ಕಲ್ಯಾಣ ಪಥ ರಸ್ತೆ ನಿರ್ಮಾಣಕ್ಕೆ ಶೀಘ್ರ ಅಡಿಗಲ್ಲು: ಸಚಿವ ಪ್ರಿಯಾಂಕ್ ಖರ್ಗೆ

0
67

ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶದ ಗ್ರಾಮೀಣ ರಸ್ತೆ ಸುಧಾರಣೆ ನಿಟ್ಟಿನಲ್ಲಿ ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ಘೋಷಿಸರುವಂತೆ ಕಲ್ಯಾಣ ಪಥ ಯೋಜನೆಯಡಿ 1,000 ಕೋಟಿ ರೂ. ವೆಚ್ಚದಲ್ಲಿ ರಸ್ತೆ ನಿರ್ಮಾಣ ಕಾರ್ಯಕ್ಕೆ ಇನ್ನು 15 ದಿನದಲ್ಲಿ ಚಾಲನೆ ನೀಡಲಾಗುವುದು ಎಂದು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಗುರುವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಈಗಾಗಲೆ ಎಲ್ಲೆಲ್ಲಿ ರಸ್ತೆ ನಿರ್ಮಿಸಬೇಕೆಂದು ಗುರುತಿಸಿ ಟೆಂಡರ್ ಸಹ ಕರೆಯಲಾಗಿದೆ. ಶೀಘ್ರವೆ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ ಎಂದರು.

Contact Your\'s Advertisement; 9902492681

ಇದಲ್ಲದೆ ಪ್ರಗತಿ ಪಥ ಯೋಜನೆಯಡಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 30-40 ಕಿ.ಮೀ. ರಸ್ತೆ ಕಾಮಗಾರಿ ಸಹ ಆರಂಭವಾಗಲಿದೆ. ಇದರ ಜೊತೆಗೆ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿಲ್ಲಿಯೂ ರಸ್ತೆ ನಿರ್ಮಿಸುತ್ತಿರುವುದರಿಂದ ಕಲ್ಯಾಣ ಕರ್ನಾಟಕ ಪ್ರದೇಶ ಭಾಗದ ಗ್ರಾಮೀಣ ಭಾಗದಲ್ಲಿ ಸಆರಿಗೆ ಸಂಪರ್ಕ ಉತ್ತಮಗೊಳ್ಳಲಿದೆ ಎಂದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ತಲಾ 30 ಲಕ್ಷ ರೂ. ವೆಚ್ಚದಲ್ಲಿ ಸುಮಾರು 400 ಸಮುದಾಯ ಶೌಚಾಲಯ ಆರ್.ಡಿ.ಪಿ.ಆರ್. ಇಲಾಖೆಯಿಂದ ನಿರ್ಮಿಸಲಾಗುತ್ತಿದೆ. ಇನ್ನು ಕಲಬುರಗಿ ನಗರದಲ್ಲಿಯೂ ಬೇಡಿಕೆ ಅನಗುಣವಾಗಿ ಸಮುದಾಯ ಶೌಚಾಲಯ ನಿರ್ಮಿಸಲಾಗುವುದು ಎಂದು ಪತ್ರಕರ್ತರ ಪ್ರಶ್ನೆಗೆ ಸಚಿವರು ಉತ್ತರಿಸಿದರು.

ಕಲಬುರಗಿ ನಗರದಲ್ಲಿ 24 ಗಂಟೆ ನಿರಂತರ ಕುಡಿಯುವ ನೀರು ಪೂರೈಕೆ ಯೋಜನೆ ಆಮೆಗತಿಯಲ್ಲಿ ಸಾಗುತ್ತಿರುವುದರ ಕುರಿತು ಪತ್ರಕರ್ತರು ಸಚಿವರ ಗಮನ ಸೆಳೆದಾಗ, ಈಗಾಗಲೇ ಎಲ್ & ಟಿ ಕಂಪನಿ ಹಿರಿಯ ಅಧಿಕಾರಿಗಳೊಂದಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ಗೋಯೆಲ್ ಅವರು ಚರ್ಚಿಸಿ ಕೆಲಸಕ್ಕೆ ವೇಗ ನೀಡಲು ಸೂಚಿಸಿದ್ದಾರೆ. ಇಷ್ಟಾಗಿಯೂ ಕೆಲಸದಲ್ಲಿ ವೇಗ ಕಂಡು ಬಾರದಿದ್ದಲ್ಲಿ ಸದರಿ ಸಂಸ್ಥೆ ಮೇಲೆ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಉತ್ತರಿಸಿದರು.

*ವಕ್ಫ್ ಗಲಾಟೆ,ರೈತರು ಆತಂಕ ಪಡಬೇಕಿಲ್ಲ:*

ಜಿಲ್ಲೆಯಲ್ಲಿ ರೈತರಿಗೆ ವಕ್ಫ್ ಆಸ್ತಿ ಸಂಬಂಧ ತಹಶೀಲ್ದಾರ ಕಚೇರಿಯಿಂದ ನೋಟಿಸ್ ಜಾರಿ ಕುರಿತು ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ ಅವರು, ಇದು ಸಹಜ ಕಾನೂನು ಪ್ರಕ್ರಿಯೆಯಾಗಿದೆ. ರೈತರಿಂದ ಭೂಮಿ ಕಸಿಯುವ ಹುನ್ನಾರ ಅಲ್ಲ ಎಂದು ಸ್ಪಷ್ಟಪಡಿಸಿದ ಅವರು ವಿರೋಧ ಪಕ್ಷಗಳು ಅನಗತ್ಯ ಈ ವಿಷಯದಲ್ಲಿ ರಾಜಕೀಯ ಮಾಡುತ್ತಿವೆ. ಇಂತಹ ಪ್ರಕರಣಗಳಲ್ಲಿ ಕಲಬುರಗಿ ಜಿಲ್ಲೆಯಲ್ಲಿ 1,630 ಧಾರ್ಮಿಕ ಸ್ಥಳಗಳ ಪೈಕಿ 1,433 ಸ್ಥಳಗಳನ್ನು ಸರ್ವೇ ಕೈಗೊಂಡು ಧಾರ್ಮಿಕ ಸ್ಥಳಗಳನ್ನಾಗಿಯೇ ನಮ್ಮ ಸರ್ಕಾರ ಉಳಿಸಿಕೊಳ್ಳುವ ಮೂಲಕ ಅವುಗಳನ್ನು ರಕ್ಷಿಸಿದೆ. ಈ ವಿಚಾರದಲ್ಲಿ ಈಗಾಗಲೆ ಮುಖ್ಯಮಂತ್ರಿಗಳು ರೈತರಿಗೆ ಅಭಯ ನೀಡಿದ್ದು, ರೈತರು ಆತಂಕ ಪಡುವ ಅವಶ್ಯಕತೆಯಿಲ್ಲ ಎಂದು ಪುನರುಚ್ಚಿಸಿದರು.

*ನ.4 ರಿಂದ ಹತ್ತಿ ಖರೀದಿ:*

ಬೆಂಬಲ ಬೆಲೆ ಯೋಜನೆಯಡಿ ಕಾಟನ್ ಕಾಪೋರೇಷನ್ ಆಫ್ ಇಂಡಿಯಾ ಸಹಕಾರದೊಂದಿಗೆ ಹತ್ತಿ ಖರೀದಿಗೆ ಬರುವ ನವೆಂಬರ್ 4 ರಿಂದ ಜಿಲ್ಲೆಯ ಕಲಬುರಗಿ ತಾಲೂಕಿನಲ್ಲಿ 3, ಜೇವರ್ಗಿಯಲ್ಲಿ 5 ಹಾಗೂ ಅಫಜಲಪೂರ ತಾಲೂಕಿನಲ್ಲಿ 4 ಸೇರಿ ಒಟ್ಟು 12 ಹತ್ತಿ ಖರೀದಿ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಪ್ರಸ್ತುತ ಮಾರುಕಟ್ಟೆಯಲಿ ಪ್ರತಿ ಕ್ವಿಂಟಾಲ್‌ಗೆ 6,993 ರೂ. ಗಳಿದ್ದು, ಎಂ.ಎಸ್.ಪಿ. ದರದಲ್ಲಿ ರೈತರಿಗೆ ಪ್ರತಿ ಕ್ವಿಂಟಾಲ್‌ಗೆ 7,521 ರೂ. ನೀಡಿ ಖರೀದಿಸಲಾಗುತ್ತಿದೆ. ಜಿಲ್ಲೆಯ ರೈತ ಬಾಂಧವರು ಇದರ ಲಾಭ ಪಡೆಯಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಮನವಿ ಮಾಡಿದರು.

*ಕಲಬುರಗಿ ರೊಟ್ಟಿ ಕ್ಯೂ-ಆರ್ ಕೋಡ್ ಬಿಡುಗಡೆ:*

“ಕಲಬುರಗಿ ರೊಟ್ಟಿ” ಬ್ರಾಂಡ್‌ನಲ್ಲಿ ಕಲಬುರಗಿ ಬಿಳಿ ಜೋಳ ರೊಟ್ಟಿ, ಸಜ್ಜೆ ರೊಟ್ಟಿ ಹಾಗೂ ದಪಾಟಿಗಳನ್ನು ಮಾರಾಟ ಮಾಡಲು ಈಗಾಗಲೆ www.kalaburagirotti.com ಹೆಸರಿನ ಅಂತರ್ಜಾಲ ತೆರೆದು ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿದ್ದು, ಅದರ ಕ್ಯೂ-ಆರ್ ಕೋಡ್ ಸಚಿವ ಪ್ರಿಯಾಂಕ್ ಖರ್ಗೆ ಸೇರಿ ಗಣ್ಯರು ಬಿಡುಗಡೆಗೊಳಿಸಿದರು.

ಇದಲ್ಲದೆ ಕೆ.ಕೆ.ಆರ್.ಡಿ.ಬಿ. ಮಂಡಳಿಯ ನೆರವಿನೊಂದಿಗೆ ಸ್ಥಾಪಿಸಲಾಗಿರುವ 9 ಬಾಡಿಗೆ ಅಧಾರಿತ ಸೇವಾ ಕೇಂದ್ರದಲ್ಲಿನ ಯಂತ್ರೋಪಕರಣಗಳನ್ನು ಹಾಗೂ ಡ್ರೋಣ್ ಸಿಂಪರಣಾಗಳನ್ನು ಅನ್ನದಾತರು ಮೋಬೈಲ್ ಮೂಲಕವೇ ಯಂತ್ರೋಪಕರಣಗಳ ಬೇಡಿಕೆ ಸಲ್ಲಿಸಲು ಸಿದ್ದಪಡಿಸಲಾದ ಕ್ಯೂಆರ್ ಕೋಡ್ ಮತ್ತು ಕಲಬುರಗಿ ಕೃಷಿ ಇಲಾಖೆಯು ರೈತರಿಗೆ ತಾಂತ್ರಿಕ ಹಾಗೂ ಇಲಾಖೆಯ ವಿವಿಧ ಯೋಜನೆಗಳ ಮಾಹಿತಿ ನೀಡಲು ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ಇನ್ಸ್ಟಾಗ್ರಾಂ, ಯೂಟ್ಯೂಬ್, ಟ್ವಿಟರ್(ಎಕ್ಸ್)ನಲ್ಲಿ ಖಾತೆ ತೆರೆದಿದ್ದು, ಅದರ ಕ್ಯೂಆರ್ ಕೋಡ್ ಸಹ ಇಂದಿಲ್ಲಿ ಬಿಡುಗಡೆಗೊಳಿಸಲಾಯಿತು.

ಶಾಸಕ ಅಲ್ಲಮಪ್ರಭು ಪಾಟೀಲ, ವಿಧಾನ ಪರಿಷತ್ ಶಾಸಕರಾದ ತಿಪ್ಪಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ, ಕಲಬುರಗಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂ ಖಾನ್, ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ನಗರ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ, ಎಸ್.ಪಿ.ಅಡ್ಡೂರು ಶ್ರೀನಿವಾಸಲು, ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ದೇವಿದಾಸ್, ಕಲಬುರಗಿ ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸುಮಿತ್ ಪಾಟೀಲ, ಜೆಸ್ಕಾಂ ಎಂ.ಡಿ. ರವೀಂದ್ರ, ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here