ಕಲಬುರಗಿ: ಗರಿ ಗರಿ ಬಟ್ಟೆ ಹಾಕಿದವರೂ ಶಿಕ್ಷಕರಾಗುವುದಿಲ್ಲ, ವಿದ್ಯಾರ್ಥಿಗಳ ಜ್ಞಾನದ ಇತಿಮಿತಿಯನ್ನು ಅರಿತು ಪಾಠ ಮಾಡುವವರೇ ನಿಜವಾದ ಶಿಕ್ಷಕರು ಎಂದು ಸೋಲಾಪುರ ಶ್ರೀ ಯೋಗಿರಾಜೇಂದ್ರ ಶಿವಾಚಾರ್ಯರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಶಾಂತಯ್ಯ ಸ್ವಾಮಿ ಹೇಳಿದರು.
ನಗರದ ಒಕ್ಕಲಗೇರಾ ಬಡಾವಣೆಯಲ್ಲಿ ಶ್ರೀ ವೀರತಪಸ್ವಿ ಚನ್ನವೀರ ಶಿವಾಚಾರ್ಯ ಪ್ರೌಢಶಾಲೆಯ ಮುಖ್ಯ ಗುರುಗಳಾದ ಶ್ರೀಮತಿ ಚಂದ್ರಕಲಾ ಬಸವರಾಜ ಉಕಲಿ ಅವರ ಸೇವಾ ನಿವೃತ್ತಿ ಕಾರ್ಯಕ್ರಮವನ್ನು ಶಾಲಾ ಆವರಣದಲ್ಲಿ ಹಮ್ಮಿಕೊಂಡಿರುವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳು ತಪ್ಪಿ ನಡೆದರೆ ತಿದ್ದಬೇಕು, ಒಳ್ಳೆಯ ಕಾರ್ಯ ಮಾಡಿದರೆ ಪ್ರೋತ್ಸಾಹಿಸಬೇಕು, ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಹೆಕ್ಕಿ ತೆಗೆಯಬೇಕು, ಕೆತ್ತಿ ವಿಗ್ರಹವನ್ನಾಗಿ ಮಾಡಬೇಕು.
ಉಜ್ಜಿ ಹೊಳಪನ್ನು ನೀಡಿದವರೆ ನಿಜವಾದ ಶಿಲ್ಪಿ ಶಿಕ್ಷಕ ಇಂತಹ ಶಿಕ್ಷಕರು ನಮ್ಮ ಸಂಸ್ಥೆಯಲ್ಲಿ ಆ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ. ಶಿಕ್ಷಕರು ಸಂಬಳಕ್ಕಾಗಿ ದುಡಿಯದೇ ಕಾಯಕವೆಂದು ಅರಿತು ದುಡಿದವನೇ ನಿಜವಾದ ಶಿಕ್ಷಕ ಎಂದು ಮಾರ್ಮಿಕವಾಗಿ ನುಡಿದರು.
ಮುಖ್ಯ ಅತಿಥಿಗಳಾದ ಸಂಸ್ಥೆಯ ಕಲಬುರ್ಗಿ ಜಿಲ್ಲಾ ಕಾರ್ಯದರ್ಶಿಗಳಾದ ಓಂಕಾರೇಶ್ವರ ಘೊಸಿಮಠ ಮಾತನಾಡುತ್ತಾ ನಮ್ಮ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ಅಕ್ಷರದೊಂದಿಗೆ ಸಂಸ್ಕಾರದ ಬದುಕು ಸಾಗಿಸುತ್ತಾ ಸಮಾಜದಲ್ಲಿ ಆದರ್ಶ ವ್ಯಕ್ತಿಗಳಾಗಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ವಿದ್ಯಾರ್ಥಿಯಾದ ನ್ಯಾಯವಾದಿ ಹಣಮಂತರಾಯ ಅಟ್ಟೂರ ಮಾತನಾಡುತ್ತಾ ಈ ಸಂಸ್ಥೆಯಲ್ಲಿ ಅಭ್ಯಾಸ ಮಾಡಿದ ವಿದ್ಯಾರ್ಥಿಗಳು ಬಹಳ ಉನ್ನತ ಹುದ್ದೆಯಲ್ಲಿ ಇರದಿದ್ದರೂ ಮಾನವೀಯ ಮೌಲ್ಯಗಳು ಜೀವನದಲ್ಲಿ ಅಳವಡಿಸಿಕೊಂಡು ಉನ್ನತವಾದ ಬದುಕು ಸಾಗಿಸುತ್ತಿದ್ದಾರೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಸಿ ಆರ್ ಸಿ ಅನಿತಾ ಕರ್, ಉದ್ದಿಮೆದಾರರಾದ ಪಂಪಣಗೌಡ ಪಾಟೀಲ, ಬಸವರಾಜ ಉಪ್ಪಿನ, ಚಂದ್ರಶೇಖರ ಚಂದ್ರಕಿ ಮಠ, ಮಹಾಂತೇಶ ಕೌಲಗಿ, ರಾಮ ಡಾಲೆ, ಯಮನಪ್ಪಾ ಹೊಟಗೊಂಡ, ಶಿವಾನಂದ ಬಿರಾದಾರ, ಸಿದ್ದಣ್ಣ ಸಜ್ಜನ, ಚೆನ್ನಮಲ್ಲಯ್ಯ ಆಗಮಿಸಿದರು. ಕಾರ್ಯಕ್ರಮದಲ್ಲಿ ಮಾಜಿ ವಿದ್ಯಾರ್ಥಿಗಳಾದ ಶಿವಕುಮಾರ ಕೊಂಬಾಡೆ, ವಿಷ್ಣು ಪಾಟೀಲ ಸೇರಿದಂತೆ ಪ್ರೌಢಶಾಲೆಯ ಹಾಗೂ ಪ್ರಾಥಮಿಕ ಶಾಲೆ ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸಾಕ್ಷಿ ಹಾಗೂ ರಾಜೇಶ್ವರಿ ಪ್ರಾರ್ಥಿಸಿದರು. ವಿಜಯಲಕ್ಷ್ಮಿ ಪೂಜಾರಿ ನಿರೂಪಿಸಿದರು. ಶಿವಾನಂದ ಸಾಗರ ಸ್ವಾಗತಿಸಿದರು.