ಕಲಬುರಗಿ: ಕಲಬುರಗಿ ನಗರದ ಹೃದಯ ಭಾಗದಲ್ಲಿರುವ ವಾರ್ಡ್ ಸಂಖ್ಯೆ 4ರ ಘಾಬರೇ ಲೇಔಟ್ ಉದ್ಯಾನವನದಲ್ಲಿ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದಿಂದ 20 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಯೋಗಾ ಕೇಂದ್ರವನ್ನು ನಗರಾಭಿವರದ್ದಿ ಪ್ರಾಧಿಕಾರದ ಅಧ್ಯಕ್ಷ ಮಜರ್ ಆಲಂ ಖಾನ್ ಅವರು ಮಂಗಳವಾರ ಉದ್ಘಾಟಿಸಿ ನಿವಾಸಿಗಳಿಗೆ ಅರ್ಪಿಸಿದರು.
ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂ ಖಾನ್ ಅವರು ಅಧ್ಯಕ್ಷರಾದ ಮೇಲೆ ನೆನೆಗುದ್ದಿಗೆ ಬಿದ್ದಿದ್ದ ಈ ಯೋಜನೆಯನ್ನು ಕೈಗೆತ್ತಿಕೊಂಡು ತುಂಬಾ ಮುತುವರ್ಜಿ ವಹಿಸಿ ಮೂರು ತಿಂಗಳಲ್ಲಿಯೇ ಇದನ್ನು ನಿರ್ಮಿಸಿ ಸಾರ್ವಜನಿಕರಿಗೆ ಬಳಕೆಗೆ ಅರ್ಪಿಸುವ ಮೂಲಕ ಸ್ಥಳೀಯ ಬಡಾವಣೆ ನಿವಾಸಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಶಾಸಕ ಅಲ್ಲಮಪ್ರಭು ಪಾಟೀಲ ಅಧ್ಯಕ್ಷತೆಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಕಲಬುರಗಿ ಮಹಾನಗರ ಪಾಲಿಕೆಯ ಮಹಾಪೌರರಾದ ಯಲ್ಲಪ್ಪ ಎಸ್. ನಾಯ್ಕೋಡಿ, ಪಾಲಿಕೆ ಸದಸ್ಯೆ ನಿಂಗಮ್ಮ ಕಟ್ಟಿಮನಿ, ಪ್ರಾಧಿಕಾರದ ಆಯುಕ್ತ ಜಿ.ಎಸ್.ಮಳಗಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ಸುಭಾಷ ನಾಯಕ್, ಮುಖಂಡರಾದ ಡಾ. ಕಿರಣ ದೇಶಮುಖ, ಫಾರೂಕ ಹೆಚ್., ಲಿಂಗರಾಜ ತಾರಫೈಲ್, ಲಿಂಗರಾಜ ಕಣ್ಣಿ, ಸಂತೋಷ ಪಾಟೀಲ ದನ್ನೂರ, ಮಹಿಪಾಲರೆಡ್ಡಿ ಹಾಗೂ ಬಡಾವಣೆಯ ನಿವಾಸಿಗಳು ಉಪಸ್ಥಿತರಿದ್ದರು.
ಆರ್.ಓ ಪ್ಲ್ಯಾಂಟ್ ಉದ್ಘಾಟನೆ: ಇದೇ ಸಂದರ್ಭದಲ್ಲಿ ಘಾಬರೇ ಲೇಔಟ್ ಸಾರ್ವಜನಿಕ ಉದ್ಯಾನವನದಲ್ಲಿ ದಿ.ಬಾಪೂಗೌಡ ದರ್ಶನಾಪೂರ ಸ್ಮರಣಾರ್ಥಕವಾಗಿ ನೀರು ಶುದ್ದೀಕರಣ ಘಟಕವನ್ನು ಕೊಡುಗೆಯಾಗಿ ನೀಡಿರುವ ಸಣ್ಣ ಕೈಗಾರಿಕೆ ಸಚಿವ ಶರಣಬಸಪ್ಪ ದರ್ಶನಾಪೂರ ಅವರೇ ಖುದ್ದಾಗಿ ಉದ್ಘಾಟಿಸಿ ಸಾರ್ವಜನಿಕರಿಗೆ ಅರ್ಪಿಸಿದರು.