ಕಲಬುರಗಿ: ಅನೇಕ ವರ್ಷಗಳಿಂದ ಅಂಚೆ ಇಲಾಖೆಯು ಜನತೆಗೆ ಉತ್ತಮವಾದ ಸೇವೆಯನ್ನು ನೀಡುತ್ತಾ ಮೆಚ್ಚುಗೆಗೆ ಪಾತ್ರವಾಗಿದೆ. ಪ್ರಸ್ತುತವಾಗಿ ಅದು ಕೇವಲ ಪತ್ರ ವಿಲೆವಾರಿಗೆ ಮಾತ್ರ ಸೀಮಿತವಾಗದೆ, ಬ್ಯಾಂಕಿಂಗ್ ಸೇವೆ, ಶುಲ್ಕ, ಚಾಲನ್ ಸ್ವೀಕಾರ, ನಿವೃತ್ತಿ ವೇತನ, ಪೋಸ್ಟಲ್ ಸೇವೆಗಳು, ಪಿಂಚಣಿ ಯೋಜನೆ, ಸರ್ಕಾರದ ವಿವಿಧ ಯೋಜನೆಗಳನ್ನು ಜನರಿಗೆ ಮುಟ್ಟಿಸುವ ಸೇವೆ ಮಾಡುತ್ತಿದ್ದು, ತನ್ಮೂಲಕ ರಾಷ್ಟ್ರದ ಅಭಿವೃದ್ಧಿಗೆ ಅಂಚೆ ಇಲಾಖೆಯು ಅನನ್ಯವಾದ ಕೊಡುಗೆಯನ್ನು ನೀಡುತ್ತಿದೆ ಎಂದು ನಿವೃತ್ತ ಪೋಸ್ಟ್ ಮಾಸ್ಟರ್ ರೇವಣಸಿದ್ದಪ್ಪ ಪವಾಡಶೆಟ್ಟಿ ಹೇಳಿದರು.
ನಗರದ ಆಳಂದ ರಸ್ತೆಯ ಖಾದ್ರಿ ಚೌಕನಲ್ಲಿರುವ ‘ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಬುಧವಾರ ಏರ್ಪಡಿಸಲಾಗಿದ್ದ ‘ವಿಶ್ವ ಅಂಚೆ ದಿನಾಚರಣೆ’ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಅಂಚೆ ಇಲಾಖೆಯ ಪ್ರಧಾನ ಕಚೇರಿಯ ಪೋಸ್ಟಮಾನ್ ಮಹಾದೇವ ಎಸ್.ಚಿಪ್ಪರಕಟ್ಟಿ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಹಿಂದಿನ ಕಾಲದಲ್ಲಿ ರಸ್ತೆಗಳಿಲ್ಲದ ಸಂದರ್ಭದಲ್ಲಿ ಸಾಕಷ್ಟು ತೊಂದರೆ ಅನುಭವಿಸಿ ಮನೆಗೆ ಪತ್ರಗಳು, ಟೆಲಿಗ್ರಾಮ್, ಮನಿಆರ್ಡರ್ ಮುಟ್ಟಿಸುವ ಕಾರ್ಯಮಾಡಲಾಗಿದೆ. ಪ್ರಸ್ತುತವಾಗಿ ಸೌಲಭ್ಯಗಳು ದೊರೆಯುತ್ತಿವೆ. ಹಿಂದಿನಿಗಿಂತಲೂ ಈಗ ಸರ್ಕಾರದ ವಿವಿಧ ಯೋಜನೆಗಳ ಪ್ರಮಾಣ ಹೆಚ್ಚಾಗಿದ್ದು, ಅವುಗಳನ್ನು ಪಲಾನುಭವಿಗಳಿಗೆ ನೀಡಬೇಕಾಗಿರುವುದರಿಂದ ಕಾರ್ಯ ಹೆಚ್ಚಾಗಿದೆ. ಸರ್ಕಾರದ ಯೋಜನೆಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಉಪನ್ಯಾಸಕ ಎಚ್.ಬಿ.ಪಾಟೀಲ ಮಾತನಾಡುತ್ತಾ, ಇಲಾಖೆಯ ಯೋಜನೆಗಳು, ಕಾರ್ಯನಿರ್ವಹಣೆ ಬಗ್ಗೆ ಜನಜಾಗೃತಿ ಮೂಡಿಸುವುದು ದಿನಾಚರಣೆಯ ಉದ್ದೇಶವಾಗಿದೆ. ಪವಾಡಶೆಟ್ಟಿ ಅವರು ಒಂದೇ ಸ್ಥಳದಲ್ಲಿ ಯಾವುದೇ ಕಪ್ಪು ಚುಕ್ಕೆಯಿಲ್ಲದೆ ಸುದೀರ್ಘವಾಗಿ ನಾಲ್ಕು ದಶಕಗಳ ಕಾಲ ಸೇವೆ ಮಾಡುವುದು ಗಮನಿಸಿದರೆ, ಅವರಲ್ಲಿರುವ ಸೇವಾ ಮನೋಭಾವನೆ, ಕಾಯಕ ಪ್ರಜ್ಞೆ, ಸಮಾಜಕ್ಕೆ ಹಾಗೂ ನೌಕರ ವರ್ಗಕ್ಕೆ ಮಾದರಿಯಾಗಿದೆ. ಇಂದಿಗೂ ಕೂಡಾ ಆ ಭಾಗದಲ್ಲಿ ಎಲ್ಲಾ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. ಇಂತಹ ವ್ಯಕ್ತಿಯನ್ನು ಗುರುತಿಸಿ, ಪ್ರೋತ್ಸಾಹಿಸುವ ಕಾರ್ಯ ಮಾಡುವುದು ಅಗತ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ಶಿಕ್ಷಕಿಯರಾದ ಪ್ರಿಯಾಂಕ ಉಜಳಂಬಿ, ನಿಲೊಫರ್ ಶೇಖ್, ಪೂಜಾ ಜಮಾದಾರ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.