ಕಲಬುರಗಿ: ವೈಯಕ್ತಿಕ ಓರೆಕೋರೆಗಳನ್ನು ತಿದ್ದಿಕೊಂಡು ಹೊಂದಾಣಿಕೆಯ ಮನೋಭಾವವನ್ನು ಬೆಳೆಸಿಕೊಳ್ಳಲು ಕ್ರೀಡೆ ನೆರವಾಗುತ್ತದೆ. ದೈಹಿಕ, ಮಾನಸಿಕ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಈ ಮೂಲಕ ಧೈರ್ಯ ಮತ್ತು ಸಾಹಸ ಗುಣಗಳನ್ನು ವೃದ್ಧಿಸುತ್ತದೆ ಎಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ ನಮೋಶಿ ಹೇಳಿದರು.
ಅವರು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಸಿಬ್ಬಂದಿಗಳ 2024 ನೇ ಸಾಲಿನ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡುತ್ತಿದ್ದರು.
ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಕ್ರೀಡೆಗಳಿಗೆ ಹೆಚ್ಚಿನ ಮಹತ್ವವನ್ನು ನೀಡಿ ಅತ್ಯುತ್ತಮ ಕ್ರೀಡಾ ಪಟುಗಳನ್ನು ತಯಾರಿಸುವ ಜವಾಬ್ದಾರಿ ನಮ್ಮ ಕ್ರೀಡಾ ಶಿಕ್ಷಕರ ಮೇಲಿದೆ ಎಂದು ಹೇಳಿದರು.
ಕ್ರೀಡಾಕ್ಷೇತ್ರವು ಇಚ್ಛಾಶಕ್ತಿ, ಏಕಾಗ್ರತೆ ಮತ್ತು ಸ್ಪರ್ಧಾ ಮನೋಭಾವವನ್ನು ಬೆಳೆಸುತ್ತದೆ. ನಿರಂತರವಾದ ಕಠಿಣ ಪ್ರಯತ್ನದಿಂದ ಮಾತ್ರ ಸಾಧನೆ ಮಾಡಲು ಸಾಧ್ಯ. ಸೋಲು ಕೊನೆಯಲ್ಲ. ಸೋಲೇ ಗೆಲುವಿನ ಸೋಪಾನ. ಕ್ರೀಡೆಯಲ್ಲಿ ಪರಿಣಿತರಾದವರಿಗೆ ಶ್ಯೆಕ್ಷಣಿಕ ಕ್ಷೇತ್ರದಲ್ಲೂ ಹಲವಾರು ಅವಕಾಶಗಳಿವೆ. ಭಾಗವಹಿಸಿದ ಎಲ್ಲಾ ಕ್ರೀಡಾಪಟುಗಳಿಗೆ ಉಜ್ವಲ ಭವಿಷ್ಯವಿದೆ. ಕ್ರೀಡೆಯ ಮುಂದಿನ ಹಂತದ ಸ್ಪರ್ಧೆಗಳಿಗೆ ತಯಾರಿಯನ್ನು ಮಾಡಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ನಮ್ಮ ಸಂಸ್ಥೆಯ ಎಲ್ಲಾ ಶಾಲಾ ಕಾಲೇಜುಗಳಲ್ಲಿ 3 ರಿಂದ 4 ಕ್ರೀಡೆಗಳನ್ನು ಆಯ್ದುಕೊಂಡು ಅವುಗಳಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಬೇಕೆಂದು ಹೇಳಿದರು. ಖೋ ಖೋ , ಕಬಡ್ಡಿ, ವಾಲಿಬಾಲ್ ಕ್ರೀಡೆಗಳಿಗೆ ಹೆಚ್ಚಿನ ಮಹತ್ವವನ್ನು ನೀಡಬೇಕೆಂದು ಹೇಳಿದರು
ಕ್ರೀಡೆಯಿಂದ ಶಿಸ್ತು, ಸಂಯಮ ಮತ್ತು ಆರೋಗ್ಯ ವೃದ್ಧಿಸುತ್ತದೆ. ಕ್ರೀಡೆಯಲ್ಲಿ ಗೆಲ್ಲಲು ಉತ್ತಮ ತರಬೇತಿ ಅಗತ್ಯ. ಪರಿಣತಿಯನ್ನು ಗಳಿಸಲು ಸತತ ಸಾಧನೆ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ರಾಜಾ ಭೀಮಳ್ಳಿ , ಕಾರ್ಯದರ್ಶಿಗಳಾದ ಉದಯಕುಮಾರ್ ಚಿಂಚೋಳಿ, ಕ್ರಿಡಾಕೂಟದ ಸಂಚಾಲಕರು ಆಡಳಿತ ಮಂಡಳಿ ಸದಸ್ಯರಾದ ಅನಿಲಕುಮಾರ ಮರಗೋಳ, ಡಾ ಅನಿಲಕುಮಾರ ಪಟ್ಟಣ, ಸಾಯಿನಾಥ ಪಾಟೀಲ್,ಡಾ ಶರಣಬಸಪ್ಪ ಹರವಾಳ, ಡಾ ಮಹಾದೇವಪ್ಪ ರಾಂಪೂರೆ, ಡಾ ಕಿರಣ್ ದೇಶಮುಖ್, ನಾಗಣ್ಣ ಘಂಟಿ ಕ್ರೀಡಾ ಕಾರ್ಯದರ್ಶಿಗಳಾದ ಡಾ ವಿಶ್ವನಾಥ್ ದೇವರಮನಿ, ಕಿರಣ್ ಕುಮಾರ್ ಹಾಲಪ್ಪ ಗೋಳ ಕಾರ್ಯಕ್ರಮ ನಿರೂಪಣೆಯನ್ನು ಡಾ ಸುಭಾಷ್ ದೊಡಮನಿ ಮಾಡಿದರು. ಡಾ ಶಂಕ್ರಪ್ಪ ಕಲಬುರ್ಗಿ ಸ್ವಾಗತಿಸಿ ವಂದಿಸಿದರು.