ಶಹಾಬಾದ: ಇಂದಿನ ಜನತೆ ಆರೋಗ್ಯಯುತ, ಸದೃಢ-ಸಶಕ್ತರಾಗಿ ಸ್ವಾಭಿಮಾನದಿಂದ ಬದುಕಬೇಕೆಂದರೆ ಸ್ವಚ್ಛತೆಯ ಅಭ್ಯಾಸಗಳನ್ನು ಪ್ರತಿನಿತ್ಯ ರೂಢಿಸಿಕೊಂಡು, ಸ್ವಚ್ಛತೆಯನ್ನು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿಸಿಕೊಳ್ಳಬೇಕು
ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಕಾಡಾ ಅಧ್ಯಕ್ಷ ಡಾ.ರಶೀದ್ ಮರ್ಚಂಟ್ ಹೇಳಿದರು.
ಅವರು ನಗರಸಭೆ ವ್ಯಾಪ್ತಿಯ ಹಳೆಶಹಾಬಾದನ ಶಿಬರ್ ಕಟ್ಟಾ ಪ್ರದೇಶದಲ್ಲಿ ಅಶೋಕ ಲೈಲ್ಯಾಂಡ್ – ಲನಿರ್ಂಗ್ ಲಿಂಕ್ಸ್ ಫೌಂಡೇಷನ್ ಸಂಸ್ಥೆ ವತಿಯಿಂದ ಆಯೋಜಿಸಲಾದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆರೋಗ್ಯದ ಮೂಲವೇ ಸ್ವಚ್ಛತೆ ಮತ್ತು ನೈರ್ಮಲ್ಯವಾಗಿದ್ದು, ಇಂದಿನ ಯುವಕರು ಸಮೃದ್ಧ ಸಮಾಜವನ್ನು ನಿರ್ಮಿಸಲು ತಮ್ಮ ದಾಪುಗಾಲನ್ನು ಹಾಕಬೇಕು.’ಸ್ವಚ್ಛ ಮೇವ ಜಯತೇ’ ಎಂದು ಜಗತ್ತಿಗೆಲ್ಲ ಸಾರಬೇಕು. ಪ್ರತಿಯೊಬ್ಬರು ಸ್ವಚ್ಛತೆಗೆ ಮೊದಲ ಆದ್ಯತೆ ನೀಡಿದಾಗ ಮಾತ್ರ ಮಹಾತ್ಮ ಗಾಂಧೀಜಿಯವರ ಸ್ವಚ್ಛ ಭಾರತದ ಕನಸು ನನಸಾಗುತ್ತದೆ ಎಂದು ಹೇಳಿದರು.
ಸಮುದಾಯ ಆರೋಗ್ಯ ಕೇಂದ್ರದ ವೈದ್ಯರಾದ ಜಮೀಲ್ ಬೇಗ್ ಮಾತನಾಡಿ, ‘ಸ್ವಚ್ಛತೆಯನ್ನು ಸೇವೆ’ ಎಂದು ಪರಿಗಣಿಸಿ ಅದಕ್ಕೆ ಹೆಚ್ಚು ಒತ್ತು ನೀಡಿದ್ದ ಗಾಂಧೀಜಿ ಅವರು, ಸಾರ್ವಜನಿಕ ಸ್ವಚ್ಛತೆಯ ಮಹತ್ವವನ್ನು ಸಾರಿದ್ದರು. ಪ್ರತಿಯೊಬ್ಬರ ಮನದಲ್ಲೂ ಸ್ವ-ಆಸಕ್ತಿಯಿಂದ ಸ್ವಚ್ಛತೆಯ ಅರಿವು ಜಾಗೃತವಾದಾಗ ಸ್ವಚ್ಛ ಭಾರತದ ಕನಸು ನನಸಾಗುತ್ತz.ಇಲ್ಲಿನ ಪ್ರದೇಶದ ಮಕ್ಕಳು ಕಡು ಬಡವರಾಗಿದ್ದು, ಪೌಷ್ಠಿಕಾಂಶದ ಕೊರತೆಯಿಂದ ಬಳಲುತ್ತಿದ್ದಾರೆ. ಅವರ ಸಹಾಯಕ್ಕೆ ಸಂಘ -ಸಂಸ್ಥೆಗಳು ಮುಂದೆ ಬರಬೇಕು.ಆರೋಗ್ಯ ಇಲಾಖೆಯೂ ಸಹಕಾರ ನೀಡಲಿದೆ ಎಂದು ಹೇಳಿದರು.
ಪಿ.ಎ.ಎಸ್.ಡಿ ಮಹೇಶ.ಎಮ್.ತೆಗ್ಗೆಳ್ಳಿ ಮಾತನಾಡಿ,ಅವರು ಸ್ವಚ್ಛತೆ ಜೀವನದಲ್ಲಿ ಬಹಳ ಮುಖ್ಯ ಮತ್ತು ಮಹತ್ವದ ಪಾತ್ರ ವಹಿಸುತ್ತದೆ ಆದ್ದರಿಂದ ಎಲ್ಲರೂ ವೈಯಕ್ತಿಕ ಸ್ವಚ್ಛತೆ ಜೊತೆಗೆ ಸಮುದಾಯ ಮಟ್ಟದಲ್ಲಿಯೂ ಸ್ವಚ್ಛತೆ ಹೊಂದುವುದು ಅವಶ್ಯಕ ಎಂದು ಹೇಳಿದರು.
ನಗರಸಭೆಯ ಅಧ್ಯಕ್ಷರಾದ ಚಂಪಾಬಾಯಿ ರಾಜು ಮೇಸ್ತ್ರಿ ಸಸಿಗೆ ನೀರುಣಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಗರಸಭೆಯ ಸದಸ್ಯ ಮಲ್ಲಿಕಾರ್ಜುನ ವಾಲಿ, ನಗರಸಭೆಯ ಆರೋಗ್ಯ ನಿರೀಕ್ಷಕ ಮೈಹಿನೋದ್ದಿನ್ ಇನಾಮದಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಸಂಗಮ್ಮ ಪಾಟೀಲ, ಯುವ ಉದ್ಯಮಿ ಧನರಾಜ ಪವಾರ್, ರಾಜು ಸಾಲುಂಕೆ, ಎಸ್.ಡಿ.ಎಮ್.ಸಿ. ಅಧ್ಯಕ್ಷರು, ಎಲ್.ಎಫ್.ಎಫ್ ನ ಎಸ್.ಆರ್.ಪಿ, ಪಿ.ಎ.ಎಸ್.ಡಿ, ಆರ್.ಪಿ,ಎಸ್.ಎಫ್ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
ಎಲ್‍ಎಲ್‍ಎಫ್‍ನ ಎಸ್.ಆರ್.ಪಿ. ಸುವರ್ಣ ಪಾಟೀಲ್ ಆರ್.ಟಿ.ಎಸ್ ರೋಡ್ ಟೂ ಸ್ಕೂಲ್ ಎಲ್‍ಎಲ್‍ಎಫ್ ಕಾರ್ಯದ ಬಗ್ಗೆ ಹಾಗೂ ಶಾಲೆಯಲ್ಲಿ ಆರ್‍ಪಿ ಅವರ ಪಾಠ ಬೋಧನೆ, ಶೈಕ್ಷಣಿಕ ಚಟುವಟಿಕೆಗಳು, ಆರ್ಟ್ ಅಂಡ್ ಕ್ರಾಫ್ಟ್ ಬಗ್ಗೆ ತಿಳಿ ಹೇಳಿದರು.
ಎ.ಎಲ್ ಮತ್ತು ಎಲ್.ಎಲ್.ಎಫ್ ನ ಶರಣಯ್ಯ ಹಿರೇಮಠ ನಿರೂಪಿಸಿದರು, ಆರ್.ಪಿ ಭಾಗ್ಯಶ್ರೀ ಸ್ವಾಗತಿಸಿ, ವಂದಿಸಿದರು.