ಕಲಬುರಗಿ ಕಸಾಪದಿಂದ ಅದ್ಧೂರಿ ಜನಪದ ಸಾಹಿತ್ಯ ಸಮ್ಮೇಳನ

0
17

ಕಲಬುರಗಿ: ಜನ ಜೀವನದಲ್ಲಿ ಹಾಸು ಹೊಕ್ಕಾಗಿರುವ ಜನಪದ ಸಾಹಿತ್ಯದಿಂದ ಸಂಸ್ಕಾರಯುತ ಜೀವನ ಕಟ್ಟಿ ಕೊಳ್ಳಲು ಸಾಧ್ಯ ಎಂದು ಬೆಂಗಳೂರಿನ ನಗರ ಅಪರಾಧ ವಿಭಾಗದ ಆರಕ್ಷಕ ನಿರೀಕ್ಷಕರೂ ಆದ ಜನಪದ ವಿದ್ವಾಂಸ ಜ್ಯೋತಿರ್ಲಿಂಗ ಹೊನ್ನಕಟ್ಟಿ ಹೇಳಿದರು.

ಸಂಗೀತ ಕಲಾವಿದ ಭಗವಂತಪ್ಪ ಹೂಗಾರ ದೇಸಾಯಿ ಕಲ್ಲೂರ ವೇದಿಕೆಯಡಿಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಇದೇ ಮೊದಲ ಬಾರಿಗೆ ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ರವಿವಾರ ಹಮ್ಮಿಕೊಂಡಿರುವ ಜಿಲ್ಲಾ ಪ್ರಥಮ ಜನಪದ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದು ನಾವೆಲ್ಲ ಆಧುನಿಕ ಭರಾಟೆ ಹಾಗೂ ಒತ್ತಡದ ಬದುಕಿನಲ್ಲಿ ಬದುಕು ನಡೆಸುತ್ತಿದ್ದೇವೆ. ಇಂಥ ಸಂದಿಗ್ಧ ಸ್ಥಿತಿಯಲ್ಲಿ ನಮ್ಮ ಮಾನವೀಯ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದ್ದೇವೆ.

Contact Your\'s Advertisement; 9902492681

ಎದುರಾದ ಪರಿಸ್ಥಿತಿಯ ನಡುವೆ ಸಂಸ್ಕಾರ, ಸಂಬಂಧಗಳನ್ನು ಗಟ್ಟಿಗೊಳಿಸಲು ಜನಪದ ಸಾಹಿತ್ಯ ಹಾಗೂ ಕಲೆಗಳು ತುಂಬ ಅವಶ್ಯವಾಗಿದೆ. ಸದೃಢ ಮನಸ್ಸನ್ನು ತಿಳಿಗೊಳಿಸಲು ಜನಪದ ಸಾಹಿತ್ಯ ಬೇಕು. ಎಲ್ಲ ಸಾಹಿತ್ಯಕ್ಕೆ ಜನಪದವೇ ತಾಯಿ ಬೇರು. ಜೀವನದ ಪ್ರತಿ ಹೆಜ್ಜೆಗಳಲ್ಲಿ ಜನಪದ ಸಾಹಿತ್ಯ ಮತ್ತು ಕಲೆಗಳು ಜೀವಂತಿಕೆ ಪಡೆದಿವೆ. ಹಸಿವು ಕಲಿಸಿದ ಪಾಠ ಯಾವ ವಿಶ್ವವಿದ್ಯಾಲಯವೂ ಕಲಿಸಲಾರದು. ಆದರೆ ಜನಪದ ಬದುಕು ಎಲ್ಲವೂ ಕಲಿಸಿ ಕೊಡುತ್ತದೆ ಎಂದರು. ಕಲ್ಯಾಣ ನಾಡಿನಲ್ಲಿ ಜನಪದ ಹಾಡುಗಳು  ಜೀವನದಲ್ಲಿ ತುಂಬಿ ತುಳುಕುತ್ತಿವೆ. ಅವುಗಳನ್ನು ಹಾಡುತ್ತಾ ಸವಿಯುತ್ತಾ ಸಾಗಬೇಕಾಗಿದೆ. ಇದೇ ಸಂದರ್ಭದಲ್ಲಿ ಹೊನಕಟ್ಟಿ ಅವರು ಜನಪದ ಹಾಡುಗಳನ್ನು ಹಾಡಿ ರಂಜಿಸಿದರು.

ಸಮ್ಮೇಳನಾಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ಸಾಹಿತಿ ಪ್ರೊ. ಶೋಭಾದೇವಿ ಚೆಕ್ಕಿ, ಜನಪದ ಕಲೆಗಳು ಇಂದು ನಮ್ಮ ಜೀವನ ಕಟ್ಟಿಕೊಟ್ಟು ಜೀವಂತಿಕೆಯಿಂದ ಇಟ್ಟಿದೆ. ನಾವು ಎಷ್ಟೇ ಸಾಧನೆ ಮಾಡಿದರೂ ಅದಕ್ಕೆ ಪೂರಕವಾದ ಸಾಹಿತ್ಯವೇ ಜನಪದವಾಗಿದೆ. ಇಂದು ಜನಪದ ಕಲೆ, ಸಾಹಿತ್ಯ ಮತ್ತು ಸಂಸ್ಕøತಿಗಳನ್ನು ನಶಿಸಿ ಹೋಗುತ್ತಿವೆ. ಇದಕ್ಕೆ ಬದಲಾದ ಜೀವನ ಶೈಲಿಯೂ ಕಾರಣವಾಗಿದೆ. ಕಣ್ಮರೆಯಾಗುತ್ತಿರುವ ಜನಪದ ಕಲೆ ಮತ್ತು ಸಾಹಿತ್ಯ ಉಳಿಸಿ ಬೆಳೆಸಬೇಕು ಎಂದು ಅವರು ಕರೆ ನೀಡಿದರು. ನಮ್ಮ ಮಕ್ಕಳಿಗೆ ಜನಪದದ ಬಗ್ಗೆ ತಿಳಿಸಿ ಜಾಗೃತಿ ಮೂಡಿಸಬೇಕಾಗಿದೆ ಎಂದು ಅವರು ಹೇಳಿದರು.

ಎಲ್ಲಾ ರಂಗಗಳಲ್ಲಿ ಜೀವ ತುಂಬಿದ ಜನಪದ ಸಾಹಿತ್ಯ ಇಂದು ಜನಪದರ ಬದುಕನ್ನು ಗೌರವಿಸಿದೆ. ಜೀವನ ಮತ್ತು ಜನಪದ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಈ ಭಾವ ಬೆಸುಗೆಯಾಗಿ ನಿಂತ ಜನಪದ ಹಾಡುಗಳು ನಾಲಿಗೆಯಿಂದ ನಾಲಿಗೆ ನದಿಯಂತೆ ಜುಳು ಜುಳು ನೀರಿನಂತೆ ಹರಿದು ಬಂದಿವೆ. ನಮ್ಮ ಮಕ್ಕಳಲ್ಲಿ ಕನ್ನಡ ಸಾಹಿತ್ಯ ಮತ್ತು ಜನಪದ ಕಲೆಗಳು ಪರಿಚಯಿಸಿ  ಕೊಟ್ಟರೆ, ಇನ್ನಷ್ಟು ಉಳಿಸಿ ಬೆಳೆಸಲು ಸಾಧ್ಯ ಎಂದು ಹೇಳಿದರು. ವಿವಿಧ ಜನಪದ ಹಾಡುಗಳನ್ನು ಹಾಡುತ್ತಾ, ಸಾಂದರ್ಭಿಕ ಸಂಗತಿಗಳನ್ನು ವಿವರಿಸಿದರು. ತೆರೆದ ಪುಸ್ತಕದಂತೆ ಜನಪದ ವೈವಿಧ್ಯತೆ ಕಾಣುತ್ತೇವೆ. ಜಾತ್ರೆ  ಉತ್ಸವ, ಮದುವೆ ಹಾಗೂ ಮನೆಯ ಸಂಭ್ರಮಾಚರಣೆಯಲ್ಲಿ ಜನಪದ ಹಾಡುಗಳು ಜೀವಂತಿಕೆ ಹೊಂದಿವೆ. ಮುಂದಿನ ಪೀಳಿಗೆಗೆ ಜನಪದ ಸಾಹಿತ್ಯ ಕಲೆಗಳ ಬಗ್ಗೆ ಪರಿಚಯಿಸುವ ಕಾರ್ಯ ನಡೆಯಬೇಕು ಎಂದು ತಿಳಿಸಿದರು.

ಜೀವನದ ರೀತಿ-ನೀತಿಗಳನ್ನು ಜನಪದ ಹಾಡುಗಳಿಂದ ಕಲಿಯಬಹುದಾಗಿದೆ. ಮೊಬೈಲ್ ಬೇಡ, ಜನಪದ ಬೇಕು. ಜನಪದ ಸಂಸ್ಕøತಿ ಉಸಿರಾಗಬೇಕು ಎಂದರು.

ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಇಂದಿನ ಆಧುನಿಕ ಜೀವನದ ಭರಾಟೆಯಲ್ಲಿ ಜಾನಪದ ಮರೆಯಾಗುತ್ತಿದ್ದು, ಇದನ್ನು ಉಳಿಸಿ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಅನೇಕ ರೀತಿಯ ಪ್ರಯತ್ನಗಳು ನಡೆಯಬೇಕಿದೆ. ಜಾನಪದದ ನಮ್ಮ ಭಾರತೀಯ ಸಂಸ್ಕøತಿಯ ಅಡಿಗಲ್ಲಾಗಿದೆ. ನಮ್ಮ ಸ್ವಂತಿಕೆಯನ್ನು ಉಳಿಸಿಕೊಳ್ಳಬೇಕಾದರೆ ಜಾನಪದ ಉಳಿಯಬೇಕು. ಹಾಗಾಗಿ ನಮ್ಮ ಬದುಕಿನ ಜೀವಾಳವಾದ ಜಾನಪದ ಸಂಪತ್ತನ್ನು ಉಳಿಸುವಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲೆಯಲ್ಲಿ ನಿರಂತರ ಕೈಂಕರ್ಯ ಸಲ್ಲಿಸುತ್ತಿದೆ ಎಂದರು.

ಸ್ವಾಗತ ಸಮಿತಿಯ ಅಧ್ಯಕ್ಷ ಮಹ್ಮದ್ ಇಬ್ರಾಹಿಂ, ಗೌರವಾಧ್ಯಕ್ಷ ಕಾಶಿನಾಥ ಪಲ್ಲೇರಿ, ಕಾರ್ಯಾಧ್ಯಕ್ಷ ಬಿ.ಎನ್. ಪುಣ್ಯಶೆಟ್ಟಿ, ಜಿಲ್ಲಾ ಕಸಾಪ ದ ಗೌರವ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಧರ್ಮಣ್ಣ ಎಚ್ ಧನ್ನಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ಪ್ರಮುಖರಾದ ರಾಜೇಂದ್ರ ಮಾಡಬೂಳ, ರವೀಂದ್ರಕುಮಾರ ಭಂಟನಳ್ಳಿ, ಗಣೇಶ ಚಿನ್ನಾಕಾರ, ಶಿಲ್ಪಾ ಜೋಶಿ, ಶಕುಂತಲಾ ಪಾಟೀಲ, ಜ್ಯೋತಿ ಕೋಟನೂರ, ಬಾಬುರಾವ ಪಾಟೀಲ, ಶರಣಬಸಪ್ಪ ನರೂಣಿ, ನಾಗಪ್ಪ ಸಜ್ಜನ್, ಎಸ್.ಕೆ. ಬಿರಾದಾರ, ಸುಮಾ ಚಿಮ್ಮನಚೋಡಕರ್, ಸುರೇಶ ಲೇಂಗಟಿ, ಸಂತೋಷ ಕುಡಳ್ಳಿ, ಪ್ರಭು ಫುಲಾರಿ, ಪ್ರಭುಲಿಂಗ ಮೂಲಗೆ, ಪ್ರಿಯಾಂಕಾ ಪಾಟೀಲ ಇತರರು ಉಪಸ್ಥಿತರಿದ್ದರು.

ಗಮನ ಸೆಳೆÉದ ಚಿಂತನಾಗೋಷ್ಠಿ : ನಂತರ ನಡೆದ ಚಿಂತನಾಗೋಷ್ಠಿಯಲ್ಲಿ ವೈದ್ಯ ಸಾಹಿತಿ ಡಾ. ಎಸ್.ಎಸ್. ಪಾಟೀಲ ಮಂದರವಾಡ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಚಿಂತನಾಗೋಷ್ಠಿಯಲ್ಲಿ ಜನಪದ ಸಾಹಿತ್ಯದ ತತ್ವ-ಸತ್ವ-ಮಹತ್ವ ವಿಷಯದ ಕುರಿತು ಡಾ. ರಾಜೇಂದ್ರ ಯರನಾಳೆ ಮಾತನಾಡಿ, ಜನಪದ ಸಾಹಿತ್ಯ ಜೀವನದುಸಿರು. ಆ ಉಸಿರು ಇರುವ ತನಕ ನಮ್ಮ ಬದುಕು ಹಸನಾಗಿರುತ್ತದೆ.

ಜಿಲ್ಲೆಯ ಜನಪದ ಸಾಹಿತ್ಯದ ವೈವಿಧ್ಯತೆ ಕುರಿತು ಡಾ. ಚಿತ್ಕಳಾ ಮಠಪತಿ,ಸುಖಾಮತ ಬಯಸುವುದು ಜನಪದ ಸಾಹಿತ್ಯ. ಇಂದು ನಮಗೆ ಸುಖ ಸಮತೋಷ ಹಾಗೂ ನೆಮ್ಮದಿ ಜೀವನವನ್ನು ಕಂಡು ಕೊಲ್ಳಬೇಕಾದರೆ ಜನಪದ ಪುರಕವಾಗಿದೆ ಎಂದರು. ಸಮ್ಮೇಳನಾಧ್ಯಕ್ಷರ ಬದುಕು-ಬರಹದ ಕುರಿತು ಡಾ. ಸುರೇಶ ಜಾಧವ ಮಾತನಾಡಿದರು. ಸಂಗೀತ ಕಲಾವಿದೆ ಗಿರೀಜಾ ಕರ್ಪೂರ, ಬಹುಭಾಷಾ ಕವಿ ಸುನೀಲ ಚೌಧರಿ ವೇದಿಕೆ ಮೇಲಿದ್ದರು.

ಜಿಲ್ಲೆಯ ವಿವಿಧ ಕಲಾವಿದರಾದ ಮಲ್ಲೇಶಿ ಭಜಂತ್ರಿ ಮಂಗಳೂರು ಹಾಗೂ ತಂಡ, ಕಲಾವತಿ ಶಾದಿಪೂರ, ಪದ್ಮಾವತಿ ಹಿರೇಮಠ ಕಲ್ಲೂರ, ದೇವೀಂದ್ರಪ್ಪ ಸಜ್ಜನ, ಎಂ.ಎನ್. ಸುಗಂಧಿ, ಶಿವಶರಣ ಹಡಪದ, ಚೇತನ್ ಯುಥ್ ಪೋರಮ್ ಶಾಲೆ, ಉದನೂರಿನ ಅಪ್ಪಾಜೀ ಗುರುಕುಲ ಶಾಲೆ, ರಾವೂರಿನ ಸಚ್ಚಿದಾನಂದ ಪ್ರೌಢ ಶಾಲೆ ಸೇರಿದಂತೆ ಅನೇಕ ಶಾಲಾ ಮಕ್ಕಳು ಮತ್ತು ಕಲಾವಿದರಿಂದ ಹಾಡು ಹಜ್ಜೆಗಳ ಸಂಭ್ರಮಕ್ಕೆ ಮೆರಗು ತಂದುಕೊಟ್ಟರು.

ಹಿರಿಯ ಲೇಖಕಿ ಡಾ. ವಿಶಾಲಾಕ್ಷಿ ಕರೆಡ್ಡಿ ಸಮಾರೋಪ ನುಡಿಗಳನ್ನಾಡಿದರು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯೆ ಡಾ. ಚಂದ್ರಕಲಾ ಬಿದರಿ, ಕರ್ನಾಟಕ ನಾಟಕ ಅಕಾಡೆಮಿಯ ಮಾಜಿ ಸದಸ್ಯ ಬಿ. ಸಂದೀಪ, ಆಕಾಶವಾಣಿ ಕೇಂದ್ರದ ಉದ್ಘೋಷಕಿ ಶಾರದಾ ಜಂಬಲದಿನ್ನಿ ವೇದಿಕೆ ಮೇಲಿದ್ದರು.

ತಮ್ಮ ಸಾಹಿತ್ಯದ ಮೂಲಕ ಜನಪದ ಕ್ಷೇತ್ರವನ್ನು ಶ್ರೀಮಂತಗೊಳಿಸಿರುವ ಹಿರಿಯ ಸಾಹಿತಿಗಳಾದ ಡಾ. ಸ್ವಾಮಿರಾವ ಕುಲಕರ್ಣಿ, ಡಾ. ಹನುಮಂತರಾವ ದೊಡ್ಡಮನಿ, ಬಾಬುರಾವ ಜಮಾದಾರ, ಡಾ. ಸುರೇಂದ್ರಕುಮಾರ ಕೆರಮಗಿ, ಡಾ. ಸಂಗೀತಾ ಹಿರೇಮಠ ಅವರನ್ನು ಇದೇ ಸಂದರ್ಭದಲ್ಲಿ ವಿಶೇಷವಾಗಿ ಸತ್ಕರಿಸಲಾಯಿತು.

ಸಮ್ಮೇಳನಾಧ್ಯಕ್ಷರ ಸಾಂಸ್ಕøತಿಕ ಮೆರವಣಿಗೆ: ಹೆಜ್ಜೆಗೆ ಗೆಜ್ಜಿ, ಗೆಜ್ಜೆಗೆ ನಾದ … ಎನ್ನುವಂತೆ ನಗರದಲ್ಲಿ ನಡೆದ ಜನಪದ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಭವ್ಯ ಮೆರವಣಿಗೆ ಕಣ್ಣಿಗೆ ಕಟ್ಟಿತು. ಸಮ್ಮೇಳನಾಧ್ಯಕ್ಷರು ಆಗಿರುವ ಸಾಹಿತಿ ಪ್ರೊ. ಶೋಭಾದೇವಿ ಚೆಕ್ಕಿ ಅವರ ಸಾಂಸ್ಕøತಿಕ ಮೆರವಣಿಗೆ ನಗರದ ಮಿನಿ ವಿಧಾನ ಸೌಧದಿಂದ ಹೊರಟಿತು. ಡೊಳ್ಳು ಮೇಳ, ಜಗ್ಗಲ;ಇಗಿ ವಾದನ, ಶಾಲಾ ಮಕ್ಕಳ ಕೋಲಾಟ, ನೃತ್ಯ ಎಲ್ಲವೂ ತಾಳಕ್ಕೆ ತಕ್ಕಮತೆ ನಡೆದವು. ಸಾರೋಟದಲ್ಲಿ ಆಸೀನರಾದ ಪ್ರೊ. ಶೋಭಾದೇವಿ ಚೆಕ್ಕಿ ಅವರು ಎಲ್ಲರತ್ತ ಕೈ ಬೀಸಿ ಕನ್ನಡದ ಝೇಂಕಾರ ಮೊಳಗಿಸಿದರು. ಜನಪದದ ಸೊಗಡನ್ನು ಪಸರಿಸಿದರು. ಮಿನಿ ವಿಧಾನ ಸೌಧದಿಂದ ಮುಖ್ಯ ರಸ್ತೆ ಮುಖಂತರ ಕನ್ನಡ ಭವನದ ಅಂಗಳಕ್ಕೆ ತಲುಪಿತು. ಜನಪದ ಕಲಾವಿದರ ನೃತ್ಯ ಜನಮನ ಸೆಳೆಯಿತು. ಕನ್ನಡದ ಜೈಕಾರ ಬಾನೆತ್ತರಕ್ಕೆ ಕೇಳಿಸಿತು.

ಸಮ್ಮೇಳನದಲ್ಲಿ ಒಟ್ಟು ಐದು ನಿರ್ಣಯಗಳನ್ನು ಶಿವರಾಜ ಅಂಡಗಿ, ಧರ್ಮಣ್ಣ ಎಚ್ ಧನ್ನಿ, ಶರಣರಾಜ ಛಪ್ಪರಬಂದಿ ಅವರು ಮಂಡಿಸಿದಾಗ ಪ್ರೇಕ್ಷಕರು ಚಪ್ಪಾಳೆ ತಟ್ಟಿ ಅವುಗಳನ್ನು ಅನುಮೋದಿಸಿದರು. ಜನಪದ ಕಲಾವಿದರಿಗೆ ನೀಡುವ ಮಾಶಾಸನ ಹೆಚ್ಚಿಸಬೇಕು. ಕಲ್ಯಾಣ ಕರ್ನಾಟಕ ಭಾಗದಲ್ಲಿನ ಜನಪದ ಕಲೆಗಳನ್ನು ಕುರಿತಾಗಿ ಸಂಶೋಧನಬಾ ಕಾರ್ಯಗಳು ನಡೆಯಬೇಕು.

ಆನಪದ ಕಲೆ, ಸಾಹಿತ್ಯ ಉಳಿಸಿ ಬೆಳೆಸುವ ಕಲಾವಿದರಿಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಕಲ್ಪಿಸಬೇಕು. ಹಾವೇರಿಯಲ್ಲಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಪ್ರಾದೇಶಿಕ ಕಛೇರಿಯನ್ನು ಕಲಬುರಗಿಯಲ್ಲಿ ಸ್ಥಾಪಿಸಬೇಕು.ಅನೇಕ ಜನಪದ ಕಲಾವಿದರಿಗೆ ಮಾಶಾಸನದ ಪರಿಚಯವಿಲ್ಲ. ಅವರನ್ನು ಗುರುತಿಸಿ ಅದರ ಲಾಭ ಮಾಡಿಕೊಡುವಲ್ಲಿ ಸಂಸ್ಥೆಗಳು ಸಹಕರಿಸಬೇಕು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here