಲ ವಾತವರ್ಣ ನಿರ್ಮಾಣ ಮಾಡಿ ರಾಜ್ಯದ ನೇಮಕಾತಿಗಳಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಅನ್ಯಾಯ ಮಾಡಲು ನಡೆಸಿರುವ ಸಂಚಿಗೆ ನಿನ್ನೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ದಿಟ್ಟ ನಿರ್ಧಾರ ತೆಗೆದುಕೊಂಡು 2023ರ ಸುತ್ತೋಲೆಯಂತೆ ಸರ್ಕಾರದ ಎಲ್ಲಾ ನೇಮಕಾತಿಗಳು ನಡೆಸುವಂತೆ ನಿರ್ಧಾರ ತೆಗೆದುಕೊಂಡಿರುವದ್ದಕ್ಕೆ ಕಲ್ಯಾಣ ಹೋರಾಟ ಸಮಿತಿಯ ಮಹತ್ವದ ಕೋರ ಕಮೀಟಿ ಸಭೆ ನಡೆಸಿ ಸರ್ಕಾರದ ಕ್ರಮಕ್ಕೆ ಸಂತಸ ವ್ಯಕ್ತಪಡಿಸಿದೆ ಎಂದು ಸಮಿತಿಯ ಗೌರವಾಧ್ಯಕ್ಷರಾದ ಬಸವರಾಜ ದೇಶಮುಖ ಮತ್ತು ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿಯವರು ತಿಳಿಸಿದ್ದಾರೆ.
ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ನೇತೃತ್ವದಲ್ಲಿ ಸಮಿತಿಯ ಗೌರವಾಧ್ಯಕ್ಷರಾದ ಬಸವರಾಜ ದೇಶಮುಖರವರ ಅಧ್ಯಕ್ಷತೆಯಲ್ಲಿ ಇಂದು ಶರಣಬಸವೇಶ್ವರ ದೇವಸ್ಥಾನದ ದಾಸೋಹ ಮಹಾಮನೆಯಲ್ಲಿ ಸಭೆ ನಡೆಸಿ ಕಲ್ಯಾಣ ಕರ್ನಾಟಕದ ರಚನಾತ್ಮಕ ಪ್ರಗತಿಗೆ ಸಂಬಂಧಿಸಿದ ಮತ್ತು ಸಂವಿಧಾನದ 371ನೇ ಜೇ ಕಲಂ ಪರಿಣಾಮಕಾರಿ ಅನುಷ್ಠಾನಕ್ಕೆ ಈಗಾಗಲೇ ಸರ್ಕಾರ ಕಲ್ಯಾಣದ ಜನಮಾನಸಕ್ಕೆ ಸ್ಪಂದಿಸಿ ಕಲಬುರ್ಗಿಯಲ್ಲಿ ಸೆಪ್ಟೆಂಬರ್ 17 ರಂದು ಜರುಗಿದ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಣಯಗಳಂತೆ ಪ್ರತ್ಯೇಕ ಸಚಿವಾಲಯ ಸೇರಿದಂತೆ 47 ಅಂಶಗಳ ನಿರ್ಣಯಗಳು ಕಾಲಮಿತಿಯಲ್ಲಿ ಈಡೇರಿಸಲು ಆಗ್ರಹಿಸಿ ನಿರ್ಣಯ ಕೈಗೊಳ್ಳಲಾಯಿತು.
ಕಲ್ಯಾಣ ಕರ್ನಾಟಕದ ಪಾಲಿನ ನೇಮಕಾತಿಗಳ ಬಗ್ಗೆ ನಿರಂತರವಾಗಿ ಉಧ್ಬವಿಸುವ ಸಮಸ್ಯೆಗಳ ಹಾಗೂ ಸಾವಾವಳಲುಗಳ ಬಗ್ಗೆ ಸಂಪುಟ ಉಪಸಮಿತಿ ಅಧ್ಯಕ್ಷರು ಮತ್ತು ಸಚಿವರಾದ ಪ್ರಿಯಾಂಕ್ ಖರ್ಗೆ ಮತ್ತು ಡಾ.ಶರಣ ಪ್ರಕಾಶ ಪಾಟೀಲರವರ ಸಮಾರೋಪದಿಯಲ್ಲಿ ಸ್ಪಂದಿಸುತ್ತಿರುವ ಕುರಿತು ಸಂತಸ ವ್ಯಕ್ತಪಡಿಸಿದರು.
ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ನಡೆದ ಮಹತ್ವದ ಸಭೆಯಲ್ಲಿ 1.2.23ರ ಸುತ್ತೋಲೆಯಂತೆ ಸರ್ಕಾರದ ಎಲ್ಲಾ ನೇಮಕಾತಿಗಳು ನಡೆಸುವ ಬಗ್ಗೆ ಐತಿಹಾಸಿಕ ದಿಟ್ಟ ನಿರ್ಧಾರ ತೆಗೆದುಕೊಂಡಿರುವದು ಕಲ್ಯಾಣದ ನಿರುದ್ಯೋಗಿಗಳಿಗೆ ಸಮಾಧಾನ ತಂದಿದೆ.ಮುಖ್ಯಮಂತ್ರಿಗಳ ಸ್ಪಷ್ಟ ನಿಲುವಿಗೆ ಮತ್ತು ಕಲ್ಯಾಣದ ಸಚಿವರಾದ ಪ್ರಿಯಾಂಕ್ ಖರ್ಗೆ ಮತ್ತು ಡಾ.ಶರಣ ಪ್ರಕಾಶ ಪಾಟೀಲ, ಈಶ್ವರ ಖಂಡ್ರೆ, ರಹೀಂ ಖಾನ್, ಶರಣಬಸಪ್ಪ ದರ್ಶನಾಪೂರ್,ಎನ್ ಎಸ್ ಬೋಸರಾಜು ಸೇರಿದಂತೆ ಎಲ್ಲಾ ಸಚಿವರ ರಾಜಕೀಯ ಇಚ್ಛಾಶಕ್ತಿಗೆ ಸಮಿತಿ ಅಭಿನಂದಿಸುತ್ತದೆ.
ಕಳೆದ ಮೇ ತಿಂಗಳಿನಿಂದ ಕೆಲವು ಸಂವಿಧಾನ ವಿರೋಧಿ ,ಮೀಸಲಾತಿ ವಿರೋಧಿ, ಮತ್ತು ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಸಿಕ್ಕಿರುವ 371ನೇ ಜೇ ಕಲಂ ವಿರೋಧಿ ಪಟ್ಟಭದ್ರ ಹಿತಾಸಕ್ತಿಗಳು 2023 ಸುತ್ತೋಲೆ ವಿರುದ್ಧ ರಾಜ್ಯದ 24 ಜಿಲ್ಲೆಗಳ ಜನರಲ್ಲಿ ಸುಳ್ಳು ಸುದ್ದಿ ಸೃಷ್ಟಿಸಿ ಅಪ ಪ್ರಚಾರ ಮಾಡಿದರು ಅಷ್ಟೇ ಅಲ್ಲದೆ ದಕ್ಷಿಣ ಕರ್ನಾಟಕದ ಮತ್ತು ಕಿತ್ತೋರ ಕರ್ನಾಟಕದ ಮಂತ್ರಿಗಳಿಗೂ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುವ ಕೆಲಸ ಮಾಡಿದರು.ಇದಕ್ಕೆ ಪ್ರತಿಯಾಗಿ ತಕ್ಕ ಉತ್ತರ ನೀಡಲು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ನೇತೃತ್ವದಲ್ಲಿ ಕಲ್ಯಾಣ ಕರ್ನಾಟಕದ ಎಳು ಜಿಲ್ಲೆಗಳಲ್ಲಿ ಜೂನ್ ಒಂದನೇ ತಾರೀಖಿನಿಂದ ನಿರಂತರ ಹೋರಾಟಗಳು ನಡೆಸಿರುವುದಕ್ಕೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿರುವದಕ್ಕೆ, ಕಲ್ಯಾಣದ ಜನಮಾನಸದ ವತಿಯಿಂದ ಸರ್ಕಾರದ ನಿರ್ಧಾರಕ್ಕೆ ಅಭಿನಂದಿಸುವ ನಿರ್ಣಯ ಸಮಿತಿಯ ಕೋರ್ ಕಮಿಟಿ ಸಭೆಯಲ್ಲಿ ನಿರ್ಣಯ ಕೈಗೊಂಡು ಸರ್ಕಾರದ ಕ್ರಮಕ್ಕೆ ಸ್ವಾಗತಿಸಿ ಅಭಿನಂದನೆ ವ್ಯಕ್ತಪಡಿಸಲಾಯಿತು.
ಸಮಿತಿಯ ಆಪತ್ಕಾಲಿಕ ಕೋರ್ ಕಮಿಟಿ ಸಭೆಯಲ್ಲಿ ಸಮಿತಿಯಿಂದ ಎಳು ಜಿಲ್ಲೆಗಳಲ್ಲಿ ಹಮ್ಮಿಕೊಳ್ಳಬೇಕಾದ ಮುಂದಿನ ರೊಪರೇಷಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಸಮಿತಿಯ ಗೌರವಾಧ್ಯಕ್ಷರಿಗೆ ಮತ್ತು ಸಂಸ್ಥಾಪಕ ಅಧ್ಯಕ್ಷರಿಗೆ ಸರ್ವಾನುಮತದಿಂದ ಅಧಿಕಾರ ನೀಡಲಾಯಿತು.
ಈ ಮಹತ್ವದ ಕೋರ್ ಕಮಿಟಿ ಸಭೆಯಲ್ಲಿ ಸಮಿತಿಯ ಪರಿಣಿತ ತಜ್ಘರಿರಾದ ಪ್ರೊ.ಆರ್.ಕೆ. ಹುಡಗಿ, ಪ್ರೊ. ಬಸವರಾಜ ಕುಮನ್ನೂರ, ಪ್ರೊ.ಬಸವರಾಜ ಗುಲಶೆಟ್ಟಿ, ಪ್ರೊ.ಶಂಕ್ರಪ್ಪ ಹತ್ತಿ,ಡಾ.ಮಾಜೀದ್ ದಾಗಿ, ಡಾ.ನಂದಗಾವ್, ರೌಫ ಖಾದ್ರಿ,ರಾಜೇ ಶಿವಶರಣಪ್ಪ, ಅಸ್ಲಂ ಚೌಂಗೆ ಇತರರು ಇದ್ದರು.