ಕಲಬುರಗಿ: ಪ್ರಸಕ್ತ ಹಂಗಾಮಿನ ಕಬ್ಬು ನುರಿಸುವ ಮೊದಲು ಕಬ್ಬಿಗೆ ದರ ನಿಗದಿಪಡಿಸುವುದು ಸೇರಿದಂತೆ ಅನೇಕ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಮಾಜಿ ಶಾಸಕ ಸುಭಾಷ ಗುತ್ತೇದಾರ ನೇತೃತ್ವದ ರೈತರ ನಿಯೋಗ ಎನ್‍ಎಸ್‍ಎಲ್ ಸಕ್ಕರೆ ಕಾರ್ಖಾನೆಯ ಉಪಾಧ್ಯಕ್ಷರನ್ನು ಭೇಟಿಯಾಗಿ ಮಾತುಕತೆ ನಡೆಸಿತು.
ಶನಿವಾರ ಕಾರ್ಖಾನೆಗೆ ಭೇಟಿ ನೀಡಿ ಉಪಾಧ್ಯಕ್ಷರನ್ನು ಭೇಟಿಯಾದ ನಿಯೋಗವು ಕಾರ್ಖಾನೆಯ ವ್ಯಾಪ್ತಿಯ 40 ಕೀ.ಮೀ ಒಳಗಿನ ಎಲ್ಲ ರೈತರ ಕಬ್ಬು ನುರಿಸಬೇಕು ಅಲ್ಲದೇ ಕಟಾವು ಮಾಡಲು ರೈತರಿಂದ ಮೊದಲು ಪಡೆಯುವ ಹಣವನ್ನು ಪಡೆಯಬಾರದು ಎಂದು ತಿಳಿಸಿದರು.
ಹೊರರಾಜ್ಯದಿಂದ ಕಬ್ಬು ತೆಗೆದುಕೊಳ್ಳುವುದು ನಿಲ್ಲಿಸಬೇಕು. ಎನ್‍ಎಸ್‍ಎಲ್ ಸಕ್ಕರೆ ಕಾರ್ಖಾನೆಯವರು ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆಯಡಿ ಕೈಗೊಳ್ಳುವ ಕಾಮಗಾರಿಗಳನ್ನು ಕಾರ್ಖಾನೆಯ ವ್ಯಾಪ್ತಿಯಲ್ಲಿ ರೈತರಿಗೆ ಅನೂಕೂಲವಾಗುವಂತೆ ಕೈಗೊಳ್ಳಬೇಕು. ಯಾವ ರೈತರ ಕಬ್ಬನ್ನು ಉಳಿಸಿಕೊಳ್ಳಬಾರದು ಎಂದು ಹೇಳಿದರು.
ನಿಯೋಗದಲ್ಲಿ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ನಾಗರಾಜ ಶೇಗಜಿ, ಮುಖಂಡರಾದ ಅಶೋಕ ಗುತ್ತೆದಾರ, ಕಾರ್ಖಾನೆ ನಿರ್ದೇಶಕ ಶಂಕರ ಸೋಮಾ, ಈರಣ್ಣ ಪಾಟೀಲ, ಶರಣಬಸಪ್ಪ ಮಲಶೆಟ್ಟಿ, ಬಸವರಾಜ ಮಲಶೆಟ್ಟಿ, ಗುಂಡಪ್ಪ ಪೂಜಾರಿ, ಲಕ್ಷ್ಮೀಕಾಂತ ಮಾಲಿಪಾಟೀಲ, ಬಸವರಾಜ ಕೊಡಲಹಂಗರ್ಗಾ, ಕಲ್ಯಾಣಿ ದೊಡ್ಡಮನಿ ಸೇರಿದಂತೆ ಇತರರು ಇದ್ದರು.