ಕಲಬುರಗಿ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ರಾಜ್ಯದ ಉಪ ಮುಖ್ಯಮಂತ್ರಿಯೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ್ ಕಾರಜೋಳ್ ಅವರು ಜಿಲ್ಲೆಗೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಜಿಲ್ಲೆಯ ಮುಖ್ಯ ಆಡಳಿತದ ಕೇಂದ್ರವಾಗಿರುವ ವಿಧಾನಸೌಧದ ಸೌಂದರ‍್ಯವನ್ನು ಬಿಜೆಪಿ ನಾಯಕರು ಜಾಹೀರಾತು ಭಿತ್ತಿ ಪತ್ರಗಳನ್ನು ದ್ವಾರದ ಗೋಡೆಗೆ ಅಂಟಿಸುವ ಮೂಲಕ ಹಾಳು ಮಾಡಿದ್ದಾರೆ. ಇದರಿಂದ ಸಾರ್ವಜನಿಕರು ಬಿಜೆಪಿ ನಾಯಕರಿಗೆ ಥೂ, ಛೀ ಎಂದು ಉಗುಳುವಂತಾಗಿದೆ.
ಹಾಗೆ ನೋಡಿದರೆ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ. ಕಲ್ಯಾಣ ಕರ್ನಾಟಕಕ್ಕೆ ಸೂಕ್ತ ರೀತಿಯಲ್ಲಿ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ದೊರಕಿಲ್ಲ. ಅದೂ ಈ ಭಾಗದ ಒಬ್ಬರು ಮಾತ್ರ ಸಚಿವರಾಗಿದ್ದಾರೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ರಚನೆಯಾಗಿಲ್ಲ. ೩೭೧(ಜೆ) ಅನುಷ್ಠಾನ ಸಚಿವ ಸಂಪುಟ ಉಪ ಸಮಿತಿಯ ಅಧ್ಯಕ್ಷರನ್ನಾಗಿ ರಾಜ್ಯದ ಉಪ ಮುಖ್ಯಮಂತ್ರಿ ಗೋವಿಂದ್ ಕಾರಜೋಳ್ ಅವರನ್ನು ನೇಮಕ ಮಾಡಲಾಗಿದೆ.
ನಿನ್ನೆಯಷ್ಟೇ ವಿವಿಧ ಅಕ್ಯಾಡೆಮಿಗಳಿಗೆ ನೇಮಕಾತಿ ಆಗಿದ್ದು, ಕಲ್ಯಾಣ ಕರ್ನಾಟಕವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಇಂತಹ ಅನ್ಯಾಯ ಆದರೂ ಸಹ ಜಿಲ್ಲಾ ಬಿಜೆಪಿ ನಾಯಕರು ಸೂಕ್ತ ನ್ಯಾಯಕ್ಕಾಗಿ ಒತ್ತಾಯಿಸದೇ ಅದೂ ಸರ್ಕಾರಿ ಕಚೇರಿಗಳನ್ನು ತಮ್ಮ ನಾಯಕರ ಮನವೊಲಿಸಲು ಕಟ್ಟಡಗಳ ಮೇಲೆ ಬಿಜೆಪಿಯ ಜಾಹೀರಾತು ಭಿತ್ತಿಪತ್ರಗಳನ್ನು ಅಂಟಿಸಿದ್ದು ಸಾರ್ವಜನಿಕರಿಗೆ ಆಕ್ರೋಶವನ್ನು ಹುಟ್ಟಿಸಿದೆ.
ವಿಧಾನಸೌಧದ ಮುಂಭಾಗದ ದ್ವಾರದ ತುಂಬೆಲ್ಲ ಜಾಹೀರಾತುಗಳನ್ನು ಭಿತ್ತಿಪತ್ರ ಅಂಟಿಸುವ ಮೂಲಕ ಅಂದವನ್ನು ಹದಗೆಡಿಸಲಾಗಿದೆ. ಅಷ್ಟೇ ಅಲ್ಲದೇ ಸಮಾಜ ಕಲ್ಯಾಣ ಇಲಾಖೆಯ ಕಟ್ಟಡಗಳೂ ಸೇರಿದಂತೆ ಅನೇಕ ಸರ್ಕಾರಿ ಕಟ್ಟಡಗಳ ಮೇಲೆ ಬಿಜೆಪಿಯ ಭಿತ್ತಿಪತ್ರಗಳು ರಾರಾಜಿಸುತ್ತಿವೆ.
ಈ ಹಿಂದೆ ಕಾಂಗ್ರೆಸ್ ಹಾಗೂ ಜಾತ್ಯಾತೀತ ಜನತಾದಳ ಪಕ್ಷಗಳು ಅಧಿಕಾರದಲ್ಲಿದ್ದಾಗ ಕೇವಲ ಪ್ರಮುಖ ಮಾರ್ಗ ಹಾಗೂ ವಿಧಾನಸೌಧದ ಮುಂಭಾಗದ ದ್ವಾರವನ್ನು ಹೊರತುಪಡಿಸಿ ಜಾಹೀರಾತುಗಳನ್ನು ಹಾಕುತ್ತಿದ್ದರು. ಬಿಜೆಪಿ ನಾಯಕರು ಜಿಲ್ಲಾಧಿಕಾರಿಗಳು ಹಾಗೂ ಪ್ರಾದೇಶಿಕ ಆಯುಕ್ತರು ಕಾರ್ಯನಿರ್ವಹಿಸುತ್ತಿರುವ ವಿಧಾನಸೌಧದ ದ್ವಾರವನ್ನೇ ದುರ್ಬಳಕೆ ಮಾಡಿಕೊಂಡಿದ್ದು ಆ ಪಕ್ಷದ ವರ್ಚಸ್ಸಿಗೆ ತೀವ್ರ ಧಕ್ಕೆಯುಂಟು ಮಾಡಿದ್ದಾರೆ.
ಪ್ರಾದೇಶಿಕ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳು ಅದೇ ದ್ವಾರದ ಮೂಲಕವೇ ಹೋದರೂ ಸಹ ಅಕ್ರಮವಾಗಿ ಹಾಕಲಾಗಿರುವ ಭಿತ್ತಿಪತ್ರಗಳನ್ನು ತೆರವುಗೊಳಿಸದೇ ಇರುವುದು ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ. ಮಹಾನಗರ ಪಾಲಿಕೆಯ ಆಯುಕ್ತರು ಕಟ್ಟುನಿಟ್ಟಿನ ಕ್ರಮಗಳಣ್ನು ಕೈಗೊಳ್ಳುವ ಮೂಲಕ ಅನಧಿಕೃತ ಜಾಹೀರಾತುಗಳು ಪ್ರದರ್ಶನವಾಗದಂತೆ ನೋಡಿಕೊಳ್ಳಬೇಕಾಗಿದೆ. ಸ್ಮಾರ್ಟ್ ಸಿಟಿ ಮಾಡಲಾಗದ ಬಿಜೆಪಿ ನಾಯಕರು ಇರುವ ನಗರದ ಸೌಂದರ್ಯವನ್ನು ಹಾಳು ಮಾಡುವಂತಹ ಹೀನ ಕೃತ್ಯಕ್ಕೆ ಮುಂದಾಗಿದ್ದು ಖಂಡನೀಯ.