ಕಲಬುರಗಿ; ಮಹಾರಾಷ್ಟ್ರದ ನಾಗಪೂರ ದೀಕ್ಷಾ ಭೂಮಿ ಯಾತ್ರೆ ಕೈಗೊಳ್ಳಲು ಆನ್‌ಲೈನ್ ಮೂಲಕ ಹೆಸರು ನೊಂದಣಿ ಮಾಡಿಕೊಂಡಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರು ಮತ್ತು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಅನುಯಾಯಿಗಳಿಗೆ ನಾಗಪೂರಕ್ಕೆ ತೆರಳಲು ಇದೇ ಅಕ್ಟೋಬರ್ 11 ರಂದು ಮಧ್ಯಾಹ್ನ 2 ಗಂಟೆಗೆ ಜಿಲ್ಲೆಯ ವಿವಿಧ ಸ್ಥಳಗಳಿಂದ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಅಪರ ನಿರ್ದೇಶಕ ಎಂ.ಅಲ್ಲಾಭಕಷ್ ತಿಳಿಸಿದ್ದಾರೆ.
ಅಫಜಲಪೂರ, ಜೇವರ್ಗಿ, ಯಡ್ರಾಮಿ, ಕಮಲಾಪೂರ, ಸೇಡಂ ಹಾಗೂ ಕಲಬುರಗಿ, ತಾಲೂಕಿನ ಯಾತ್ರಾರ್ಥಿಗಳಿಗೆ ಅಂದು ಕಲಬುರಗಿಯ ಸೇಡಂ ರಸ್ತೆಯಲ್ಲಿರುವ ಬುದ್ಧವಿಹಾರದಿಂದ, ಆಳಂದ ತಾಲೂಕಿನ ಜನರಿಗೆ ಆಳಂದ ಪಟ್ಟಣದ ಸರಕಾರಿ ಪದವಿ ಪೂರ್ವ ಬಾಲಕರ ಕಾಲೇಜು ಆವರಣದಿಂದ ಹಾಗೂ ಚಿಂಚೋಳಿ, ಚಿತ್ತಾಪುರ, ಕಾಳಗಿ ಹಾಗೂ ಶಹಾಬಾದ ತಾಲೂಕಿನ ಯಾತ್ರಾರ್ಥಿಗಳಿಗೆ ಚಿತ್ತಾಪೂರ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಅವರಣದಿಂದ ಬಸ್ ಹೊರಡಲಿದೆ ಎಂದು ತಿಳಿಸಿದ್ದಾರೆ.
ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಿರುವ ಯಾತ್ರಾರ್ಥಿಗಳಿಗೆ ಮಾತ್ರ ಅಂದು ಮಧ್ಯಾಹ್ನ 2 ಗಂಟೆಗೆ ನಿಗದಿತ ಸ್ಥಳಕ್ಕೆ ಮಧ್ಯಾಹ್ನದ ಊಟ ಮುಗಿಸಿಕೊಂಡು ಹಾಗರಾಗಬೇಕು. ತಡವಾಗಿ ಬಂದರೆ ಯಾತ್ರೆಗೆ ಪರಿಗಣಿಸಲಾಗುವುದಿಲ್ಲ. ಇನ್ನು ಯಾತ್ರೆ ಸಂದರ್ಭದಲ್ಲಿ ವಾಹನ ಚಾಲಕರು ಹಾಗೂ ಅಧಿಕಾರಿಗಳೊಂದಿಗೆ ಯಾತ್ರಾರ್ಥಿಗಳು ಸಹಕರಿಸಬೇಕೆಂದು ಅವರು ಮನವಿ ಮಾಡಿದ್ದಾರೆ.